ಆಹಾರ ಕಲಬೆರಕೆ ಮಾಡಿದರೆ ಜೀವಾವಧಿ ಶಿಕ್ಷೆಯಾಗಲಿ: ಬಾಬಾ ರಾಮ್‌ದೇವ್

By Web DeskFirst Published Jun 20, 2019, 1:58 PM IST
Highlights

ಆಹಾರ ಕಲಬೆರಕೆ ಮಾಡುವವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಜೀವಾವಧಿ ಶಿಕ್ಷೆ ಸೂಕ್ತ ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ. 

ನವದೆಹಲಿ [ಜೂ.20] : ಆಹಾರದಲ್ಲಿ ಕಲಬೆರಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕಾನೂನು ಬಲಪಡಿಸಬೇಕು ಎಂದು ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ. 

ಈ ರೀತಿ ಆಹಾರ ಕಲಬೆರಕೆ ಮಾಡುವವರಿಗೆ ಚೀನಾದಲ್ಲಿ ಅತ್ಯಂತ ಕಠಿಣ ಶಿಕ್ಷೆ ನೀಡಲಾಗುತ್ತದೆ. ಅದರಂತೆ ಭಾರತದಲ್ಲಿಯೂ ಕಠಿಣ ಕಾನೂನು ಜಾರಿ ಮಾಡಬೇಕು ಎಂದು ಮುಂಬೈ ನಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದಾರೆ. ಆಹಾರದ ಕಲಬೆರಕೆ ತಡೆಯಲು ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್  ಇನ್ನಷ್ಟು ಕಠಿಣ ನೀತಿ ಜಾರಿ  ಮಾಡಬೇಕು ಎಂದಿದ್ದಾರೆ.

ಇತ್ತೀಚಿಗೆ ತರಕಾರಿಗಳನ್ನು  ಬೆಳೆಯಲು ಹೆಚ್ಚಿನ ಪ್ರಮಾಣದಲ್ಲಿ ಫರ್ಟಿಲೈಸರ್ ಬಳಕೆ ಮಾಡಲಾಗುತ್ತದೆ. ಅದರಲ್ಲಿರುವ ರಾಸಾಯನಿಕಗಳು ಜನರ ದೇಹ ಸೇರುತ್ತವೆ.  ಇದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಎದುರಾಗುತ್ತದೆ. ಆದ್ದರಿಂದ ಕಲಬೆರಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.  ಅತ್ಯುಗ್ರ ಶಿಕ್ಷೆಯನ್ನು ಜಾರಿ ಮಾಡಬೇಕು.   ಜೀವಾವಧಿ ಶಿಕ್ಷೆ ಆಹಾರ ಕಲಬೆರಕೆ ಮಾಡುವವರಿಗೆ ಸೂಕ್ತ ಎಂದು ರಾಮ್ ದೇವ್ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಯಾವ ರಾಜಕಾರಣಿಗಳು ಯೋಗವನ್ನು ಕೈ ಬಿಟ್ಟರೋ ಅಂತವರು ಚುನಾವಣೆಯಲ್ಲಿ ಸೋತರು ಎಂದ ಅವರು ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. 

ಹಿಂದೆ ಇಂದಿರಾ ಜಿ, ನೆಹರೂ ಜಿ ಅವರು ಯೋಗಾಭ್ಯಾಸ ಮಾಡುತ್ತಿದ್ದರು. ಆದರೆ ಅವರ ಮುಂದಿನ ಪೀಳಿಗೆ ಯೋಗವನ್ನು ಕೈ ಬಿಟ್ಟತು. ಇದರಿಂದಲೇ ಅವರಿಂದ  ಅಧಿಕಾರವೂ ಕೈ ತಪ್ಪಿತು.  ಯಾರು ಯೋಗ ಮಾಡುತ್ತಾರೋ ಅಂತಹ ರಾಜಕಾರಣಿಗಳಿಗೆ ಅಚ್ಚೆ ದಿನ್ ಬಂತು ಎಂದರು. ಅಲ್ಲದೇ ಸಾರ್ವಜನಿಕವಾಗಿ ಯೋಗಕ್ಕೆ ಇಷ್ಟು ಪ್ರಮಾಣದಲ್ಲಿ ಪ್ರಚಾರ ನೀಡಿದ ಪ್ರಧಾನಿಗಳಲ್ಲಿ ನರೇಂದ್ರ ಮೋದಿ ಓರ್ವರೇ ಎಂದು ರಾಮ್ ದೇವ್ ಹೇಳಿದರು.

click me!