
ನವದೆಹಲಿ : ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ ಸಂಬಂಧ, ಜಸ್ಟಿಸ್ ನಾಗಮೋಹನ್ ದಾಸ್ ಸಮಿತಿ ನೀಡಿದ್ದ ವರದಿಯನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಆಡಳಿತ, ಪೂಜಾ ಕೈಂಕರ್ಯ, ನಮಾಜ್ ಸೇರಿದಂತೆ ಎಲ್ಲ ಕಾರ್ಯ ಚಟುವಟಿಕೆಗಳ ಹೊಣೆಯನ್ನೂ ಕೂಡ ಶಾಖಾದ್ರಿ ಹೊಣೆಗೆ ನೀಡಲಾಗಿತ್ತು.
ಇದೀಗ ಹಿಂದೂ ಮುಸ್ಲಿ ಎರಡೂ ಧರ್ಮಗಳ ಧಾರ್ಮಿಕ ಕೆಲಸಗಳನ್ನು ನಿರ್ವಹಿಸಲು ರಾಜ್ಯ ಸರ್ಕಾರ ನೇಮಿಸಿದ್ದ ಸಮಿತಿಯ ವರದಿಗೆ ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ. ನ್ಯಾ. ರಂಜನ್ ಗೊಗಾಯ್, ನ್ಯಾ. ಭಾನುಮತಿ ಅವರಿದ್ದ ನ್ಯಾಯಪೀಠದಿಂದ ಈ ಬಗ್ಗೆ ತನ್ನ ನಿರ್ಧಾರವನ್ನು ಹೊರಡಿಸಿದೆ.
ಜಸ್ಟಿಸ್ ನಾಗಮೋಹನ್ ದಾಸ್, ರಹಮತ್ ತರಿಕೆರೆ ಮತ್ತು ಷ ಶೆಟ್ಟರ್ ಅವರು ಸಮಿತಿಯಲ್ಲಿದ್ದರು. ರಾಜ್ಯ ಸರ್ಕಾರ ಈ ಸಮಿತಿ ನೀಡಿದ್ದ ವರದಿಯನ್ನು ಒಪ್ಪಿಕೊಂಡು ಸುಪ್ರೀಂಕೋರ್ಟ್ ಗೆ ಸಲ್ಲಿಸಿತ್ತು. ಇದೀಗ ಈ ವರದಿಯನ್ನು ಸುಪ್ರೀಂಕೋರ್ಟ್ ಕೂಡ ಒಪ್ಪಿಕೊಂಡಿದೆ.
ಸಮಿತಿ ವರದಿಯ ಪ್ರಮುಖ ಅಂಶ : ಬಾಬಾ ಬುಡನ್ ಗಿರಿಯ ಧಾರ್ಮಿಕ ಸ್ಥಳದ ಆಸ್ತಿ ವಕ್ಫ್ ಮಂಡಳಿಗೆ ಸೇರಿದ್ದಲ್ಲ. ಇದು ಮುಜರಾಯಿ ಇಲಾಖೆಗೆ ಸೇರಿದೆ. ಇದು ದತ್ತಪೀಠ ಅಲ್ಲ. ಇದನ್ನು ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಎಂದು ಕರೆಯಬೇಕು. ಇದು ಸರ್ಕಾರಿ ದಾಖಲೆಗಳಲ್ಲಿ ಇದೇ ಹೆಸರು ಇದ್ದು, ಶಾಖಾದ್ರಿ ಇದರ ಆಡಳಿತಾಧಿಕಾರಿಯಾಗಿದ್ದಾರೆ.
ಅವರನ್ನು ಸಜ್ಜದ್ ನಶೀನ್ ಎಂದು ಕರೆಯಲಾಗುತ್ತದೆ. ಅವರ ಹುದ್ದೆ ವಂಶ ಪಾರಂಪರ್ಯದ್ದು ನಂದಾದೀಪ ಹಚ್ಚುವುದು, ಪೂಜೆ, ಧ್ವಜ ಹಾರಿಸುವುದು, ನಗಾರಿ ಬಾರಿಸುವುದು, ಗೋರಿಗೆ ಆಹಾರ ಅರ್ಪಣೆ, ಹೂವು ಹಾಕುವುದು, ಫತೇಹ ಓದುವುದು, ಗಂಧನ ಲೇಪಿಸುವುದು, ಊದುಬತ್ತಿ ಹಚ್ಚುವುದು, ಭಕ್ತಾದಿಗಳಿಗೆ ತೀರ್ಥ ನೀಡುವುದು ಶಾಖಾದ್ರಿ ಕೆಲಸವಾಗಿವೆ.
ಎರಡೂ ಧರ್ಮೀಯರಿಗೆ ಆಡಳಿತಾಧಿಕಾರಿ ಶಾಖಾದ್ರಿಯೇ ಆಗಿರುತ್ತಾರೆ. ಆಗಸ್ಟ್ 15, 1947ರ ಹಿಂದಿದ್ದ ರೀತಿಯಲ್ಲಿ ಧಾರ್ಮಿಕ ಕೈಂಕರ್ಯ ಮತ್ತು ಆಡಳಿತ ನಡೆಯಬೇಕು. ಆಡಳಿತ ಅವ್ಯವಹಾರ ನಡೆದರೆ ಮುಜರಾಯಿ ಇಲಾಖೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಈ ವರದಿಯಲ್ಲಿ ತಿಳಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.