ಅಂಡರ್‌ವೇರ್ ಹೇಳಿಕೆ: ಕ್ಷಮೆ ಕೇಳಲು ಆಜಂ ಖಾನ್ ನಕಾರ

By Web DeskFirst Published Apr 16, 2019, 8:09 AM IST
Highlights

‘ಜಯಪ್ರದಾ ಧರಿಸಿದ್ದು ಖಾಕಿ ಅಂಡರ್‌ವೇರ್‌’ ಹೇಳಿಕೆ ವಿವಾದ | ಖಾನ್‌ ಹೇಳಿಕೆಯ ವರದಿ ಕೇಳಿದ ಚು. ಆಯೋಗ | ಎಫ್‌ಐಆರ್‌ ದಾಖಲು | ಪತ್ರಕರ್ತರು ಕೇಳಿದ ಪ್ರಶ್ನೆಗೆ ಉಡಾಫೆ ಉತ್ತರ ನೀಡಿದ ಖಾನ್‌

ಲಖನೌ (ಏ. 16): ಸಮಾಜವಾದಿ ಪಕ್ಷದ ಮುಖಂಡ ಹಾಗೂ ಉತ್ತರಪ್ರದೇಶದ ರಾಂಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಜಂ ಖಾನ್‌ ಅವರು ತಮ್ಮ ಬಿಜೆಪಿ ಪ್ರತಿಸ್ಪರ್ಧಿ ಜಯಪ್ರದಾ ಅವರ ವಿರುದ್ಧ ನೀಡಿದ ಕೀಳು ಹೇಳಿಕೆಗೆ ಸಂಬಂಧಿಸಿದಂತೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದರೂ, ಕ್ಷಮೆ ಕೇಳಲು ಖಾನ್‌ ನಿರಾಕರಿಸಿದ್ದಾರೆ. ಇದೇ ವೇಳೆ ಖಾನ್‌ ಅವರ ಬೆನ್ನಿಗೆ ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಕೂಡ ನಿಂತಿದ್ದು, ‘ಆಜಂ ಅವರ ಹೇಳಿಕೆಯು ಜಯಪ್ರದಾ ಅವರನ್ನು ಉದ್ದೇಶಿಸಿ ಅಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ.

‘ಜಯಪ್ರದಾ ಧರಿಸುವುದು ಖಾಕಿ ಅಂಡರ್‌ವೇರ್‌’ ಎಂಬ ಖಾನ್‌ ಹೇಳಿಕೆ ವಿರುದ್ಧ ರಾಂಪುರದಲ್ಲಿ ಸೆಕ್ಷನ್‌ 509 (ಮಹಿಳೆಯ ಚರಿತ್ರಹರಣ ಮಾಡುವಂತಹ ಹೇಳಿಕೆ/ಕೃತ್ಯ) ಅಡಿ ಪ್ರಕರಣ ದಾಖಲಾಗಿದೆ. ಚುಣಾವಣಾ ಆಯೋಗ ಕೂಡ ಖಾನ್‌ ಹೇಳಿಕೆಯ ವಿಡಿಯೋ ಬಯಸಿದ್ದು, ಉತ್ತರಪ್ರದೇಶ ಚುನಾವಣಾ ಆಯೋಗದಿಂದ ವರದಿ ಕೇಳಿದೆ. ಇನ್ನೊಂದೆಡೆ ಚುನಾವಣೆಗೆ ನಿಂತಿರುವ ಖಾನ್‌ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಜಂ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಆದರೆ ಖಾನ್‌ ಹೇಳಿಕೆಯ ವಿರುದ್ಧ ತಿರುಗಿಬಿದ್ದಿರುವ ಜಯಪ್ರದಾ, ‘ಆಜಂ ಲಕ್ಷ್ಮಣರೇಖೆಯನ್ನು ಮೀರಿದ್ದಾರೆ. ಅವರು ಎಂದೂ ಇನ್ನು ನನ್ನ ಸೋದರನಲ್ಲ. ಈವರೆಗೂ ಸೋದರ ಎಂದು ಸುಮ್ಮನಿದ್ದೆ. ಇನ್ನೆಂದೂ ಸುಮ್ಮನಿರಲ್ಲ. ನಾನು ಸತ್ತರೇ ನಿಮಗೆ ಸಮಾಧಾನವಾ ಆಜಂಖಾನ್‌?’ ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದ್ದಾರೆ. ಅಲ್ಲದೆ, ‘ಸ್ಪರ್ಧೆಯಿಂದ ಆಜಂ ಖಾನ್‌ರನ್ನು ನಿರ್ಬಂಧಿಸಬೇಕು’ ಎಂದೂ ಆವರು ಆಗ್ರಹಿಸಿದ್ದಾರೆ.

ಕ್ಷಮೆಗೆ ನಕಾರ:

ಆದರೆ ಇಷ್ಟೆಲ್ಲ ಆದರೂ ಹೇಳಿಕೆಯ ಬಗ್ಗೆ ಕ್ಷಮೆ ಕೇಳಲು ಆಜಂ ನಿರಾಕರಿಸಿದ್ದಾರೆ. ಮಧ್ಯಪ್ರದೇಶದ ವಿದಿಶಾಗೆ ಮುಸ್ಲಿಂ ಮುಖಂಡರೊಬ್ಬರ ಅಂತ್ಯಕ್ರಿಯೆಗೆ ಆಗಮಿಸಿದ್ದ ಖಾನ್‌ರನ್ನು ಸುದ್ದಿಗಾರರು ಈ ವಿವಾದದ ಬಗ್ಗೆ ಸ್ಪಷ್ಟನೆ ಕೇಳಿದರು. ಆಗ ಉಡಾಫೆ ಉತ್ತರ ನೀಡಿದ ಖಾನ್‌, ತಮಗೆ ಪ್ರಶ್ನೆ ಕೇಳಿದ ವರದಿಗಾರನ ಮೇಲೆಯೇ ಹರಿಹಾಯ್ದು, ‘ನಿನ್ನ ಅಪ್ಪನ ಅಂತ್ಯಕ್ರಿಯೆಗೆ ಬಂದಿದ್ದೇನೆ’ ಎಂಬ ಇನ್ನೊಂದು ಉದ್ಧಟತನದ ಹೇಳಿಕೆ ನೀಡಿ ಹೊರಟುಹೋದರು.

ಖಾನ್‌ ಹೇಳಿದ್ದೇನು?:

ಭಾನುವಾರ ಅಖಿಲೇಶ್‌ ಯಾದವ್‌ ಸಮ್ಮುಖದಲ್ಲೇ ಚುನಾವಣಾ ಭಾಷಣ ಮಾಡಿದ್ದ ಆಜಂ ಖಾನ್‌, ‘ನಿಮಗೆ (ಜನರಿಗೆ) ಅಸಲಿಯತ್ತಿನ ಬಗ್ಗೆ ತಿಳಿಯಲು 17 ವರ್ಷ ಬೇಕಾದವು. ಆದರೆ ನನಗೆ 17 ದಿನದಲ್ಲೇ ಆಕೆಯ ಕೆಳಗಿನ ಅಂಡರ್‌ವೇರ್‌ ಖಾಕಿ ಬಣ್ಣದ್ದೆಂದು ತಿಳಿಯಿತು’ ಎಂದು ಜಯಪ್ರದಾ ಹೆಸರೆತ್ತದೇ ಆಜಂ ವಿವಾದಿತ ಹೇಳಿಕೆ ನೀಡಿದ್ದರು.

click me!