ಬಡ ಮಕ್ಕಳಿಗೆ ಅಕ್ಷರ ಕಲಿಸಿದ್ದಕ್ಕೆ ನೋಟಿಸ್!

Published : Sep 27, 2017, 11:09 AM ISTUpdated : Apr 11, 2018, 12:37 PM IST
ಬಡ ಮಕ್ಕಳಿಗೆ ಅಕ್ಷರ ಕಲಿಸಿದ್ದಕ್ಕೆ ನೋಟಿಸ್!

ಸಾರಾಂಶ

ಏನಿದು ಅವಾಂತರ? ಏಷ್ಯಾದ ಅತಿದೊಡ್ಡ ಎಪಿಎಂಸಿ ಖ್ಯಾತಿಯ ಹುಬ್ಬಳ್ಳಿ ಎಪಿಎಂಸಿಯಲ್ಲಿ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆ ಇದೆ.  ‘ಕನ್ನಡಪ್ರಭ’ ವರ್ಷದ ವ್ಯಕ್ತಿ ರಾಮು ಮೂಲಗಿ, ಎಸ್‌ಡಿಎಂಸಿ ಸದಸ್ಯರ ಶ್ರಮದಿಂದಾಗಿ 192 ಮಕ್ಕಳು ಓದುತ್ತಿದ್ದಾರೆ. 8ನೇ ತರಗತಿ ಆರಂಭಕ್ಕೆ ಶಾಲೆ ಕೋರಿಕೆ ಇಟ್ಟಿತ್ತು. ಬಿಇಒ ಹಂಚಾಟೆ ಶೀಘ್ರದಲ್ಲೇ ಆದೇಶ ನೀಡುವುದಾಗಿ ಹೇಳಿದ್ದರು. ಅದನ್ನು ನಂಬಿ 8ನೇ ತರಗತಿಗೆ ಪ್ರವೇಶ ನೀಡಿದ ಶಾಲೆ 78 ಮಕ್ಕಳಿಗೆ ಶಿಕ್ಷಣ ಬೋಧಿಸುತ್ತಿದೆ. ಈ ನಡುವೆ ಹಂಚಾಟೆ ವರ್ಗವಾಗಿದ್ದಾರೆ.

ಹುಬ್ಬಳ್ಳಿ: ಮಹಿಳಾ ಸಾಕ್ಷರತೆ ಹೆಚ್ಚಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ‘ಬೇಟಿ ಬಚಾವೋ ಬೇಟಿ ಪಢಾವೋ...’, ರಾಜ್ಯ ಸರ್ಕಾರ ‘ಬಾ ಬಾಲೆ ಶಾಲೆಗೆ..’ ಯೋಜನೆಗಳನ್ನು ಜಾರಿಗೆ ತಂದು ಸಾವಿರಾರು ಕೋಟಿ ಸುರಿಯುತ್ತಿದ್ದರೆ, ಅಕ್ಷರ ಕಲಿಯುವ ಆಸಕ್ತಿಯಿಂದ ಇಲ್ಲಿನ ಎಪಿಎಂಸಿ ಆವರಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿರುವ 26 ಬಾಲಕಿಯರೂ ಸೇರಿ ಒಟ್ಟು 78 ಮಕ್ಕಳನ್ನು ಅಧಿಕಾರಿಗಳೇ ನಿಂತು ಹೊರದಬ್ಬುತ್ತಿದ್ದಾರೆ.

ಓದಲು ಮಕ್ಕಳೇ ಬರುತ್ತಿಲ್ಲ ಎನ್ನುವ ಕಾರಣಕ್ಕೆ ಸರ್ಕಾರ ತನ್ನ ಶಾಲೆಗಳಿಗೆ ಬೀಗ ಹಾಕಿ ನಿಟ್ಟುಸಿರು ಬಿಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದ್ದರೆ, ಅಕ್ಷರ ದೀಕ್ಷೆ ಬೇಡಿ ಆಸಕ್ತಿಯಿಂದ ಶಾಲೆಗೆ ಬಂದಿರುವ ಮಕ್ಕಳನ್ನು ಒತ್ತಾಯಪೂರ್ವಕ ಹೊರದಬ್ಬುವ ಹುನ್ನಾರ ಇದೆನ್ನುವ ಆರೋಪ ಕೇಳಿಬಂದಿದೆ.

ಹಮಾಲಿ ಮಕ್ಕಳ ಶಾಲೆ: ಏಷ್ಯಾದ ಅತಿ ದೊಡ್ಡ ಎಪಿಎಂಸಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಹುಬ್ಬಳ್ಳಿ ಎಪಿಎಂಸಿ’ಯಲ್ಲಿ ಸಾವಿರಾರು ಹಮಾಲಿ ಕಾರ್ಮಿಕರಿದ್ದಾರೆ. ಅವರಿಗಾಗಿ ಸರ್ಕಾರ 300ಕ್ಕೂ ಹೆಚ್ಚು ವಸತಿಗಳನ್ನು ನಿರ್ಮಿಸಿದೆ. ಜತೆಗೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1999ರಲ್ಲಿ ಅಲ್ಲೊಂದು ಕಿರಿಯ ಪ್ರಾಥಮಿಕ ಶಾಲೆ ತೆರೆದಿದೆ. ನಂತರ ವಸತಿ ನಿಲಯವನ್ನೂ ಆರಂಭಿಸಿದೆ. ಈಗದು ಹಿರಿಯ ಪ್ರಾಥಮಿಕ ಶಾಲೆಯಾಗಿದೆ. ಇಲ್ಲೀಗ 192 ಮಕ್ಕಳು ಓದುತ್ತಿದ್ದಾರೆ.

ಸರ್ಕಾರಿ ಶಾಲೆ ಎನ್ನುವ ನಾಮಫಲಕ, ಬೋಧಿಸುವ ಶಿಕ್ಷಕರನ್ನು ಹೊರತುಪಡಿಸಿದರೆ ಶಾಲೆಯಲ್ಲಿರುವ ಎಲ್ಲ ಭೌತಿಕ ಸಾಮಗ್ರಿ, ಆಸ್ತಿಗಳು ದೇಣಿಗೆ ಬಂದವುಗಳು. ಪ್ರಧಾನ ಶಿಕ್ಷಕ ಡಾ.ರಾಮು ಮೂಲಗಿ ಮತ್ತು ಎಸ್‌ಡಿಎಂಸಿ ಸದಸ್ಯರ ಪರಿಶ್ರಮ ದಿಂದಾಗಿ 8 ಗುಂಟೆ ಜಾಗ, 8 ಕೋಣೆಗಳ ಶಾಲಾ ಕಟ್ಟಡ, ಎರಡು ಪ್ರತ್ಯೇಕ ಶೌಚಾಲಯಗಳು, ಎತ್ತರದ ಕಂಪೌಂಡ್, ಪೀಠೋಪಕರಣ-ಪಾಠೋಪಕರಣಗಳು, ಕುಡಿಯುವ ನೀರಿನ ವ್ಯವಸ್ಥೆ, ಆಟದ ಸಾಮಗ್ರಿ, ಬಟ್ಟೆ ಇತ್ಯಾದಿಗಳನ್ನು ದಾನಿಗಳೇ ನೀಡಿದ್ದಾರೆ.

ಶಿಕ್ಷಕ ರಾಮು ಮೂಲಗಿ ಅವರ ಮಾನವೀಯ ಸೇವೆ ಪರಿಗಣಿಸಿ ‘ಕನ್ನಡಪ್ರಭ’ 2008ರಲ್ಲಿ ‘ವರ್ಷದ ವ್ಯಕ್ತಿ ಪ್ರಶಸ್ತಿ’ ನೀಡಿ ಗೌರವಿಸಿದಾಗ ಈ ಶಾಲೆ ರಾಜ್ಯಮಟ್ಟದಲ್ಲಿ ಗಮನ ಸೆಳೆಯಿತು. ಶಾಲೆಯಲ್ಲಿನ ಸೌಲಭ್ಯ ಮತ್ತು ಮಾನವೀಯ ಕಳಕಳಿಯಿಂದ ಶಿಕ್ಷಣ ನೀಡುವ ಪರಿಯನ್ನು ಗಮನಿಸಿದ ಬೆಳಗಾವಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಕೊಪ್ಪಳ, ದಾವಣಗೆರೆ, ಹಾವೇರಿ ಎಪಿಎಂಸಿ ಹಮಾಲಿ ಕಾರ್ಮಿಕರು ತಮ್ಮ ಮಕ್ಕಳನ್ನೂ ಇಲ್ಲಿಗೆ ಸೇರಿಸಿದ್ದಾರೆ.

ನೋಟಿಸ್ ನೀಡಿದ್ದಾರೆ: ತಮ್ಮ ಮಕ್ಕಳು 7ನೇ ತರಗತಿಗೆ ಬರುತ್ತಿದ್ದಂತೆ ಮತ್ತು ಇದೇ ವೇಳೆಗೆ ಹುಬ್ಬಳ್ಳಿ-ಧಾರವಾಡ ಮಧ್ಯೆ ಬಿಆರ್‌ಟಿಎಸ್ ಹೆದ್ದಾರಿ ಕಾಮಗಾರಿ ಆರಂಭವಾಗಿದ್ದರಿಂದ ಹಮಾಲಿ ಕಾರ್ಮಿಕರು ‘ಆ ಹೆದ್ದಾರಿ ದಾಟಿ ಹೈಸ್ಕೂಲಿಗೆ ಹೋಗಲು ಮಕ್ಕಳಿಗೆ ಆಗಲ್ಲ. ಇಲ್ಲೇ 8ನೇ ತರಗತಿ ಆರಂಭಿಸಿ’ ಎಂದು ಎಸ್‌ಡಿಎಂಸಿ ಮೂಲಕ ಡಿಡಿಪಿಐಗೆ ಮನವಿ ಮಾಡಿದ್ದರು. ಡಿಡಿಪಿಐ ನಿರ್ದೇಶನದಂತೆ ಶಾಲೆಗೆ ಪರಿಶೀಲನೆಗೆ ಬಂದಿದ್ದ ಅಂದಿನ ಬಿಇಒ ಎಸ್.ಎನ್. ಹಂಚಾಟೆ ಮಕ್ಕಳ ಸಂಖ್ಯೆ ಕಂಡು ಸಂತಸ ವ್ಯಕ್ತಪಡಿಸಿ, 8ನೇ ತರಗತಿ ಆರಂಭಿಸಿ ಶೀಘ್ರದಲ್ಲಿ ಆದೇಶ ಕಳಿಸುತ್ತೇನೆ ಎಂದು ಹೇಳಿದ್ದರು. ಅದರಂತೆ ಇಲ್ಲಿ 8ನೇ ತರಗತಿಗೆ 26 ಹೆಣ್ಣು ಮಕ್ಕಳು, 18 ಗಂಡು ಮಕ್ಕಳಿಗೆ ಪ್ರವೇಶ ನೀಡಲಾಗಿದೆ.

ಈ ಮಧ್ಯೆ, ಸಮಾಜ ಕಲ್ಯಾಣ ಇಲಾಖೆ ತನ್ನ ವಸತಿ ನಿಲಯವನ್ನು ಮೇಲ್ದರ್ಜೆಗೇರಿಸಿ 1 ರಿಂದ 4ನೇ ತರಗತಿವರೆಗಿನ ಮಕ್ಕಳಿಗೆ ಪ್ರವೇಶವಿಲ್ಲ ಎಂದು ಸಾರಿದಾಗ ಈ ಮಕ್ಕಳು ಅಕ್ಷರದಿಂದ ವಂಚಿತರಾಗಬಾರದೆಂದು ಎಸ್‌ಡಿಎಂಸಿ ಸದಸ್ಯರು ಎಪಿಎಂಸಿ ವರ್ತಕರ ನೆರವಿನಿಂದ 78 ಮಕ್ಕಳನ್ನು ಶಾಲೆಯಲ್ಲೇ ಉಳಿಸಿ ಕೊಂಡು ಊಟ, ವಸತಿ ಕಲ್ಪಿಸಿದ್ದಾರೆ. ಒಮ್ಮೊಮ್ಮೆ ಮಕ್ಕಳ ಊಟಕ್ಕೆ ಕೊರತೆಯಾದಾಗ ಶಿಕ್ಷಕ ಮೂಲಗಿ ತಮ್ಮ ಸಂಬಳ ವ್ಯಯಿಸುತ್ತಾರೆ. ಅದೂ ಮಿಕ್ಕಿದಾಗ ಅಕ್ಷರಶಃ ಭಿಕ್ಷೆ ಬೇಡಿ ಈ ಮಕ್ಕಳನ್ನು ಸಲಹುತ್ತಿದ್ದಾರೆ.

ಈ ಮಧ್ಯೆ, ಸಂದರ್ಭದಲ್ಲಿ ಬಿಇಒ ಹಂಚಾಟೆ ವರ್ಗವಾಗಿದ್ದಾರೆ. ಆದರೆ ಅವರ ಭರವಸೆಯಂತೆ 8ನೇ ತರಗತಿಯ ಪರವಾನಗಿ ಬಂದಿಲ್ಲ. ಹೊಸದಾಗಿ ಬಂದಿರುವ ಬಿಇಒ ಸಾವ್‌ಕಾರ ಇತ್ತೀಚೆಗೆ ಶಾಲೆಗೆ ಭೇಟಿ ನೀಡಿ ‘ಸರ್ಕಾರದ ಪರವಾನಗಿ ಇಲ್ಲದೇ 8ನೇ ವರ್ಗ ನಡೆಸಿದ್ದೀರಿ, ಶಾಲಾ ಕಟ್ಟಡದಲ್ಲಿ ಅಕ್ರಮವಾಗಿ ಹಾಸ್ಟೆಲ್ ನಡೆಸುತ್ತಿದ್ದೀರಿ. ಇದು ಕರ್ತವ್ಯ ಲೋಪ, ನಿಮ್ಮ ಮೇಲೆ ಕಾನೂನು ಕ್ರಮ ಕೈಕೊಳ್ಳಬಾರದೇಕೆ ? ವಾರದೊಳಗೆ ಉತ್ತರಿಸಿ’ ಎಂದು ಪ್ರಧಾನ ಶಿಕ್ಷಕ ಡಾ.ರಾಮು ಮೂಲಗಿಗೆ ನೋಟಿಸ್ ನೀಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡ ಭಾಷೆ ಕಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ
ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೋಡಲ್‌ ಅಧಿಕಾರಿ ನೇಮಕ: ಸಚಿವ ದಿನೇಶ್‌ ಗುಂಡೂರಾವ್‌