ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಅವರ ತಪ್ಪು ನಿರ್ಧಾರಗಳನ್ನು ವಾಜಪೇಯಿ ಅವರು ಕಟುವಾಗಿ ಟೀಕಿಸುತ್ತಿದ್ದರು. ಹಾಗೆಯೇ ಇಂದಿರಾ ಅವರು ಒಳ್ಳೆಯ ತೀರ್ಮಾನಗಳನ್ನು ತೆಗೆದುಕೊಂಡಾಗ ಅದನ್ನು ಹೊಗಳಲೂ ಹಿಂಜರಿಯುತ್ತಿರಲಿಲ್ಲ. ಈ ಇಬ್ಬರ ನಡುವೆ ಸಂಸತ್ತಿನಲ್ಲಿ ಹಲವು ಚರ್ಚೆಗಳು, ವಾಗ್ವಾದಗಳು ನಡೆದಿವೆ.
ಬೆಂಗಳೂರು (ಆ. 17): ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಅವರ ತಪ್ಪು ನಿರ್ಧಾರಗಳನ್ನು ವಾಜಪೇಯಿ ಅವರು ಕಟುವಾಗಿ ಟೀಕಿಸುತ್ತಿದ್ದರು. ಹಾಗೆಯೇ ಇಂದಿರಾ ಅವರು ಒಳ್ಳೆಯ ತೀರ್ಮಾನಗಳನ್ನು ತೆಗೆದುಕೊಂಡಾಗ ಅದನ್ನು ಹೊಗಳಲೂ ಹಿಂಜರಿಯುತ್ತಿರಲಿಲ್ಲ.
ಈ ಇಬ್ಬರ ನಡುವೆ ಸಂಸತ್ತಿನಲ್ಲಿ ಹಲವು ಚರ್ಚೆಗಳು, ವಾಗ್ವಾದಗಳು ನಡೆದಿವೆ. ಇಬ್ಬರೂ ಅತ್ಯುತ್ತಮ ವಾಗ್ಮಿಗಳೆ. 1970 ರ ಫೆ.26 ರಂದು ಸಂಸತ್ತಿನಲ್ಲಿ ಈ ಇಬ್ಬರ ನಡುವೆ ಹೀಗೊಂದು ವಾಕ್ಸಮರ ನಡೆದಿತ್ತು. ಇಂದಿರಾ ಗಾಂಧಿ ಅವರು ವಾಜಪೇಯಿ ಅವರ ಪಕ್ಷ ಜನಸಂಘವನ್ನು ಐದೇ ನಿಮಿಷದಲ್ಲಿ ನೋಡಿಕೊಳ್ಳುವುದಾಗಿ ಹೇಳಿದ್ದರು.
ಅದಕ್ಕೆ ವಾಜಪೇಯಿ ಕೊಟ್ಟ ಉತ್ತರ ಹೀಗಿತ್ತು:
ಪ್ರಧಾನಿಗಳು ಆಡುವ ಮಾತೇ ಇದು? ನಾವು ಸೈದ್ಧಾಂತಿಕ ಹೋರಾಟದಲ್ಲಿ ತೊಡಗಿದ್ದೇವೆ. ಆ ಮಟ್ಟದಲ್ಲೇ ನಮ್ಮ ಜತೆ ಹೋರಾಡಿ. ಜನ ತಿರುಗಿಬಿದ್ದರೆ ನೀವು ಸೋಲುತ್ತೀರಿ. ‘ಐದೇ ನಿಮಿಷದಲ್ಲಿ ಜನಸಂಘ ನೋಡಿಕೊಳ್ಳುತ್ತೇನೆ’ ಎನ್ನುವ ನೀವು ಐದು ನಿಮಿಷದಲ್ಲಿ ನಿಮ್ಮ ತಲೆಗೂದಲು ಸರಿಪಡಿಸಿಕೊಳ್ಳುವುದಕ್ಕೇ ಆಗುವುದಿಲ್ಲ. ಇನ್ನು ನಮ್ಮನ್ನು ಹೇಗೆ ನೋಡಿಕೊಳ್ಳುತ್ತೀರಿ. ನೆಹರು ಅವರು ಕೋಪ ಮಾಡಿಕೊಂಡಾಗ ಕಡೇ ಪಕ್ಷ ಒಳ್ಳೆಯ ಭಾಷಣವನ್ನಾದರೂ ಮಾಡುತ್ತಿದ್ದರು. ಅವರನ್ನು ನಾವು ಗೋಳು ಹೊಯ್ದುಕೊಳ್ಳುತ್ತಿದ್ದೆವು. ಆದರೆ, ಆ ರೀತಿ ಇಂದಿರಾಗೆ ಮಾಡಲು ಆಗೋದಿಲ್ಲ. ಏಕೆಂದರೆ, ಅವರು ಕೋಪಗೊಳ್ಳುತ್ತಾರೆ.
ಇಂದಿರಾ:
ವಾಜಪೇಯಿ ಸ್ವದೇಶೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ. ಅದು ಕೋಮುವಾದ ಹರಡುತ್ತದೆ.
ವಾಜಪೇಯಿ:
ಜನಸಂಘದ ಸ್ವದೇಶೀಕರಣ ಕಾರ್ಯಕ್ರಮದ ಬಗ್ಗೆ ಪ್ರಧಾನಿ ಅವರಿಗೆ ಈಚಿನ ದಿನಗಳಲ್ಲಿ ಆಗಿಬರುತ್ತಿಲ್ಲ. ಎಲ್ಲಿಗೆ ಹೋದರೂ ಅವರು ನಮ್ಮ ಮೇಲೆ ಎರಗಿ ಬರುತ್ತಾರೆ, ಆ ಮೂಲಕ ನಮಗೆ ಪುಕ್ಕಟೆ ಪ್ರಚಾರ ಕೊಡುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದ. ಆದರೆ, ಅವರು ಸ್ವದೇಶೀಕರಣವನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಸ್ವದೇಶೀಕರಣ ಎಂದರೆ ಮುಸ್ಲಿಮರೊಬ್ಬರಿಗೇ ಸಂಬಂಧಿಸಿದ್ದಲ್ಲ. ಇದು 52 ಕೋಟಿ ಭಾರತೀಯರ ಕುರಿತಾದದ್ದು. ಸ್ವದೇಶೀಕರಣ ಎಂಬುದು ಸ್ಲೋಗನ್ ಅಲ್ಲ, ರಾಷ್ಟ್ರವನ್ನು ಜಾಗೃತಿಗೊಳಿಸುವ ಮಂತ್ರ.