
ಕೋಲ್ಕತಾ[ಜೂ.14]: ವೈದ್ಯರೊಬ್ಬರ ಮೇಲೆ ರೋಗಿಯ ಬಂಧುಗಳು ನಡೆಸಿದ ಹಲ್ಲೆ ಖಂಡಿಸಿ ಪಶ್ಚಿಮ ಬಂಗಾಳದಾದ್ಯಂತ ಸರ್ಕಾರಿ ಕಿರಿಯ ವೈದ್ಯರು 3 ದಿನದಿಂದ ನಡೆಸುತ್ತಿರುವ ಮುಷ್ಕರ ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ. ಈ ಮುಷ್ಕರದ ಹಿಂದೆ ಬಿಜೆಪಿ ಮತ್ತು ಸಿಪಿಎಂ ನಾಯಕರ ಕೈವಾಡವಿದೆ ಎಂದು ಮಮತಾ ಆರೋಪಿಸಿದ್ದಾರೆ. ಇದೇ ವೇಳೆ ಮುಷ್ಕರ ನಿಲ್ಲಿಸದೇ ಹೋದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾದೀತು ಎಂಬ ದೀದಿ ಬೆದರಿಕೆಗೂ ಬಗ್ಗದ ಕಿರಿಯ ವೈದ್ಯರ ಮುಷ್ಕರ ಮುಂದುವರೆಸಿದ್ದಾರೆ. ಹೀಗಾಗಿ ತಾವೇ ತಣ್ಣಗಾಗಿರುವ ಮಮತಾ, ಮುಷ್ಕರದಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಹಿರಿಯ ವೈದ್ಯರಿಗೆ ಪತ್ರ ಬರೆದಿದ್ದಾರೆ.
ಮಂಗಳವಾರ ಮೃತ ರೋಗಿಯೊಬ್ಬರ ಸಂಬಂಧಿಕರು ಕೋಲ್ಕತಾದ ಸರ್ಕಾರಿ ಆಸ್ಪತ್ರೆಯಲ್ಲಿ ಕಿರಿಯ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಇದನ್ನು ಖಂಡಿಸಿ ಹಾಗೂ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಆಸ್ಪತ್ರೆಗಳಿಗೆ ಶಸ್ತ್ರಸಜ್ಜಿತ ಪೊಲೀಸರ ಭದ್ರತೆ ವಹಿಸಬೇಕು. ದಾಳಿ ಮಾಡಿದವರನ್ನು ಜಾಮೀನು ರಹಿತ ಕೇಸು ದಾಖಲಿಸಿ ಬಂದಿಸಬೇಕು ಎಂದು ಆಗ್ರಹಿಸಿ ವೈದ್ಯರು ಅಂದಿನಿಂದಲೇ ಮುಷ್ಕರ ನಡೆಸುತ್ತಿರುವುದರಿಂದ ಸೇವೆಯಲ್ಲಿ ವ್ಯತ್ಯಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಒಡೆತನದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಗುರುವಾರ ಮಧ್ಯಾಹ್ನ ಭೇಟಿ ನೀಡಿದ ಮಮತಾ, ಮಧ್ಯಾಹ್ನ 2ರೊಳಗೆ ಮುಷ್ಕರ ಕೈಬಿಡದಿದ್ದರೆ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಮುಷ್ಕರದ ಹಿಂದೆ ಬಿಜೆಪಿ ಹಾಗೂ ಸಿಪಿಎಂ ಕೈವಾಡವಿದೆ. ಹಿಂದು- ಮುಸ್ಲಿಂ ರಾಜಕಾರಣವನ್ನು ಅವರಿಬ್ಬರೂ ಮಾಡುತ್ತಿದ್ದಾರೆ. ಅವರ ಪ್ರೇಮ ಸಂಬಂಧ ನೋಡಿ ನನಗೆ ದಿಗ್ಭ್ರಮೆಯಾಗಿದೆ ಎಂದು ಹರಿಹಾಯ್ದರು. ಆದರೆ ವೈದ್ಯರು ಮಮತಾ ನೀಡಿದ್ದ ಗಡುವನ್ನು ಮೀರಿ ಮುಷ್ಕರ ಮುಂದುವರಿಸಿದ್ದಾರೆ. ರಾಜ್ಯಪಾಲರನ್ನೂ ಭೇಟಿ ಮಾಡಿ ದೂರು ಕೊಟ್ಟಿದ್ದಾರೆ.
ದೀದೀ ವಿರುದ್ಧ ಕಿಡಿಕಾರಿದ ಕೋಲ್ಕತ್ತಾ ಮೇಯರ್ ಪುತ್ರಿ!
ಆದರೆ ಮುಷ್ಕರ ನಿಲ್ಲಿಸಲು ವೈದ್ಯರು ಹಿಂದೇಟು ಹಾಕಿದ್ದಾರೆ. ಇನ್ನು ವೈದ್ಯೆಯಾಗಿರುವ ಕೋಲ್ಕತ್ತಾದ ಮೇಯರ್ ಫಿರ್ಹಾರ್ ಹಕೀಂರವರ ಪುತ್ರಿ ಕೂಡಾ ಈ ವಿಚಾರವಾಗಿ ದೀದೀ ಸರ್ಕಾರಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಟ್ವಿಟರ್ ನ್ಲಲಿ ಈ ಕುರಿತಾಗಿ ಬರೆದುಕೊಂಡಿರುವ ಶಾಬಾ ಹಕೀಂ 'ವೈದ್ಯರಿಗೂ ಪ್ರತಿಭಟನೆ ನಡೆಸುವ ಹಕ್ಕು ಇದೆ. ಟಿಎಂಸಿ ಸಮರ್ಥಕಿಯಾಗಿ ಏನೂ ಮಾಡಲಾಗಿಲ್ಲ ಹಾಗೂ ನಮ್ಮ ನಾಯಕರ ಮೌನದಿಂದ ಬಹಳಷ್ಟು ನಾಚಿಕೆಯಾಗಿದೆ' ಎಂದಿದ್ದಾರೆ.
ಈಗಾಗಲೇ 60ಕ್ಕೂ ಹೆಚ್ಚು ವೈದ್ಯರು ರಾಜೀನಾಮೆ ಸಲ್ಲಿಸಿದ್ದು, ಮಮತಾ ಬ್ಯಾನರ್ಜಿ ಕ್ಷಮೆ ಯಾಚಿಸುವವರೆಗೆ ಈ ಪ್ರತಿಭಟನೆ ಮುಂದುರೆಸುವುದಾಗಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.