ಗಿರಿನಗರದ ಸೀತಾ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸ್ ಮೇಲೆ 'ಟಿವಿ ಚಾನೆಲ್ ಸಂಪಾದಕ'ನಿಂದ ಹಲ್ಲೆ

By Suvarna Web DeskFirst Published Feb 26, 2017, 2:35 PM IST
Highlights

ಬೆಂಗಳೂರಿನಲ್ಲಿ ಪೊಲೀಸರ ಮೇಲಿನ ಹಲ್ಲೆ ಪ್ರಕರಣಗಳು ಮತ್ತಷ್ಟು ಹೆಚ್ಚಾಗ್ತಿವೆ.  ಹಲ್ಲೆ ನಡೆಸಿ ತಾನು ಪ್ರಭಾವಿಗಳ ಮಗ ಎಂದು ತಮ್ಮ ವರಸೆ ತೋರಿಸಿ ರಿಲೀಸ್ ಆಗೋದು ಸಾಮಾನ್ಯವಾಗಿದೆ. ಆದರೆ, ಕರ್ತವ್ಯ ಮಾಡಿದ್ದಕ್ಕೆ ಏಟು ತಿಂದು ಯಾತನೆ ಪಡುತ್ತಿರುವ ಪೊಲೀಸನ ಕಥೆ ಇಲ್ಲಿದೆ.

ಬೆಂಗಳೂರು(ಫೆ. 26): ರಕ್ಷಕರ ಮೇಲೆಯೇ ಹಲ್ಲೆ ನಡೆಸುವ ಪ್ರವೃತ್ತಿ ಹೆಚ್ಚಾಗುತ್ತಿದೆ . ಈ ಹಿಂದೆ ನಡೆದ ಸಾಕಷ್ಟು ಹಲ್ಲೆ ಮತ್ತು ಹತ್ಯೆ ಪ್ರಕರಣಗಳು ಇದಕ್ಕೆ ಸಾಕ್ಷೀಕರಿಸುತ್ತವೆ. ಮತ್ತೆ ಇಂತಹದೊಂದು ಘಟನೆ ಗಿರಿನಗರದ ಸೀತಾ ಸರ್ಕಲ್​ ಬಳಿ ನಡೆದಿದೆ.  ಬನಶಂಕರಿ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಎಎಸ್'ಐ ಆಗಿರೋ ಲಿಂಗಯ್ಯ ಹಲ್ಲೆಗೊಳಗಾದವರು. ಮೊನ್ನೆ ರಾತ್ರಿ ಸೀತಾ ಸರ್ಕಲ್​ ಬಳಿ ಡ್ರಿಂಕ್​ ಆಂಡ್​ ಡ್ರೈವ್​  ಚೆಕ್​ ಮಾಡುತ್ತಿದ್ದವನ ಮೇಲೆ ರಾಜಶೇಖರ್​ ಎಂಬಾತ ಡಿಕ್ಕಿ ಹೊಡೆದದ್ದಲ್ಲದೇ, ಹಲ್ಲೆಯನ್ನೂ ನಡೆಸಿದ್ದಾನೆ.

ಖಾಸಗಿ ಚಾನಲ್​ನ ಸಂಪಾದಕನಂತೆ ಆತ..!
ಕಂಠ ಮಟ್ಟ ಕುಡಿದಿದ್ದ ರಾಜಶೇಖರ, ತಡರಾತ್ರಿ ಸೀತಾ ಸರ್ಕಲ್​ ಬಳಿ ಬರುತ್ತಿದ್ದಂತೆ ಪೂರ್ತಿ ಕಂಟ್ರೋಲ್​ ತಪ್ಪಿರುತ್ತಾನೆ. ರಸ್ತೆಯಲ್ಲಿ ಯಾರಿದ್ದಾರೆ ಎಂಬುದು ಕಾಣದೇ ಇರೋಷ್ಟು ನಶೆ ಏರಿಸಿಕೊಂಡವನು, ತನ್ನನ್ನ ತಡೆದ ಎಎಸ್'​ಐ ಲಿಂಗಯ್ಯ ಅವರ ಮೇಲೆಯೇ ವಾಹನ ಏರಿಸುತ್ತಾನೆ. ಡಿಕ್ಕಿ ಹೊಡೆದ ರಭಸಕ್ಕೆ ಕಳಗೆ ಬಿದ್ದ ಲಿಂಗಯ್ಯ ಹಲ್ಲು ಮುರಿದುಕೊಳ್ಳುತ್ತಾರೆ. ಕಾಲಿಗೆ ತೀವ್ರ ಗಾಯಗಳಾಗುತ್ತವೆ. ಅದನ್ನ ಪ್ರಶ್ನಿಸಿಲು ಹೋದ ಲಿಂಗಯ್ಯ ಅವರ ಮೇಲೆಯೇ ಹಲ್ಲೆ ನಡೆಸುವ ರಾಜಶೇಖರ, ತಾನು ಖಾಸಗಿ ಚಾನಲ್'​ನ ಎಡಿಟರ್​ ಎಂದು ಹೇಳಿಕೊಳ್ಳುತ್ತಾನೆ. ಅಷ್ಟೇ ಅಲ್ಲದೇ, ತಾನು ಮಾಜಿ ಎಸಿಪಿ ಲಕ್ಷ್ಮಿನಾರಾಯಣ ಅವರ ಸಂಬಂಧಿಕನೆಂದು ಹೇಳಿ ಬೆದರಿಕೆ ಹಾಕುತ್ತಾನೆ. ಆದರೆ, ಬೆದರಿಕೆಗೆ ಬಗ್ಗೆ ಎಎಸ್'ಐ ಲಿಂಗಯ್ಯ ಆರೋಪಿ ರಾಜಶೇಖರನ ಗಾಡಿಯನ್ನು ಸೀಜ್ ಮಾಡಿ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಆದ್ರೆ ರಾಜಶೇಖರ ಮಾತ್ರ ಕೋರ್ಟ್​'ನಲ್ಲಿ ಫೈನ್​ ಕಟ್ಟಿ ತನ್ನ ಗಾಡಿ ಬಿಡಿಸಿಕೊಂಡು ಆರಾಮಾಗಿದ್ದಾನೆ. ಈತನ ವಿರುದ್ಧ ಗಿರಿನಗರ ಠಾಣೆಯಲ್ಲಿ ದೂರು ನೀಡಿದರೂ ಪೊಲೀಸರು ಏನೂ ಕ್ರಮ ಕೈಗೊಳ್ಳದೇ ಸುಮ್ಮನಿರುವುದು ಯಾಕೆ ಎಂಬ ಪ್ರಶ್ನೆ ಕಾಡುತ್ತದೆ.

ಡಿಕ್ಕಿ ಹೊಡೆದವ ಯಾವುದೇ ಆತಂಕವಿಲ್ಲದೇ ಆರಾಮವಾಗಿದ್ದಾನೆ. ಆದ್ರೆ ಎಎಸ್'ಐ ಲಿಂಗಯ್ಯ ಮಾತ್ರ ತಾನು ನಿಯತ್ತಾಗಿ ಕೆಲಸ ಮಾಡಿದಕ್ಕೆ ಗಾಯಗೊಂಡು ತೀವ್ರ ನೋವು ಅನುಭವಿಸುತ್ತಿದ್ದಾರೆ. ಪೊಲೀಸರೇ ಪೊಲೀಸರಿಗೆ ಸಹಾಯ ಮಾಡಿಲ್ಲ ಅಂದ್ರೆ ಇವರು ಸಾರ್ವಜನಿಕರ ಗೋಳು ಕೇಳ್ತಾರಾ ಅನ್ನೋದು ಸಾರ್ವಜನಿಕರ ಪ್ರಶ್ನೆ.

- ಅಭಿಷೇಕ್​ ಜೈಶಂಕರ್,​ ಕ್ರೈಂ ಬ್ಯುರೋ, ಸುವರ್ಣ ನ್ಯೂಸ್​

click me!