ಬೆಂಗಳೂರು ಪೊಲೀಸರಿಂದ ಹಲ್ಲೆ: ಜೀವನ್ಮರಣ ಹೋರಾಟದಲ್ಲಿ ಯುವಕ

By Web DeskFirst Published Apr 23, 2019, 1:05 PM IST
Highlights

ಯುವಕನೋರ್ವನನ್ನು ಮನಬಂದಂತೆ ಥಳಿಸಿದ ಹಿನ್ನೆಲೆಯಲ್ಲಿ  ಎಎಸ್ ಐ ಹಾಗೂ ಪೊಲೀಸ್ ಪೇದೆ ಅಮಾನತಾದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರು :  ಏನು ತಪ್ಪು ಮಾಡದ ಅಮಾಯಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಆತನ ಕಿಡ್ನಿ ಹಾನಿಯಾಗಲು ಕಾರಣವಾದ ಆರೋಪದ ಮೇಲೆ ಡಿ.ಜೆ.ಹಳ್ಳಿಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಮತ್ತು ಪೇದೆಯೊಬ್ಬನನ್ನು ಅಮಾನತು ಮಾಡಲಾಗಿದೆ.

ದೇವರಜೀವನಹಳ್ಳಿಯ ಎಎಸ್‌ಐ ಸಂತೋಷ್‌ ಮತ್ತು ಪೇದೆ ಅಯ್ಯಪ್ಪ ಅಮಾನತುಗೊಂಡ ಪೊಲೀಸರು. ಪೇದೆ ಅಯ್ಯಪ್ಪ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ಯುಕವನ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕರಿಂದ ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಇನ್ನು ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ತನ್ವೀರ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೊಬೈಲ್‌ನಲ್ಲಿ ಮಾತನಾಡಿದ್ದೆ ತಪ್ಪಂತೆ!

ಏ.9ರಂದು ಭೇದಿಯಿಂದ ಬಳಲುತ್ತಿದ್ದ ನೆರೆ ಮನೆಯ ನಿವಾಸಿಗೆ ಔಷಧಿ ತರಲು ಸ್ನೇಹಿತನ ಜತೆ ತನ್ವೀರ್‌, ಅಂಬೇಡ್ಕರ್‌ ಆಸ್ಪತ್ರೆ ಬಳಿಯಿರುವ ಮೆಡಿಕಲ್‌ ಸ್ಟೋರ್‌ಗೆ ತಡರಾತ್ರಿ ಬೈಕ್‌ನಲ್ಲಿ ಹೋಗುತ್ತಿದ್ದ. ಗಸ್ತಿನಲ್ಲಿದ್ದ ಡಿ.ಜೆ ಹಳ್ಳಿ ಪೊಲೀಸರು ತನ್ವೀರ್‌ ಬೈಕ್‌ ತಡೆದು ನಿಲ್ಲಿಸಿದ್ದು, ಎಲ್ಲಿಗೆ ಹೋಗುತ್ತಿದ್ದಿರಾ ಎಂದು ಪ್ರಶ್ನಿಸಿದ್ದಾರೆ.

ಪೊಲೀಸರು ಬೈಕ್‌ ತಡೆದ ವೇಳೆ ತನ್ವೀರ್‌ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ. ಇದಕ್ಕೆ ಆಕ್ರೋಶಗೊಂಡ ಪೇದೆ ಅಯ್ಯಪ್ಪ ಅವಾಚ್ಯ ಶಬ್ದಗಳಿಂದ ತನ್ವೀರ್‌ನನ್ನು ನಿಂದಿಸಿದ್ದರು. ಅಲ್ಲದೆ, ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ಯಾವುದೇ ತಪ್ಪು ಮಾಡದಿದ್ದರೂ ಹಲ್ಲೆ ನಡೆಸಿದ ಪೇದೆಯನ್ನು ತನ್ವೀರ್‌ ಪ್ರಶ್ನೆ ಮಾಡಿದ್ದ. ತನ್ವೀರ್‌ ಪ್ರಶ್ನೆ ಮಾಡಿದ್ದಕ್ಕೆ ಇನ್ನಷ್ಟುಆಕ್ರೋಶಗೊಂಡ ಅಯ್ಯಪ್ಪ ಮತ್ತು ಇತರ ಸಿಬ್ಬಂದಿ ಹೊಯ್ಸಳ ವಾಹನದಲ್ಲಿ ಹತ್ತಿಸಿಕೊಂಡು ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಠಾಣೆಗೆ ಕರೆದೊಯ್ದು ತನ್ವೀರ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದ ತನ್ವೀರ್‌ ಸಹೋದರ ಠಾಣೆಗೆ ಬಂದು ಸಹೋದರನನ್ನು ಕರೆದುಕೊಂಡು ಹೋಗಿದ್ದರು.

ಮನೆಗೆ ಬಂದಾಗಿನಿಂದ ತನ್ವೀರ್‌ ಹೊಟ್ಟೆನೋವಿನಿಂದ ಬಳಲುತ್ತಿದ್ದ. ಈ ಹಿನ್ನೆಲೆಯಲ್ಲಿ ಆತನ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ವೈದ್ಯರಿಗೆ ತೋರಿಸಿದ್ದರು. ವೈದ್ಯರು ತನ್ವೀರ್‌ನ್ನು ಪರೀಕ್ಷಿಸಿದಾಗ ಆತನ ಎರಡು ಕಿಡ್ನಿಗೆ ಗಂಭೀರವಾಗಿ ಹಾನಿಯಾಗಿರುವುದು ಬೆಳಕಿಗೆ ಬಂದಿತ್ತು. ಪೊಲೀಸರು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ ಪರಿಣಾಮ ತನ್ವೀರ್‌ಗೆ ಈ ದುಸ್ಥಿತಿ ಎದುರಾಗಿದೆ ಎಂಬುದು ತಿಳಿದು ಆತನ ಪಾಲಕರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಆಯುಕ್ತರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ವೇಳೆ ಪೊಲೀಸರು ಹಲ್ಲೆ ನಡೆಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

click me!