ಶ್ರೀಲಂಕಾದಿಂದ ಅಪ್ಪನ ಕೊನೆಯ ಕರೆ ಮಗನಿಗೆ ಮಿಸ್‌!: ಕೆಲವೇ ಕ್ಷಣದಲ್ಲಿ ಸ್ಫೋಟ

By Web DeskFirst Published 23, Apr 2019, 9:02 AM IST
Highlights

ಅಪ್ಪನ ಕೊನೆಯ ಕರೆ ಮಗನಿಗೆ ಮಿಸ್‌!| ಶ್ರೀಲಂಕಾದಿಂದ ರಂಗಪ್ಪ ಮಾಡಿದ್ದ ಕರೆ ಸ್ವೀಕರಿಸದ ರಿನೀತ್‌| ಕೆಲವೇ ಹೊತ್ತಿನಲ್ಲಿ ಬಾಂಬ್‌ ಸ್ಫೋಟಕ್ಕೆ ರಂಗಪ್ಪ ಬಲಿ

ಬೆಂಗಳೂರು[ಏ.23]: ಶ್ರೀಲಂಕಾದ ಶಾಂಗ್ರಿಲಾ ಹೋಟೆಲ್‌ನಲ್ಲಿ ಬಾಂಬ್‌ ಸ್ಫೋಟಕ್ಕೆ ಬಲಿಯಾಗುವ ಕೆಲವೇ ಕ್ಷಣಗಳಲ್ಲಿ ರಂಗಪ್ಪ ಅವರು ತಮ್ಮ ಮಗ ರಿನೀತ್‌ಗೆ ಕರೆ ಮಾಡಿದ್ದರು. ಆದರೆ, ಮೊಬೈಲ್‌ ನೋಡಿಕೊಳ್ಳದೆ ಅಪ್ಪನ ಕೊನೆಯ ಕಾಲ್‌ ಪಿಕ್‌ ಮಾಡಲು ಆಗಿಲ್ಲ ಎಂದು ಮಗ ಈಗ ಕೊರಗುವಂತಾಗಿದೆ.

ನಗರದ ವಿದ್ಯಾರಣ್ಯಪುರ ನಿವಾಸಿಯಾದ ರಂಗಪ್ಪ (ಇವರಿಗೆ ರಂಗ ಇಲೆವೆನ್‌ ಹಾಗೂ ಸಾಹುಕಾರ್‌ ರಂಗಪ್ಪ ಮಹಿಮಪ್ಪ ಎಂದೂ ಹೆಸರಿದೆ) ಶನಿವಾರ ಬೆಳಗ್ಗೆ ಶ್ರೀಲಂಕಾಕ್ಕೆ ತೆರಳಿದ್ದರು. ಅಲ್ಲಿಂದ ಭಾನುವಾರ ಬೆಳಗ್ಗೆ ಪುತ್ರನಿಗೆ ಕರೆ ಮಾಡಿದ್ದರು. ಹಲವು ಬಾರಿ ಕರೆ ಮಾಡಿದ್ದರೂ ಪುತ್ರ ರಿಸೀವ್‌ ಮಾಡದ ಹಿನ್ನೆಲೆಯಲ್ಲಿ ಪತ್ನಿಗೆ ಕರೆ ಮಾಡಿ ಮಾತನಾಡಿದ್ದರು. ಆಗ ಶಾಂಗ್ರಿಲಾ ಹೋಟೆಲ್‌ನಲ್ಲಿ ತಿಂಡಿ ಮಾಡುತ್ತಿದ್ದೇವೆ ಎಂದು ಹೇಳಿದ್ದರು. ಮಗನಿಗೂ ಕರೆ ಮಾಡಿದ್ದೆ, ಅವನು ಫೋನ್‌ ರಿಸೀವ್‌ ಮಾಡಲಿಲ್ಲ ಎಂದು ಹೇಳಿ ಅವನ ಕ್ಷೇಮ ವಿಚಾರಿಸಿದ್ದರು.

ಬಳಿಕ ಅಪ್ಪನ ಮಿಸ್ಡ್‌ ಕಾಲ್‌ ನೋಡಿದ ಪುತ್ರ ರಿನೀತ್‌ ಅಪ್ಪನಿಗೆ ವಾಪಸು ಕರೆ ಮಾಡುವಷ್ಟರಲ್ಲಿ ‘ನಾಟ್‌ ರೀಚೆಬಲ್‌’ ಆಗಿದೆ. ಈ ಮೂಲಕ ಮಗನಿಗೆ ಎಟುಕದ ಲೋಕಕ್ಕೆ ಅಪ್ಪ ಪ್ರಯಾಣಿಸಿದ್ದರು ಎಂಬುದನ್ನು ತಿಳಿದು ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ. ಸೋಮವಾರ ಇಡೀ ದಿನ ರಂಗಪ್ಪ ಅವರ ಮನೆಯಲ್ಲಿ ನೀರವ ಮೌನ ಆವರಿಸಿದ್ದು, ಅತ್ತು ಅತ್ತು ಸಂತೈಸಲು ಬಂದವರ ಜತೆಗೂ ಮಾತನಾಡದ ಸ್ಥಿತಿಗೆ ಪತ್ನಿ ತಲುಪಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಶಿವಮೊಗ್ಗಕ್ಕೆ ಹೋಗಿದ್ದಾರೆ ಎಂದು ಕೊಂಡಿದ್ವಿ:

ರಂಗಪ್ಪ ಅವರ ಸಹೋದರ ಮುನಿಸ್ವಾಮಪ್ಪ, ಚುನಾವಣೆ ರಣತಂತ್ರದ ಬಗ್ಗೆ ಶಾಸಕ ಡಾ| ಶ್ರೀನಿವಾಸಮೂರ್ತಿ ಅವರ ಕಚೇರಿಯಲ್ಲಿ ಕೆ.ಜಿ. ಹನುಮಂತರಾಯಪ್ಪ, ನನ್ನ ತಮ್ಮ ರಂಗಪ್ಪ ಹಾಗೂ ನಾನು ಎಲ್ಲರೂ ಸಭೆ ನಡೆಸಿದ್ದೆವು. ಈ ವೇಳೆ ಚುನಾವಣೆಯ ಮರುದಿನ ಶನಿವಾರ ಬೆಳಗ್ಗೆ ಶಿವಮೊಗ್ಗಕ್ಕೆ ಪ್ರವಾಸ ಹೋಗುವುದಾಗಿ ಹೇಳಿದ್ದರು. ಆದರೆ ಈ ಆಘಾತದ ಸುದ್ದಿ ತಿಳಿದಾಗಲೇ ಅವರು ಶ್ರೀಲಂಕಾಗೆ ಹೋಗಿದ್ದಾರೆಂದು ತಿಳಿದಿದ್ದು ಎಂದು ನೋವು ತೋಡಿಕೊಂಡರು. ಶಾಸಕ ಡಾ

ಶ್ರೀನಿವಾಸಮೂರ್ತಿ ಅವರು ಕರೆ ಮಾಡಿ, ನಿಮ್ಮ ತಮ್ಮನ ವಿಷಯ ತಿಳಿಯಿತೇ ಎಂದರು. ಏನಾಯಿತು ಎಂದರೆ ಅವರಿಗೆ ನೋವಿನಲ್ಲಿ ಏನೂ ಹೇಳಲು ಆಗಿಲ್ಲ. ಅವರು ಟೀವಿ ನೋಡು ಎಂದು ಹೇಳಿ ಫೋನಿಟ್ಟರು. ನನ್ನ ತಮ್ಮ ತನ್ನ ಪತ್ನಿಗೆ ಭಾನುವಾರ ಬೆಳಗ್ಗೆ 8.10ಕ್ಕೆ ಕರೆ ಮಾಡಿ ಮಾತನಾಡಿದ್ದಾನೆ. ಆ ಬಳಿಕ ಏನಾಯ್ತು ಎಂದು ಕೇಳಿದರೆ ಅವರು ಮಾತನಾಡುವ ಸ್ಥಿತಿಯಲ್ಲೇ ಇಲ್ಲ. ಬಳಿಕ ಸಿಎಂ ಕುಮಾರಸ್ವಾಮಿ ಎಲ್ಲರೂ ಕರೆ ಮಾಡಿದ್ದರು. ಶ್ರೀನಿವಾಸಮೂರ್ತಿ ಹಾಗೂ ಎಂಎಲ್‌ಸಿ ಇ.ಕೃಷ್ಣಪ್ಪ ಅವರು ಶ್ರೀಲಂಕಾಗೆ ತೆರಳಿದ್ದಾರೆ. ಅದು ನನ್ನ ತಮ್ಮ ಅಲ್ಲ ಎನ್ನುವ ಮಾತು ಹೇಳಿದರೆ ಸಾಕು ಎಂದು ಕಣ್ಣೀರಾದರು.

ಸಂತೈಸಿದ ಕೃಷ್ಣ ಬೈರೇಗೌಡ:

ರಂಗಪ್ಪ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಸಚಿವ ಕೃಷ್ಣ ಬೈರೇಗೌಡ ಸಾಂತ್ವನ ತಿಳಿಸಿದರು. ರಂಗಪ್ಪ ಅವರ ಸಾವಿನ ಸುದ್ದಿ ತಿಳಿದ ಬೆನ್ನಲ್ಲೇ ಸಂಬಂಧಿಕರು ರಂಗಪ್ಪ ಅವರ ಮನೆಗೆ ಆಗಮಿಸುತ್ತಿದ್ದರು. ರಂಗಪ್ಪ ಅವರ ದೊಡ್ಡ ಅಣ್ಣ ನಾಗರಾಜ್‌ ಅಳುತ್ತಲೇ ಮನೆಗೆ ಬಂದರೆ ಅವರನ್ನು ಕಂಡು ಮನೆಯ ಸದಸ್ಯರೆಲ್ಲರೂ ಕಣ್ಣೀರು ಹಾಕತೊಡಗಿದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28

Last Updated 23, Apr 2019, 9:02 AM IST