
ಯಾವುದೇ ವ್ಯಕ್ತಿಯ ಸಾಧನೆಯ ಹಿಂದೆ ಶಿಕ್ಷಣದ ಪಾತ್ರ ಬಹಳ ದೊಡ್ಡದು. ಶಿಕ್ಷಣ ವ್ಯಕ್ತಿತ್ವ ರೂಪಿಸಿ, ಬುದ್ಧಿಶಕ್ತಿಯನ್ನು ಉತ್ತೇಜಿಸಿ ಮಾನಸಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಸಂಸ್ಕಾರ ರೂಪಿಸುತ್ತದೆ. ಆದರೆ, ನಾನಾ ಕಾರಣಗಳಿಂದಾಗಿ ಕೆಲ ಶಾಲೆಗಳು ಸುಲಿಗೆಯ ಕೇಂದ್ರಗಳಾದರೆ, ಸರ್ಕಾರಿ ಶಾಲೆಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಆಶಾಕಿರಣದಂತೆ ಕೆಲಸ ಮಾಡುತ್ತಿದ್ದಾರೆ ಭದ್ರಾವತಿಯ ಮುಖ್ಯ ಶಿಕ್ಷಕರೊಬ್ಬರು.
ಭದ್ರಾವತಿ ತಾಲೂಕಿನ ಹಳ್ಳಿಕೆರೆ ಸರ್ಕಾರಿ ಶಾಲೆ 5 ವರ್ಷಗಳ ಹಿಂದೆ ರಾಜ್ಯದ ಎಲ್ಲ ಶಾಲೆಗಳ ಹಾಗೆಯೇ ಇತ್ತು. ಕೆಲವೇ ಕೆಲ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದರು. ಶಿಕ್ಷಕರು ಇರುತ್ತಿರಲಿಲ್ಲ. ಇಲ್ಲಿನ ಅವ್ಯವಸ್ಥೆ ಕಂಡು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸಲಾರಂಭಿಸಿದ್ದರು. ಆದರೆ, ಕೇವಲ 2-3 ವರ್ಷಗಳಲ್ಲಿ ಈ ಶಾಲೆಯ ಚಹರೆಯೇ ಬದಲಾಯಿತು.
ಶಿಕ್ಷಕ ಮನಸ್ಸು ಮಾಡಿದರೆ ಏನೆಲ್ಲ ಬದಲಾವಣೆ ತರಬಹುದು ಎನ್ನುವುದಕ್ಕೆ ಹಳ್ಳಿಕೆರೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಖೂಬಾ ನಾಯ್ಕ್ ಉದಾಹರಣೆ. ಮುಚ್ಚುವ ಸ್ಥಿತಿಯಲ್ಲಿದ್ದ ಇಲ್ಲಿನ ಶಾಲೆಯನ್ನು ಮರು ಪ್ರಾರಂಭಿಸಿ, ಸುತ್ತಮುತ್ತಲ ಹಳ್ಳಿಗಳಿಗೆ ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ. ಖೂಬಾ ನಾಯ್ಕ್ ಮಾಡಿದ ಮೊದಲ ಕೆಲಸ ಏನೆಂದರೆ, ಪ್ರತಿ ವರ್ಷ 1ನೇ ತರಗತಿಗೆ ದಾಖಲಾಗುವ ಪ್ರತಿ ವಿದ್ಯಾರ್ಥಿಗೆ 1000 ದಂತೆ 10 ವರ್ಷಕ್ಕೆ ಬ್ಯಾಂಕಿನಲ್ಲಿ ಠೇವಣಿ ಇಟ್ಟ ಬಾಂಡ್ ವಿತರಣೆ ಜಾರಿಗೆ ತಂದರು. 1ರಿಂದ 4ನೇ ತರಗತಿ ಮಕ್ಕಳಿಗೆ ಆಂಗ್ಲ ಅಭ್ಯಾಸದ ಪುಸ್ತಕ, ಎಲ್ಲ ಮಕ್ಕಳಿಗೂ ದಿನಚರಿ ಪುಸ್ತಕ ನೀಡಲಾಗಿದೆ. ಮಕ್ಕಳಿಗೆ ಶಾಲಾ ಬ್ಯಾಗ್, ಜಾಮಿಟ್ರಿ ಬಾಕ್ಸ್ ಹಾಗೂ ವಿಶೇಷ ಕಲಿಕೆಯ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತದೆ. ಎಲ್ಲದಕ್ಕೂ ದಾನಿಗಳಿಂದ ಹಣ ಸಂಗ್ರಹಿಸಿ ಈ ಕೆಲಸ ಮಾಡಲಾಗುತ್ತಿದೆ. ಈ ಎಲ್ಲ ಕೆಲಸಕ್ಕೆ ಶಾಲಾಭಿವೃದ್ಧಿ ಸಮಿತಿ ಸಹ ಅದ್ಭುತವಾಗಿ ಸಹಕಾರ ನೀಡುತ್ತಿದೆ.
ಮುಖ್ಯ ಶಿಕ್ಷಕ ಖೂಬಾ ನಾಯ್ಕ್ ಜಾರಿಗೆ ತಂದ ಸುಧಾರಣಾ ಕ್ರಮಗಳು ಅದೆಷ್ಟು ಪರಿಣಾಮ ಬೀರಲಾರಂಭಿಸಿದವು ಎಂದರೆ, ಈ ವರ್ಷ 98,000 ಠೇವಣಿ ಬಾಂಡ್ ವಿತರಿಸಲಾಗಿದೆ. ಆರಂಭದಲ್ಲಿ 60ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 190ಕ್ಕೆ ಏರಿದೆ. ಅಷ್ಟೇ ಅಲ್ಲ, ಸಮೀಪದ ಆಂಗ್ಲ ಮಾಧ್ಯಮ ಶಾಲೆಗೆ ಸೇರುತ್ತಿದ್ದ ಮಕ್ಕಳೆಲ್ಲ ಈಗ ಸರ್ಕಾರಿ ಶಾಲೆಗೆ ಪ್ರವೇಶ ಪಡೆಯಲಾರಂಭಿಸಿದ್ದಾರೆ. ಈ ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲಿಷ್ ಸಂವಹನ ಕಲಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಶಾಲೆಯ ಖಾಲಿ ಜಾಗದಲ್ಲಿ ಕೈತೋಟ ಮಾಡಿಸಿ ತರಕಾರಿ ಬೆಳೆಸುತ್ತಿದ್ದಾರೆ. ಈ ತರಕಾರಿಯನ್ನೇ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಲಾಗುತ್ತದೆ.
ಖೂಬಾ ನಾಯ್ಕ್'ರಿಗೆ ಇತ್ತೀಚೆಗೆ ರಾಜ್ಯ ಸರ್ಕಾರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಹ ನೀಡಿ ಗೌರವಿಸಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ, ತಮ್ಮ ಶಾಲೆ ಚೆನ್ನಾಗಿರಲಿ ಎನ್ನುವ ಕಾರಣಕ್ಕೆ ಅನೇಕ ಬಾರಿ ಜೇಬಿನಿಂದ ಹಣ ಹಾಕಿದ್ದಾರೆ ಇವರು. ಒಬ್ಬ ಶಿಕ್ಷಕ ಬದ್ಧತೆಯಿಂದ ಕೆಲಸ ಮಾಡಿದರೆ ಹೇಗೆ ಶಾಲೆಯ ಹಾಗೂ ವಿದ್ಯಾರ್ಥಿಗಳ ಮನೋ ವಾತಾವರಣವನ್ನೇ ಬದಲಾಯಿಸಬಹುದು ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.