ಕೇಜ್ರಿವಾಲ್ ಮೇಲೆ ಕ್ರಿಮಿನಲ್‌ ಕೇಸು?

First Published Jun 29, 2018, 9:40 AM IST
Highlights

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿರುದ್ಧ ಕ್ರಿಮಿನಲ್‌ ಸಂಚು ಪ್ರಕರಣವನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ನವದೆಹಲಿ :  ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ (ಸಿಎಸ್‌) ಅನ್ಷು ಪ್ರಕಾಶ್‌ ಅವರ ಮೇಲೆ ನಡೆಯಿತು ಎನ್ನಲಾದ ಹಲ್ಲೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿರುದ್ಧ ಕ್ರಿಮಿನಲ್‌ ಸಂಚು ಪ್ರಕರಣವನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಇದೇ ಶನಿವಾರ ಅಥವಾ ಮುಂದಿನ ವಾರ ಆರೋಪಪಟ್ಟಿಯನ್ನು ಪೊಲೀಸರು ಸಲ್ಲಿಸುವ ಸಾಧ್ಯತೆ ಇದೆ. ಇದರಲ್ಲಿ ಕೇಜ್ರಿವಾಲ್‌ ಅವರು ಕ್ರಿಮಿನಲ್‌ ಸಂಚು ಹೂಡಿದ ಬಗ್ಗೆ ಉಲ್ಲೇಖ ಇರಲಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮೂಲ ಎಫ್‌ಐಆರ್‌ನಲ್ಲಿ ಕೇಜ್ರಿವಾಲ್‌ ಹೆಸರಿರಲಿಲ್ಲ. ಆದರೂ ಅವರ ವಿರುದ್ಧ ಆರೋಪಪಟ್ಟಿಯಲ್ಲಿ ಹೆಸರು ದಾಖಲಿಸಲಾಗುತ್ತಿದೆ.

ಫೆಬ್ರವರಿ 19ರ ತಡರಾತ್ರಿ ಕೇಜ್ರಿವಾಲ್‌ ಅವರ ಸಿವಿಲ್‌ ಲೈನ್ಸ್‌ ನಿವಾಸದಲ್ಲಿ ನಡೆದ ಸಭೆಯ ವೇಳೆ ಆಪ್‌ ಶಾಸಕರು ಅನ್ಷು ಅವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಪ್ರಕರಣದಲ್ಲಿ ಇಬ್ಬರು ಆಪ್‌ ಶಾಸಕರನ್ನು ಬಂಧಿಸಲಾಗಿತ್ತು. ಇದಾದ ನಂತರ ಕೇಜ್ರಿ ಸರ್ಕಾರದ ವಿರುದ್ಧ ಐಎಎಸ್‌ ಅಧಿಕಾರಿಗಳು ಸಭೆಗೆ ಗೈರಾಗುವ ಅಹಿಂಸಾತ್ಮಕ ಪ್ರತಿಭಟನೆ ಆರಂಭಿಸಿದ್ದರು. ಇದರ ಪರಿಣಾಮ ಕೆಲ ದಿನಗಳ ಹಿಂದೆ ಸ್ವತಃ ಕೇಜ್ರಿ ಅವರ ಸಚಿವ ಸಂಪುಟದ ಸದಸ್ಯರು, ದೆಹಲಿಯ ಲೆಫ್ಟಿನಂಟ್‌ ಗವರ್ನರ್‌ ಕಚೇರಿಯಲ್ಲೇ 9 ದಿನಗಳ ಕಾಲ ಉಪವಾಸ ಪ್ರತಿಭಟನೆ ನಡೆಸಿದ್ದರು.

40 ನಿಮಿಷ ಸಿಸಿಟೀವಿ ಹಿಂದಕ್ಕೆ:  ಕೇಜ್ರಿವಾಲ್‌ ಅವರ ನಿವಾಸದಲ್ಲಿದ್ದ ಸಿಸಿಟೀವಿಗಳನ್ನು ಘಟನೆಯ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ, ಅವು ವಾಸ್ತವಿಕ ಸಮಯಕ್ಕಿಂತ 40 ನಿಮಿಷ ಹಿಂದಿನ ಸಮಯವನ್ನು ತೋರಿಸುತ್ತಿವೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿತ್ತೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

click me!