ಅರುಣ್ ಜೇಟ್ಲಿಯವರ ಬ್ಯಾಂಕ್ ಸ್ಟೇಟ್'ಮೆಂಟ್ಸ್ ಕೊಡಿಸಿ: ಕೋರ್ಟ್'ಗೆ ಕೇಜ್ರಿವಾಲ್ ಮನವಿ

By Suvarna Web DeskFirst Published Feb 25, 2017, 1:58 PM IST
Highlights

ದೆಹಲಿ ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಮಾರ್ಚ್ 6 ಮತ್ತು 7ರಂದು ಕೈಗೆತ್ತಿಕೊಳ್ಳಲಿದೆ. ಕೇಜ್ರಿವಾಲ್ ಅರ್ಜಿ ವಿಚಾರದಲ್ಲಿ ಕೋರ್ಟ್ ಏನು ನಿರ್ಧರಿಸುತ್ತದೆಂದು ಕಾದುನೋಡಬೇಕು.

ನವದೆಹಲಿ(ಫೆ. 25): ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ದೆಹಲಿ ಮುಖ್ಯಮಂತ್ರಿ ಹಾಗೂ ಆರೋಪಿ ಅರವಿಂದ್ ಕೇಜ್ರಿವಾಲ್ ಅವರು ವಿತ್ತ ಸಚಿವ ಅರುಣ್ ಜೇಟ್ಲಿಯವರ ಬ್ಯಾಂಕ್ ಖಾತೆಯ ವಿವರ ಕೋರಿ ದಿಲ್ಲಿ ಹೈಕೋರ್ಟ್'ನಲ್ಲಿ ಮನವಿ ಮಾಡಿಕೊಂಡಿದ್ದಾರೆ. 1999-2014ರವರೆಗೂ ಅರುಣ್ ಜೇಟ್ಲಿಯವರದ್ದಷ್ಟೇ ಅಲ್ಲ, ಅವರ ಪತ್ನಿ, ಮಗಳು ಹಾಗೂ ಅಳಿಯ ಅವರ ಬ್ಯಾಂಕ್ ಸ್ಟೇಟ್ಮೆಂಟ್'ಗಳ ವಿವರ ಕೊಡಿಸುವಂತೆ ಆಮ್ ಆದ್ಮಿ ಮುಖ್ಯಸ್ಥರಾದ ಕೇಜ್ರಿವಾಲ್ ನ್ಯಾಯಾಲಯವನ್ನು ಕೋರಿಕೊಂಡಿದ್ದಾರೆ.

2000ದಿಂದ 13 ವರ್ಷಗಳ ಕಾಲ ದೆಹಲಿ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಮುಖ್ಯಸ್ಥರಾಗಿದ್ದಾಗ ಅರುಣ್ ಜೇಟ್ಲಿ ಅವರು ಭ್ರಷ್ಟಾಚಾರ ನಡೆಸಿದ್ದರು ಎಂದು ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ಆಮ್ ಆದ್ಮಿ ಮುಖಂಡರು ಸಾರ್ವಜನಿಕವಾಗಿ ಆರೋಪ ಮಾಡಿದ್ದರು. ತಾವು ವೈಯಕ್ತಿಕವಾಗಿ ಯಾವುದೇ ರೀತಿಯಲ್ಲಿ ಹಣದ ಲಾಭ ಮಾಡಿಕೊಂಡಿಲ್ಲ ಎಂದು ಸ್ಪಷ್ಟನೆ ಕೊಟ್ಟ ಜೇಟ್ಲಿ, ತಮ್ಮ ವಿರುದ್ಧ ಆರೋಪ ಮಾಡಿದ ಕೇಜ್ರಿವಾಲ್ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಆದರೆ, ಇದೀಗ ಜೇಟ್ಲಿಯವರ ಮಾತು ಸುಳ್ಳೆಂದು ಹೇಳುತ್ತಿರುವ ಕೇಜ್ರಿವಾಲ್, ತಮ್ಮ ವಾದ ನಿರೂಪಿಸಲು ಜೇಟ್ಲಿ ಮತ್ತವರ ಕುಟುಂಬದವರ ಬ್ಯಾಂಕ್ ಸ್ಟೇಟ್'ಮೆಂಟ್'ಗಳು ಅಗತ್ಯವೆಂದು ಕೋರ್ಟ್'ಗೆ ತಿಳಿಸಿದ್ದಾರೆ.

ದೆಹಲಿ ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಮಾರ್ಚ್ 6 ಮತ್ತು 7ರಂದು ಕೈಗೆತ್ತಿಕೊಳ್ಳಲಿದೆ. ಕೇಜ್ರಿವಾಲ್ ಅರ್ಜಿ ವಿಚಾರದಲ್ಲಿ ಕೋರ್ಟ್ ಏನು ನಿರ್ಧರಿಸುತ್ತದೆಂದು ಕಾದುನೋಡಬೇಕು.

click me!