ಜೇಟ್ಲಿಗೆ ಕಿಡ್ನಿ ಸಮಸ್ಯೆ: ಶೀಘ್ರದಲ್ಲೇ ಶಸ್ತ್ರಚಿಕಿತ್ಸೆ

By Suvarna Web DeskFirst Published Apr 6, 2018, 10:33 AM IST
Highlights

ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ (65) ಅವರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ಶೀಘ್ರದಲ್ಲೇ ಅವರಿಗೆ ಶಸ್ತ್ರಚಿಕಿತ್ಸೆ ನಡೆಯಬಹುದು ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ (65) ಅವರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ಶೀಘ್ರದಲ್ಲೇ ಅವರಿಗೆ ಶಸ್ತ್ರಚಿಕಿತ್ಸೆ ನಡೆಯಬಹುದು ಎಂದು ಮೂಲಗಳು ತಿಳಿಸಿವೆ.

ಕಿಡ್ನಿ ಅನಾರೋಗ್ಯಕ್ಕೆ ತುತ್ತಾಗಿರುವ ಜೇಟ್ಲಿ ಏ.2ರಿಂದ ಕಚೇರಿಗೆ ಬರುತ್ತಿಲ್ಲ. ಮುಂದಿನ ವಾರ ನಿಗದಿಯಾಗಿದ್ದ ಲಂಡನ್‌ ಪ್ರವಾಸವನ್ನು ರದ್ದುಪಡಿಸಿದ್ದಾರೆ. ಅಲ್ಲದೆ, ರಾಜ್ಯಸಭೆಗೆ ಪುನರಾಯ್ಕೆಯಾಗಿರುವ ಅವರು ಪ್ರಮಾಣ ವಚನವನ್ನೂ ಸ್ವೀಕರಿಸಿಲ್ಲ. ದೇಶಾದ್ಯಂತ ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ಆಯ್ಕೆಯಾದ 58 ನೂತನ ಸದಸ್ಯರಲ್ಲಿ 55 ಮಂದಿ ಮೊನ್ನೆ ಏ.3ರಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸದ್ಯ ಜೇಟ್ಲಿ ಅವರಿಗೆ ಏಮ್ಸ್‌ ವೈದ್ಯರು ಅವರ ನಿವಾಸದಲ್ಲೇ ವಿವಿಧ ಪರೀಕ್ಷೆಗಳನ್ನು ನಡೆಸುತ್ತಿದ್ದು, ಕಿಡ್ನಿ ಸಮಸ್ಯೆಯಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಕಿಡ್ನಿ ಕಸಿ ಮಾಡಬೇಕೇ ಬೇಡವೇ ಎಂಬುದನ್ನು ಶೀಘ್ರದಲ್ಲೇ ತಿಳಿಸಲಿದ್ದಾರೆ. ಇನ್ನೂ ಅವರನ್ನು ಆಸ್ಪತ್ರೆಗೆ ದಾಖಲಿಸಿಲ್ಲವಾದರೂ, ಸೋಂಕು ತಗಲುವ ಭೀತಿಯಿಂದ ಹೊರಗೆಲ್ಲೂ ಹೋಗದಂತೆ ವೈದ್ಯರು ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.

2014ರಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಆರಂಭದಲ್ಲಿ ಜೇಟ್ಲಿ ತೂಕ ಇಳಿಸಿಕೊಳ್ಳಲು ಬೇರಿಯಾಟ್ರಿಕ್‌ ಸರ್ಜರಿ ಮಾಡಿಸಿಕೊಂಡಿದ್ದರು. ಅದರ ಅಡ್ಡ ಪರಿಣಾಮದಿಂದ ಈಗ ಕಿಡ್ನಿ ಸಮಸ್ಯೆ ಎದುರಾಗಿರಬಹುದು ಎಂದು ಹೇಳಲಾಗುತ್ತಿದೆ. ಅವರು ತೀವ್ರತರ ಮಧುಮೇಹ ರೋಗಿಯಾಗಿದ್ದು, ಕೆಲ ವರ್ಷಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಾರೆ.

ಕಳೆದ ತಿಂಗಳು ಅರ್ಜೆಂಟೀನಾದಲ್ಲಿ ನಡೆದ 20 ದೇಶಗಳ ಹಣಕಾಸು ಸಚಿವರ ಸಭೆಗೆ ಜೇಟ್ಲಿ ಗೈರಾಗಿದ್ದರು. ಮುಂದಿನ ವಾರ ಲಂಡನ್‌ನಲ್ಲಿ ನಡೆಯಲಿರುವ ಬ್ರಿಟನ್‌-ಭಾರತ ಆರ್ಥಿಕ ಮತ್ತು ಹಣಕಾಸು ಸಭೆಯಲ್ಲಿ ಅವರು ಭಾಷಣ ಮಾಡಬೇಕಿತ್ತು. ಅದನ್ನು ರದ್ದುಪಡಿಸಲಾಗಿದೆ.

click me!