
"ನಾನು ಇನ್ನು ಮೂರು ದಿನ ಬ್ಯುಸಿ. ತ್ಯಾಜ್ಯದಿಂದ ಉತ್ಪತ್ತಿಯಾಗುವ ತ್ಯಾಜ್ಯರಸ (ಲಿಚೆಟ್), ಕಸಾಯಿಗಳ ರಕ್ತಸಿಕ್ತ ಪ್ರಾಣಿಜನ್ಯ, ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆ ಬಗ್ಗೆ ಮುಂಬೈನ ರಾಗಿಣಿ ಜೈನ್ ಎಂಬುವರೊಂದಿಗೆ ನಗರದಲ್ಲಿ ಪ್ರಾತ್ಯಕ್ಷಿಕೆಗಳನ್ನು ನೀಡುತ್ತಿದ್ದೇನೆ. ಬೇಗ ಹೇಳಿ," ಎಂದು ತರಾತುರಿಯಲ್ಲಿ ಫೋನ್‌ನಲ್ಲಿ ಮಾತನಾಡುತ್ತಿದ್ದ ಅವರ ಮಾತಿನಲ್ಲಿ ಪರಿಸರದ ಕುರಿತ ಕಳಕಳಿ ಇತ್ತು. ತ್ಯಾಜ್ಯದ ಸಮಸ್ಯೆ ನಿವಾರಣೆಯ ಬಗ್ಗೆ ಗಂಭೀರ ಚಿಂತನೆ ಇತ್ತು.
ಅಂದಹಾಗೆ ಅವರಾರಯರು? 25 ವರ್ಷಗಳಿಂದ ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಪಟೇಲಮ್ಮ, ಅಂದರೆ ಅಲ್ಮಿತ್ರಾ ಎಚ್. ಪಟೇಲ್. 80 ವರ್ಷದ ಪಟೇಲ್ ಅವರಿಗೆ ವಯಸ್ಸಿಗೆ ಸೂಚಕವಾಗಿ ಮುಖದಲ್ಲಿ ಗೆರೆಗಳು ಮೂಡಿರಬಹುದು. ಆದರೆ, ಗೆರೆಗಳನ್ನು ನಾಚಿಸುವಂತೆ ಚಟುವಟಿಕೆಯಿಂದ ಓಡಾಡುತ್ತ, ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿದ್ದಾರೆ.
ಇಂದಿಗೂ ತ್ಯಾಜ್ಯ ಸಮಸ್ಯೆ ಬಗ್ಗೆ ಯಾರು, ಎಲ್ಲೇ ಕರೆದರೂ ಅಲ್ಲಿಗೆ ತೆರಳಿ ಸಮಸ್ಯೆ ನಿವಾರಣೆಗೆ ನಿಲ್ಲುತ್ತಾರೆ. ಅಗತ್ಯ ಬಿದ್ದರೆ ಕಾನೂನು ಹೋರಾಟಕ್ಕೂ ಬೆಂಬಲವಾಗುತ್ತಾರೆ. ದೇಶದಾದ್ಯಂತ ನಗರಗಳಲ್ಲಿ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕೆಂಬ ಕಾಯ್ದೆ ಜಾರಿಯಾಗಲು ಕಾರಣರಾದವರಲ್ಲಿ ಅಲ್ಮಿತ್ರಾ ಪಟೇಲ್ ಪ್ರಮುಖರು. ಇದಕ್ಕಾಗಿ ಅವರು ನ್ಯಾಯಾಂಗ ಹೋರಾಟವನ್ನೇ ನಡೆಸಿದ್ದು ಗಮನಾರ್ಹ.
ಮುಂಬೈನಲ್ಲಿ ಜನಿಸಿ, ನಾಸಿಕ್‌ನ ದೇವ್‌ಲಾಲಿಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿದ ಪಟೇಲ್, ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಅಧ್ಯಯನ ನಡೆಸಿದ್ದಾರೆ. ಅಮೆರಿಕದ ಎಂಐಟಿಯಲ್ಲಿ ಎಂಜಿನಿಯರಿಂಗ್ ಮತ್ತು ಸೆರಾಮಿಕ್ಸ್ ವಿಭಾಗದಲ್ಲಿ ಪದವಿ ಪಡೆದು ಎಂಐಟಿಯಲ್ಲಿ ಎಂಜಿನಿಯರಿಂಗ್ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕುಟುಂಬ ಒಡೆತನದ ಗ್ರೈಂಡಿಂಗ್ ವ್ಹೀಲ್ ಕಾರ್ಖಾನೆಯಲ್ಲಿ ತೊಡಗಿಸಿಕೊಂಡಿದ್ದರು. 1972ರಲ್ಲಿ ತಮ್ಮ 36ನೇ ವಯಸ್ಸಿಗೆ ಬೆಂಗಳೂರಿಗೆ ಬಂದ ಪಟೇಲ್, ಬಾಗಲೂರು ರಸ್ತೆಯ ಕೊತ್ತನೂರಿಗೆ ಬಂದು ತೋಟದ ಮನೆಯೊಂದನ್ನು ನಿರ್ಮಿಸಿ ಅಲ್ಲಿಯೇ ನೆಲೆಸಿದರು. ಮೊದಲಿನಿಂದಲೂ ಪರಿಸರ ಕಾಳಜಿ ಹೊಂದಿದ್ದ ಅವರು ತಾವು ನೆಲೆಸಿದ್ದ ಗ್ರಾಮದಲ್ಲಿ ನಿತ್ಯ ಬಂದು ಬೀಳುತ್ತಿದ್ದ ನಗರದ ತ್ಯಾಜ್ಯವನ್ನು ತಡೆಗಟ್ಟಲು ಹೋರಾಟವನ್ನೇ ನಡೆಸಿದ್ದರು.
1989-90ರ ಹೊತ್ತಿನಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯು ಹೆಣ್ಣೂರು- ಬಾಗಲೂರು ರಸ್ತೆಬದಿ ಕಸ ಸುರಿಯಲಾರಂಭಿಸಿತ್ತು.ಇದರ ವಿರುದ್ಧ ಪಟೇಲ್ ಪಾಲಿಕೆಗೆ ಪತ್ರ ಬರೆದರೂ ಸ್ಪಂದನೆ ಸಿಗಲಿಲ್ಲ. ಈ ನಡುವೆ ತ್ಯಾಜ್ಯ ರಾಶಿಯಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗಿ, ನೈರ್ಮಲ್ಯ ಹಾಳಾಗಿ ಸ್ಥಳೀಯರು ತೊಂದರೆಪಡುವಂತಾಯಿತು. ಹೀಗಿರುವಾಗಲೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮವೊಂದು ಬಾಗಲೂರಿನಲ್ಲಿ ಆಯೋಜನೆಯಾಗಿತ್ತು. ಈ ಸಂದರ್ಭವನ್ನು ಪಟೇಲ್ ಸದ್ಬಳಕೆ ಮಾಡಿಕೊಂಡರು. ಮುಖ್ಯ ನ್ಯಾಯಮೂರ್ತಿಗಳ ಭೇಟಿ ಹಿನ್ನೆಲೆಯಲ್ಲಿ ಕಸ ತೆಗೆಸುವಂತೆ ಪಟೇಲ್, ಪಾಲಿಕೆ ಆಯುಕ್ತರು, ಮೇಯರ್, ಮುಖ್ಯ ಕಾರ್ಯದರ್ಶಿ ಹಾಗೂ ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಟೆಲಿಗ್ರಾಂ ನೀಡಿದ್ದರು. 2 ದಿನಗಳ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಪಟೇಲ್‌ರನ್ನು ಸಂಪರ್ಕಿಸಿ. ಹಾರಿಕೆ ಉತ್ತರ ನೀಡಿದ್ದರು. ಅಲ್ಲದೆ, ಕಸ ಹಾಕಲು ಇರುವ ಪರ್ಯಾಯ ಪ್ರಸ್ತಾಪಿತ ಘಟಕಗಳ ಕುರಿತು ಕಡತ ನೀಡಿದ್ದರು. ಈ ಬಗ್ಗೆ ಪಟೇಲ್ ಅವರು ಸಹಾಯಕ ಆಯುಕ್ತರಿಂದ ಹಿಡಿದು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ವರೆಗೆ ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಮುಖ್ಯ ಕಾರ್ಯದರ್ಶಿಗಳು ಕಸ ಹಾಕು ಸೂಕ್ತ ಸ್ಥಳ ಗುರುತಿಸಿ ಪಾಲಿಕೆಗೆ ನೀಡುವುದಾಗಿ ಭರವಸೆ ನೀಡಿದ್ದರು. ಆಗ ಪಟೇಲರು ಪಟ್ಟಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ಏಕೆಂದರೆ ನಂತರವೂ ನಿರಂತರವಾಗಿ ಕಸ ಸುರಿಯಲಾಗುತ್ತಿತ್ತು. ಹೊಸದಾಗಿ ಗುರುತಿಸಿದ್ದ ಜಾಗಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರಿಂದ ಅನಿವಾರ್ಯವಾಗಿ ಹೆಣ್ಣುರು ಬಾಗಲೂರು ರಸ್ತೆ ಬದಿ ಕಸ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಕೈಚೆಲ್ಲಿದರಂತೆ.
1994ರ ಸೆಪ್ಟೆಂಬರ್‌ನಲ್ಲಿ ಸೂರತ್‌ನಲ್ಲಿ ಪ್ಲೇಗ್ ಕಾಣಿಸಿಕೊಂಡಾಗ ಚೆನ್ನೈನ ನಿವೃತ್ತ ಸೇನಾ ಕ್ಯಾಪ್ಟನ್ ಜೆ.ಎಸ್. ವೇಲು ಅವರ ‘ಎಕ್ಸ್‌ನೋರಾ' ಸಂಸ್ಥೆಯೊಂದಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಪಟೇಲ್ ಮುಂದಾದರು. 1994ರ ಅಕ್ಟೋಬರ್ 2ರ ಗಾಂಧಿ ಜಯಂತಿಯಂದೇ ಅಭಿಯಾನ ಆರಂಭಿಸಿದ್ದರು. ಬೆಂಗಳೂರಿನಿಂದ ದೆಹಲಿವರೆಗೆ 30 ದಿನ 30 ನಗರಗಳಿಗೆ ಭೇಟಿ ನೀಡಿದಾಗ ರಸ್ತೆಬದಿಯಲ್ಲೇ ಕಸ ಸುರಿಯುತ್ತಿರುವುದು ಬಯಲಾಗಿತ್ತು. ಇದರಿಂದ ಚಿಂತಾಕ್ರಾಂತರಾದ ಪಟೇಲ್, ಕಾರ್ಯಗಾರವೊಂದರಲ್ಲಿ ಪಾಲ್ಗೊಂಡಿದ್ದಾಗ ಇಬ್ಬರು ಪಾರ್ಸಿ ಮಹಿಳೆಯರ ಸಲಹೆ ಮೇರೆಗೆ ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ಕಾನೂನು ಹೋರಾಟ ಆರಂಭಿಸಲು ನಿರ್ಧರಿಸಿದರು.
ರಸ್ತೆ ಬದಿಯ ಕಸದ ಸಮಸ್ಯೆಯ ತೀವ್ರತೆ ಅರಿತ ನ್ಯಾಯಾಲಯ ಸಮಸ್ಯೆ ನಿವಾರಣೆಗೆ ಅಲ್ಮಿತ್ರಾ ಪಟೇಲ್ ಅವರನ್ನೂ ಒಳಗೊಂಡ ತಜ್ಞರ ಸಮಿತಿ ರಚಿಸಿತು. ಸಮಿತಿ ನೀಡಿದ ವರದಿ ಆಧರಿಸಿ ಕೇಂದ್ರ ಸರ್ಕಾರವು ‘ನಗರ ಘನ ತ್ಯಾಜ್ಯ (ನಿರ್ವಹಣೆ) ನಿಯಮಾವಳಿ 2000 ಕಾಯ್ದೆ' ಜಾರಿಗೊಳಿಸಿತು. ದೇಶದಲ್ಲಿ 1 ಲಕ್ಷ ಜನಸಂಖ್ಯೆ ಮೀರಿದ 300 ನಗರಗಳಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ಸಂಸ್ಕರಣೆ ಕೈಗೊಳ್ಳುವಂತೆ ಅಲ್ಮಿತ್ರಾ ಪಟೇಲ್ ಶಿಫಾರಸು ಮಾಡಿದರೆ ಕೇಂದ್ರ ಸರ್ಕಾರ 20 ಸಾವಿರ ಜನಸಂಖ್ಯೆ ಮೀರಿದ 4000 ನಗರಗಳಲ್ಲಿ ವೈಜ್ಞಾನಿಕವಾಗಿ ಕಸ ಸಂಸ್ಕರಣೆ ಮಾಡಬೇಕೆಂದು ಮಹತ್ತರ ಆದೇಶ ಹೊರಡಿಸಿತ್ತು. ದೇಶದ ತ್ಯಾಜ್ಯ ಸಮಸ್ಯೆ ವಿರುದ್ಧ ಅಲ್ಮಿತ್ರಾ ಅವರು ನಡೆಸಿದ ಹೋರಾಟಕ್ಕೆ ಸಂದ ಜಯ ಇದಾಗಿತ್ತು. ಆ ಮೂಲಕ ಅವರು ನಗರಗಳಲ್ಲಿ ವೈಜ್ಞಾನಿಕ ಕಸ ವಿಲೇವಾರಿಗೆ ಕಾರಣೀಭೂತರಾಗಿದ್ದರು.
ನಂತರದಲ್ಲಿ ಈ ಕಾಯ್ದೆ ಮಾರ್ಪಾಟಾಗಿದ್ದು, 2016ರ ಏಪ್ರಿಲ್‌ನಲ್ಲಿ ಹೊಸ ನಿಯಮಾವಳಿ ಜಾರಿಯಾಗಿದೆ. ಪ್ರತಿಯೊಬ್ಬರು ಮೂಲದಲ್ಲೇ ಕಸ ವಿಂಗಡಿಸುವುದು ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳು ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಸಾಗಿಸುವುದನ್ನು ಕಡ್ಡಾಯಗೊಳಿಸಿದೆ. ಪಟೇಲ್ ಅವರ ಹಲವು ಶಿಫಾರಸು, ಸಲಹೆಗಳು ಇದರಲ್ಲಿ ಅಡಕವಾಗಿವೆ. ಇಷ್ಟಕ್ಕೆ ಸುಮ್ಮನಾಗದ ಅಲ್ಮೀತ್ರಾ ಪಟೇಲ್ ಅವರು ವೈಜ್ಞಾನಿಕ ಕಸ ಸಂಸ್ಕರಣೆ ಬಗ್ಗೆ ನಿರಂತರವಾಗಿ ಸಲಹೆ, ಸೂಚನೆ ನೀಡುತ್ತಿದ್ದಾರೆ.
ವೈಜ್ಞಾನಿಕ ಕಸ ಸಂಸ್ಕರಣೆಗೆ ಆದ್ಯತೆ ನೀಡುವ ಜತೆ ಜತೆಗೆ 25 ವರ್ಷಗಳ ಹಿಂದೆ ಕೊತ್ತನೂರಿನ ಪ್ರೌಢಶಾಲೆಗೆ 12 ಕೊಠಡಿ, 2008ರಲ್ಲಿ ಥಣಿಸಂದ್ರ ಸರ್ಕಾರಿ ಪ್ರೌಢಶಾಲೆಗೆ ಅತಿ ಕಡಿಮೆ ಸಿಮೆಂಟ್ ಬಳಸಿ ಪರಿಸರಸ್ನೇಹಿ ವಿಧಾನದಡಿ 15 ಕೊಠಡಿ ನಿರ್ಮಿಸಿ ಕೊಟ್ಟಿದ್ದಾರೆ. ಕೊತ್ತನೂರಿನ 41 ಬಡ ಕುಟುಂಬಗಳ ಮನೆ ನಿರ್ಮಾಣಕ್ಕೆ ನೆರವಾಗಿದ್ದಾರೆ. ಕಸ ಸಂಸ್ಕರಣೆ ಬಗ್ಗೆ ಅಹೋರಾತ್ರಿ ಕಾರ್ಯ ನಿರ್ವಹಿಸಲು ಇಳಿ ವಯಸ್ಸಿನಲ್ಲೂ ಸಜ್ಜಾಗಿರುವುದು ಅವರ ಪರಿಸರ ಕಳಕಳಿಗೆ ಸಾಕ್ಷಿಯಾಗಿದೆ. ಸಮರ್ಥ, ಬದ್ಧತೆಯಿರುವ ಅಧಿಕಾರಿಗಳ ನಿಯೋಜನೆ, ರಾಜಕೀಯ ಇಚ್ಛಾಶಕ್ತಿ ಹಾಗೂ ಸಾರ್ವಜನಿಕರ ಪಾಲುದಾರಿಕೆ ಸಂಘಟಿತವಾಗಿ ಕಾರ್ಯಪ್ರವೃತ್ತರಾದರೆ ವರ್ಷದೊಳಗೆ ತ್ಯಾಜ್ಯ ಸಮಸ್ಯೆಯಿಂದ ಬೆಂಗಳೂರು ಹೊರ ಬರಲಿದೆ ಎಂಬ ವಿಶ್ವಾಸವನ್ನು ಅಲ್ಮಿತ್ರಾ ಪಟೇಲ್ ವ್ಯಕ್ತಪಡಿಸುತ್ತಾರೆ. ಅಲ್ಮಿತ್ರಾ ಪಟೇಲಮ್ಮನವರ ಪರಿಸರ ಪ್ರೇಮ ದೇಶಕ್ಕೆ ಮಾದರಿ.
- ಎಂ. ಕೀರ್ತಿಪ್ರಸಾದ್, ಬೆಂಗಳೂರು
(ಕನ್ನಡಪ್ರಭ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.