
ನವದೆಹಲಿ(ಜ. 15): ಬಿಎಸ್'ಎಫ್ ಜವಾನ ತೇಜ್ ಬಹದ್ದೂರ್ ಯಾದವ್ ಅವರು ಗಡಿಭಾಗದಲ್ಲಿ ಸೈನಿಕರು ಎದುರಿಸುತ್ತಿರುವ ಸಮಸ್ಯೆಯ ವಾಸ್ತವ ಚಿತ್ರಣವಿರುವ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಫೇಸ್ಬುಕ್'ನಲ್ಲಿ ಅಪ್'ಲೋಡ್ ಮಾಡಿದ ಬಳಿಕ ಇನ್ನಷ್ಟು ಸೈನಿಕರು ತಮ್ಮ ವೇದನೆಗಳನ್ನು ಹಂಚಿಕೊಳ್ಳಲು ಸೋಷಿಯಲ್ ಮೀಡಿಯಾದ ವೇದಿಕೆ ಬಳಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಖುದ್ದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪ್ರತಿಕ್ರಿಯಿಸಿದ್ದು, ಸೈನಿಕರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಸೋಷಿಯಲ್ ಮೀಡಿಯಾ ಬಳಸಬಾರದು ಎಂದು ತಾಕೀತು ಮಾಡಿದ್ದಾರೆ. "ನಿಮ್ಮಿಂದ ಸೇನಾ ಯೋಧರ ಆತ್ಮಸ್ಥೈರ್ಯಕ್ಕೆ ಧಕ್ಕೆಯಾಗುತ್ತದೆ. ಸೇನೆಯ ನೈತಿಕತೆಗೆ ಹೊಡೆತಬೀಳುತ್ತದೆ. ನಿಮ್ಮ ಕೃತ್ಯವನ್ನು ಅಪರಾಧವಾಗಿ ಪರಿಗಣಿಸಿ ಶಿಕ್ಷಿಸಬೇಕಾಗುತ್ತದೆ" ಎಂದು ಸೇನಾ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ.
ಕಳೆದ ವಾರವಷ್ಟೇ ಇನ್'ಫ್ಯಾಂಟ್ರಿ ಬ್ರಿಗೇಡ್ ನಂಬರ್ 42ರ ಲ್ಯಾನ್ಸ್ ನಾಯಕ್ ಯಗ್ಯ ಪ್ರತಾಬ್ ಸಿಂಗ್ ಅವರು ಸೇನೆಯಲ್ಲಿರುವ ಸಹಾಯಕ ಪದ್ಧತಿ ವಿರುದ್ಧ ಧ್ವನಿ ಎತ್ತಿದ್ದರು. ಬಟ್ಟೆ ಒಗೆಯಲು, ಬೂಟ್ ಪಾಲಿಷ್ ಮಾಡಲು ಮತ್ತು ನಾಯಿಯನ್ನು ವಾಕಿಂಗ್'ಗೆ ಕರೆದುಕೊಂಡುಹೋಗಲು ಅಧಿಕಾರಿಗಳು ಕಿರಿಯ ಸೈನಿಕರನ್ನು ಹೇಗೆ ಬಳಸಿಕೊಳ್ಳುತ್ತಾರೆಂದು ಅವರು ವಿವರವಾಗಿ ತಿಳಿಸಿದ್ದರು. ಈ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ್ದಕ್ಕೆ ತನ್ನನ್ನ ಟಾರ್ಗೆಟ್ ಮಾಡಲಾಯಿತು ಎಂದೂ ಅವರು ವೇದನೆ ತೋಡಿಕೊಂಡಿದ್ದರು.
ನಿನ್ನೆ ಶನಿವಾರ ಮತ್ತೊಬ್ಬ ಯೋಧ ಉಪಚಾರ ಸಹಾಯಕ ನಾಯಕ್ ರಾಮ್ ಭಗತ್ ಅವರು ಲ್ಯಾನ್ಸ್ ನಾಯಕ್ ಸಿಂಗ್ ಅವರ ತಳಮಳವನ್ನು ಸಮರ್ಥಿಸಿ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು.
"ಸೇನೆಯ ಅರ್ಧದಷ್ಟು ಯೋಧರು ಅಧಿಕಾರಿಗಳ ಡಾಗ್ ವಾಕಿಂಗ್'ಗೆ ನಿಯುಕ್ತರಾಗಿರುತ್ತಾರೆ. ಜವಾನರು ರಜೆಯ ಮೇಲೆ ಹೋದಾಗ ವಾಹನದಲ್ಲಿ ಡ್ರಾಪ್ ಸಿಗುವುದಿಲ್ಲ. ಅದೇ ಲೆಫ್ಟಿನೆಂಟ್ ಅಥವಾ ಮೇಜರ್ ಅಥವಾ ಹಿರಿಯರಿಗಾದರೆ ಕಾರ್'ನ ಸೌಲಭ್ಯವಷ್ಟೇ ಅಲ್ಲ, ಅವರ ಲಗೇಜುಗಳನ್ನು ಸಾಗಿಸಲು ಮತ್ತು ಇಳಿಸಲು ಒಬ್ಬ ಸಹಾಯಕರನ್ನು ಕೊಡಲಾಗುತ್ತದೆ. ಜವಾನರಿಗೆ ಯಾಕಿಂಥ ತಾರತಮ್ಯ?" ಎಂದು ನಾಯ್ಕ್ ಭಗತ್ ಪ್ರಶ್ನಿಸುತ್ತಾರೆ.
ಇದೇ ವೇಳೆ ಅವರು ತೇಜ್ ಬಹದೂರ್ ಯಾದವ್ ಅವರನ್ನೂ ಸಮರ್ಥಿಸಿ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. "ನಮಗೆಂದು ಲಭ್ಯವಿರುವ ಆಹಾರದಲ್ಲಿ ಶೇ.40 ಮಾತ್ರ ನಮ್ಮನ್ನು ತಲುಪುತ್ತದೆ. ಉಳಿದ ರೇಷನ್'ಗಳು ಎಲ್ಲಿ ಹೋಗುತ್ತದೆ ಎಂದು ಗೊತ್ತಿಲ್ಲ. ಇದು ನಾನೊಬ್ಬನಷ್ಟೇ ಅಲ್ಲ, ಸೇನೆಯ ಪ್ರತಿಯೊಬ್ಬ ಜವಾನನ ಧ್ವನಿಯೇ ಆಗಿದೆ. ಆದರೆ, ಎಲ್ಲಿ ಇದನ್ನು ವ್ಯಕ್ತಪಡಿಸಬೇಕು ಎಂಬುದು ಯಾರಿಗೂ ಗೊತ್ತಿಲ್ಲ" ಎಂದು ನಾಯಕ್ ರಾಮ್ ಭಗತ್ ಹೇಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.