ಕೊಡಗಲ್ಲಿ ಕ್ರೈಸ್ತ ಮಿಷನರಿಗಳಿಂದ ಮತಾಂತರ ಯತ್ನ?

By Web DeskFirst Published Sep 9, 2018, 1:12 PM IST
Highlights

ಸಂತ್ರಸ್ತರನ್ನು ಗುರಿಯಾಗಿಸಿಕೊಂಡಿರುವ ಕ್ರೈಸ್ತ ಮಿಷನರಿಗಳು ಇಂತಹ ನೋವಿನ ಸಂದರ್ಭದಲ್ಲೂ ಮತಾಂತರ ಮಾಡುವ ಪ್ರಯತ್ನಕ್ಕೆ ಕೈ ಹಾಕಿವೆ ಎಂಬ ಆರೋಪ ಕೊಡಗಿನಲ್ಲಿ ಕೇಳಿ ಬಂದಿದೆ. 

ಮಡಿಕೇರಿ/ಗೋಣಿಕೊಪ್ಪಲು :  ಕೊಡಗಿನ ಪ್ರಕೃತಿ ವಿಕೋಪ ಸಂತ್ರಸ್ತರನ್ನು ಗುರಿಯಾಗಿಸಿಕೊಂಡಿರುವ ಕ್ರೈಸ್ತ ಮಿಷನರಿಗಳು ಇಂತಹ ನೋವಿನ ಸಂದರ್ಭದಲ್ಲೂ ಮತಾಂತರ ಮಾಡುವ ಪ್ರಯತ್ನಕ್ಕೆ ಕೈ ಹಾಕಿವೆ ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲೆಗೆ ಜಿಲ್ಲೆಯೇ ನೋವುಣ್ಣುತ್ತಿರುವ ಇಂತಹ ಸಂದರ್ಭದಲ್ಲೂ ಮಿಷನರಿಗಳು ಕೊಡವ ಭಾಷೆಯಲ್ಲಿ ಬೈಬಲ್‌ ಗ್ರಂಥವನ್ನು ಹೊರತಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಇದೇ ವೇಳೆ ಕ್ರೈಸ್ತ ಮಿಷನರಿಗಳು ಮಹಾಮಳೆಗೆ ತುತ್ತಾದ ರೈತ, ಕಾರ್ಮಿಕ ಕುಟುಂಬಗಳಿಗೆ ಆಮಿಷ ತೋರಿಸಿ ಮತಾಂತರಕ್ಕೆ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿ ಶ್ರೀಮಂಗಲ ಪೊಲೀಸ್‌ ಠಾಣೆಯ ಮುಂದೆ ಪ್ರತಿಭಟನೆಯೂ ನಡೆದಿದೆ.

ಕೊಡವ ಬೈಬಲ್‌ಗೆ ಆಕ್ರೋಶ:

ಬೈಬಲ್‌ ಅನ್ನು ‘ದೇವಡ ಪುದಿಯ ಒಪ್ಪಂದ’ ಎಂಬ ಶೀರ್ಷಿಕೆಯಲ್ಲಿ ಕೊಡವ ಭಾಷೆಯಲ್ಲಿ ಮುದ್ರಿಸಲಾಗಿದೆ. ಜೊತೆಗೆ ಕೊಡವ ಭಾಷೆಯಲ್ಲಿ ‘ಕೊಡವ ತಕ್‌ ಬೈಬಲ್‌’ ಆ್ಯಪ್‌ನಲ್ಲೂ ಇದೇ ಬೈಬಲ್‌ ಪುಸ್ತಕ ಲಭ್ಯವಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಠಾಣೆ ಮುಂದೆ ಪ್ರತಿಭಟನೆ:

ದಕ್ಷಿಣ ಕೊಡಗಿನ ಕುರ್ಚಿ, ಬೀರುಗ, ನಾಲ್ಕೇರಿ, ಕುಮಟೂರು, ಶ್ರೀಮಂಗಲ ವ್ಯಾಪ್ತಿಯಲ್ಲಿನ ಬಡ ಕೃಷಿಕ, ರೈತ, ಕಾರ್ಮಿಕ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಕ್ರೈಸ್ತ ಮಿಷನರಿಗಳು ಮತಾಂತರ ಮಾಡುತ್ತಿವೆ ಎಂದು ಆರೋಪಿಸಿ ಸ್ಥಳೀಯ ಗ್ರಾಮಸ್ಥರು ಶ್ರೀಮಂಗಲ ಪೊಲೀಸ್‌ ಠಾಣೆ ಎದುರು ಶನಿವಾರ ಪ್ರತಿಭಟಿಸಿದರು. ಇಂಥವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರು ಸಂಸಾರ ಸಹಿತರಾಗಿ ಪೊಲೀಸ್‌ ಠಾಣೆಯ ಮುಂದೆ ಧರಣಿ ನಡೆಸಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರಕೃತಿ ವಿಕೋಪದ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಕೆಲವರು ಹಣ ಗಳಿಸಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಮತಾಂತರ ಮಾಡುವ ಕೆಲಸಕ್ಕೆ ಇಳಿದಿದ್ದು ಇಂತಹ ಬೆಳವಣಿಗೆಗಳು ದುರದೃಷ್ಟಕರ.

-ಬೊಳ್ಳಜಿರ ಅಯ್ಯಪ್ಪ ಕೊಡವ ಮಕ್ಕಡ ಕೂಟದ ಅಧ್ಯಕ್ಷ

click me!