ಖರ್ಗೆ, ಡಿಕೆಶಿ, ಪರಮೇಶ್ವರ್ : ಯಾರಿಗೆ ಸಿಎಂ ಹುದ್ದೆ..?

By Web DeskFirst Published Aug 31, 2018, 11:43 AM IST
Highlights

ಮುಂದಿನ ಐದು ವರ್ಷಗಳ ಕಾಲ ಎಚ್‌.ಡಿ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿ ಇರಲಿದ್ದಾರೆ. ಹೀಗಾಗಿ ಇಂತಹ ಚರ್ಚೆಗಳೇ ಅಪ್ರಸ್ತುತ. ಆದರೆ ಕಾಂಗ್ರೆಸ್ ನಿಂದ ಯಾರು ಬೇಕಾದರೂ 5 ವರ್ಷದ ಬಳಿಕ ಸಿಎಂ ಆಗಬಹುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 
 

ಬೆಂಗಳೂರು :  ಕಾಂಗ್ರೆಸ್‌ ಪಕ್ಷದಲ್ಲಿ ಆರ್‌.ವಿ. ದೇಶಪಾಂಡೆ ಮಾತ್ರವಲ್ಲದೇ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್‌, ಡಾ.ಜಿ. ಪರಮೇಶ್ವರ್‌ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ಆದರೆ, ಮುಂದಿನ ಐದು ವರ್ಷ ಕಾಂಗ್ರೆಸ್‌ ಮುಖ್ಯಮಂತ್ರಿ ಎಂಬ ಪ್ರಶ್ನೆ ಉದ್ಭವಿಸುವುದೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಆರ್‌.ವಿ. ದೇಶಪಾಂಡೆ ಅವರ ಬಗ್ಗೆ ಏನು ಹೇಳಿದ್ದಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಹಾಗೂ ಆರ್‌.ವಿ. ದೇಶಪಾಂಡೆ ಅವರ ಹೇಳಿಕೆಗಳ ಬಗ್ಗೆ ಬೇಕಾದಷ್ಟುಕಥೆಗಳನ್ನು ಕಟ್ಟಲಾಗಿದೆ. ಅದೊಂದು ಗಾಳಿ ಸುದ್ದಿ ಎಂಬುದು ಗೊತ್ತಿದ್ದರೂ ಮಸಾಲೆ ಹಾಕಿ ತೋರಿಸಲಾಗಿದೆ. ಮುಂದಿನ ಐದು ವರ್ಷಗಳ ಕಾಲ ಎಚ್‌.ಡಿ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿ ಇರಲಿದ್ದಾರೆ. ಹೀಗಾಗಿ ಇಂತಹ ಚರ್ಚೆಗಳೇ ಅಪ್ರಸ್ತುತ ಎಂದು ಹೇಳಿದರು.

ಬೇಷರತ್‌ ಬೆಂಬಲ ನೀಡಿದ್ದೇವೆ:

ಸಮ್ಮಿಶ್ರ ಸರ್ಕಾರ ರಚನೆ ವೇಳೆಯೇ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲಾಗಿದೆ. ಜತೆಗೆ ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ಗೆ ಬೇಷರತ್‌ ಬೆಂಬಲ ನೀಡಿದೆ. ಬೇಷರತ್‌ ಬೆಂಬಲ ನೀಡಿದ ಬಳಿಕ ಬೇರೆ ಮುಖ್ಯಮಂತ್ರಿ ವಿಚಾರ ಉದ್ಭವಿಸುವುದಿಲ್ಲ. ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆ ಬಗ್ಗೆ ಮಾತನಾಡಿರುವುದಾಗಿ ಸ್ಪಷ್ಟನೆಯನ್ನೂ ನೀಡಿದ್ದಾರೆ. ಆದರೆ, ಈ ಸ್ಪಷ್ಟನೆ ಯಾರಿಗೂ ಬೇಕಾಗಿಲ್ಲ ಎಂಬಂತಾಗಿದೆ ಎಂದರು.

ಒಂದು ವೇಳೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದರೆ ಆರ್‌.ವಿ. ದೇಶಪಾಂಡೆ ಜತೆಗೆ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್‌, ಡಾ.ಜಿ. ಪರಮೇಶ್ವರ್‌ ಸೇರಿದಂತೆ ಹಲವರು ಮುಖ್ಯಮಂತ್ರಿ ಅಭ್ಯರ್ಥಿಗಳಿದ್ದಾರೆ ಎಂದು ಹೇಳಿದರು.

100 ದಿನಗಳ ಆಡಳಿತ 5 ವರ್ಷಕ್ಕೆ ಅಡಿಪಾಯ:

ಸಮ್ಮಿಶ್ರ ಸರ್ಕಾರವು ಸಾಲ ಮನ್ನಾ, ಬರ-ನೆರೆ ವಿಚಾರದಲ್ಲಿ ಉತ್ತಮ ಕಾರ್ಯನಿರ್ವಹಣೆ ಜತೆಗೆ ಹಿಂದಿನ ಸರ್ಕಾರದ ಜನಪ್ರಿಯ ಕಾರ್ಯಕ್ರಮ ಮುಂದುವರಿಸುವ ಮೂಲಕ ನೂರು ದಿನಗಳ ಆಡಳಿತವನ್ನು ಯಶಸ್ವಿಯಾಗಿ ಪೂರೈಸಿದೆ. ಇದು ಮುಂದಿನ ಐದು ವರ್ಷದ ಆಡಳಿತಕ್ಕೆ ಅಡಿಪಾಯ ಆಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳು ವಿಧಾನಸಭೆ ಚುನಾವಣೆಯಲ್ಲಿ ವೈರಿಗಳಾಗಿದ್ದೆವು. ಆದರೂ ಸಮ್ಮಿಶ್ರ ಸರ್ಕಾರ ರಚನೆ ಬಳಿಕ ಒಂದಾಗಿ ಯಶಸ್ವಿಯಾಗಿ 100 ದಿನದ ಆಡಳಿತ ಪೂರ್ಣಗೊಳಿಸಿದ್ದೇವೆ. ಸಮ್ಮಿಶ್ರ ಸರ್ಕಾರದಿಂದ ಯಶಸ್ವಿಯಾಗಿ ಅಧಿವೇಶನ ನಡೆಸಿದೆವು. ಉತ್ತಮ ಬಜೆಟ್‌, ಸಿದ್ದರಾಮಯ್ಯ ಬಜೆಟ್‌ ಕಾರ್ಯಕ್ರಮ ಮುಂದುವರಿಕೆ ಜತೆಗೆ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ. ಈ 100 ದಿನಗಳ ಸಾಧನೆ ಮುಂದಿನ ಐದು ವರ್ಷಕ್ಕೆ ಉತ್ತಮ ತಳಹದಿ ಆಗಲಿದೆ ಎಂದರು.

ಕೇಂದ್ರ ಸರ್ಕಾರ ಟೇಕಾಫ್‌ ಆಗಿಲ್ಲ:  ವಿರೋಧ ಪಕ್ಷದವರು ರಾಜ್ಯ ಸರ್ಕಾರ ಟೇಕಾಫ್‌ ಆಗಿಲ್ಲ ಎಂದು ಹೇಳುತ್ತಾರೆ. ಯಾವಾಗ ಸರ್ಕಾರ ಬೀಳುತ್ತದೆಯೋ ಎಂದು ಕೊಂಕು ಮಾತನಾಡಿದ್ದಾರೆ. ಮೊದಲು ನಾಲ್ಕೂವರೆ ವರ್ಷವಾದರೂ ಟೇಕಾಫ್‌ ಆಗದ ಕೇಂದ್ರ ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡಬೇಕು. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರೂ ಸಹ ಟೇಕಾಫ್‌ ಆಗಿಲ್ಲ. ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಸಂಸತ್‌ನಲ್ಲಿ ಮಾತನಾಡಿಲ್ಲ. ಮೊದಲು ಇವರು ರಾಜಕೀಯ ಬಿಟ್ಟು ರಾಜ್ಯದ ಪರ ಕೆಲಸ ಮಾಡಲಿ ಎಂದರು ಸಲಹೆ ನೀಡಿದರು.

ಜೆಡಿಎಸ್‌ ರಾಜ್ಯಾಧ್ಯಕ್ಷರಿಗೆ ಸಮನ್ವಯ ಸಮಿತಿಯಲ್ಲಿ ಅವಕಾಶ ನೀಡುವ ಸಂಬಂಧ ಮಾತನಾಡಿದ ಅವರು, ಇದು ಅಷ್ಟುಮಹತ್ವದ ವಿಚಾರವಲ್ಲ. ಪಕ್ಷಗಳು ಆತಂಕರಿಕವಾಗಿ ಚರ್ಚಿಸಿ ಇಂತಹವುಗಳನ್ನು ನಿರ್ಧರಿಸುತ್ತವೆ. ಹೀಗಾಗಿ ಆ.31 ರಂದು ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರುವುದಿಲ್ಲ ಎಂದರು.

6 ತಿಂಗಳಿಗೆ ಸಚಿವರ ಮೌಲ್ಯಮಾಪನ

ಸಚಿವರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಹೀಗಾಗಿ ಸಚಿವರ ಮೌಲ್ಯಮಾಪನಕ್ಕೆ ಇದು ಸರಿಯಾದ ಸಂದರ್ಭ ಅಲ್ಲ. ಆರು ತಿಂಗಳ ಬಳಿಕ ಪ್ರತಿ ಸಚಿವರ ಕಾರ್ಯವೈಖರಿಯನ್ನು ಮೌಲ್ಯಮಾಪನ ಮಾಡುತ್ತೇವೆ. ಪಕ್ಷದ ವತಿಯಿಂದಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ, ಸಹಕಾರ ನೀಡುತ್ತೇವೆ. ಸರ್ಕಾರಕ್ಕೆ ಅಂಕ, ಗ್ರೇಡ್‌ ನೀಡುವ ಕಾರ್ಯ ಮಾಡಲ್ಲ. ರಾಜ್ಯದ ಪ್ರಗತಿ ಆಗಬೇಕು ಎಂಬುದಷ್ಟೇ ನಮ್ಮ ಆಶಯ ಎಂದರು.

click me!