
ಬೆಂಗಳೂರು(ಮೇ 20): ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ಪ್ರಕರಣದಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿ ಸುವರ್ಣನ್ಯೂಸ್'ಗೆ ಲಭಿಸಿದೆ. ಅನುರಾಗ್ ತಿವಾರಿಗೆ ಹಲವು ದಿನಗಳಿಂದ ಜೀವ ಬೆದರಿಕೆ ಇತ್ತು. ಇದರಿಂದಾಗಿ ಅವರು ಆಗಾಗ ಬೆಂಗಳೂರು ಬಿಟ್ಟು ಹೋಗುತ್ತಿದ್ದರು ಎಂಬ ಮಾಹಿತಿ ಸುವರ್ಣನ್ಯೂಸ್'ಗೆ ಲಭಿಸಿದೆ. ಅವರ ಫೋನ್'ನಲ್ಲಿದ್ದ ವಾಯ್ಸ್ ರೆಕಾರ್ಡ್ ಡಿಲೀಟ್ ಆಗಿದೆ ಎಂದೂ ಅವರ ಸೋದರ ಮಯಂಕ್ ತಿವಾರಿ ಆರೋಪಿಸಿದ್ದಾರೆ. ತಮ್ಮ ಸೋದರನ ಸಾವಿನ ವಿಚಾರದಲ್ಲಿ ಉ.ಪ್ರ. ಪೊಲೀಸರ ನಡೆ ಅನುಮಾನಾಸ್ಪದವಾಗಿದೆ ಎಂದು ಹೇಳಿರುವ ಮಯಂಕ್ ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ಸುವರ್ಣನ್ಯೂಸ್'ಗೆ ಸಿಕ್ಕ ಎಕ್ಸ್'ಕ್ಲೂಸಿವ್ ಮಾಹಿತಿ ಪ್ರಕಾರ ಅನುರಾಗ್ ತಿವಾರಿ ಸಾವಿನ ಪ್ರಕರಣದಲ್ಲಿ ವಿಧಿವಿಜ್ಞಾನ ನಿರ್ದೇಶಕರ ನಡೆ ಹಲವು ಅನುಮಾನಗಳನ್ನು ಹುಟ್ಟಿಸುವಂತಿದೆ. ಇವರು ತರಾತುರಿಯಲ್ಲಿ ಪರೀಕ್ಷೆ ಮುಗಿಸಲು ಯತ್ನಿಸಿದರೆಂದು ಮಯಂಕ್ ತಿವಾರಿ ಆರೋಪಿಸಿದ್ದಾರೆ. ರಿಪಬ್ಲಿಕ್ ಟಿವಿಯ ವರದಿಗಾರರೊಂದಿಗೆ ನೀಡಿದ ಸಂದರ್ಶನದಲ್ಲಿ ಮಯಂಕ್ ತಿವಾರಿ, ಪೊಲೀಸರ ನಡೆಗಳನ್ನೂ ಪ್ರಶ್ನಿಸಿದ್ದಾರೆ.
ಅನುರಾಗ್'ನ ಮೊಬೈಲ್'ನಲ್ಲಿ ಆಹಾರ ಇಲಾಖೆ ಹಗರಣದ ಮಾಹಿತಿ ಇತ್ತು. ಹಗರಣಕ್ಕೆ ಸಾಕ್ಷಿಯಾಗಬಹುದಾಗಿದ್ದ ವಾಯ್ಸ್ ರೆಕಾರ್ಡ್ ಅದರಲ್ಲಿ ಇತ್ತು. ಈಗ ಅವರ ಮೊಬೈಲ್'ನಲ್ಲಿದ್ದ ವಾಯ್ಸ್ ರೆಕಾರ್ಡ್ ಡಿಲೀಟ್ ಆಗಿದೆ. ಆ ರೆಕಾರ್ಡ್ ಎಲ್ಲಿ ಹೋಯ್ತು, ಯಾರು ಡಿಲೀಟ್ ಮಾಡಿದ್ರು? ತಿವಾರಿ ತಂಗಿದ್ದ ರೂಮನ್ನು ಪೊಲೀಸರು ಯಾಕೆ ಸೀಜ್ ಮಾಡಿಲ್ಲ? ಎಂದು ಮಯಂಕ್ ತಿವಾರಿ ಪ್ರಶ್ನಿಸಿದ್ದಾರೆ.
ಜೀವ ಬೆದರಿಕೆ:
ಮಯಂಕ್ ತಿವಾರಿ ಪ್ರಕಾರ ತಮ್ಮ ಸೋದರನ ಹತ್ಯೆಯಾಗಿರುವುದು ಖಚಿತವಾಗಿದೆ. ಎರಡು ತಿಂಗಳ ಹಿಂದೆಯೇ ಅನುರಾಗ್'ಗೆ ಜೀವ ಬೆದರಿಕೆ ಇತ್ತಂತೆ. ಮನೆಗೆ ಫೋನ್ ಮಾಡಿ ಈ ವಿಷಯವನ್ನೂ ತಿಳಿಸಿದ್ದಾರೆ. ಬೆಂಗಳೂರಿಗೆ ಬರಲು ಹೊರಟಿದ್ದ ಅವರ ತಂದೆ-ತಾಯಿಯನ್ನ ಬರಬೇಡವೆಂದು ಅವರು ತಡೆದಿದ್ದರು. ಬೆಂಗಳೂರಿನಲ್ಲಿ ಪರಿಸ್ಥಿತಿ ಸರಿ ಇಲ್ಲ. ಭಯದ ವಾತಾವರಣ ಇದೆ. ಇಲ್ಲಿ ಬರಬೇಡಿ ಎಂದು ತಂದೆ-ತಾಯಿಗೆ ಅನುರಾಗ್ ತಿವಾರಿ ಸೂಚಿಸಿದ್ದರು ಎನ್ನುತ್ತಾರೆ ಮಯಂಕ್ ತಿವಾರಿ.
ಮಯಂಕ್ ತಿವಾರಿ ಪ್ರಕಾರ ಮಾರ್ಚ್ 20-25ರ ಅವಧಿಯಲ್ಲಿ ತಮ್ಮ ಸೋದರ ಬಹಳ ನೊಂದಿದ್ದರು. ಬೆಂಗಳೂರನ್ನು ತೊರೆಯಲು ಸಾಕಷ್ಟು ಪ್ರಯತ್ನಿಸಿದ್ದರು. ರಜೆ ನೀಡುವಂತೆ ಅವರು ಕೋರಿದ್ದರೂ ರಜೆ ಸ್ಯಾಂಕ್ಷನ್ ಆಗಲಿಲ್ಲ. ಇವರ ಹತ್ಯೆಗೆ ಸಾಕಷ್ಟು ಪಿತೂರಿ ನಡೆದಿರಬಹುದು ಎಂದು ಮಯಂಕ್ ಅನುಮಾನ ಪಡುತ್ತಾರೆ.
ಮಯಂಕ್ ಜೊತೆ ರಿಪಬ್ಲಿಕ್ ವರದಿಗಾರ ನಡೆಸಿದ ಚುಟುಕು ಸಂದರ್ಶನದ ವಿವರ;
ರಿಪಬ್ಲಿಕ್ ರಿಪೋರ್ಟರ್: ಎಫ್ ಐಆರ್ ಯಾವಾಗ ದಾಖಲಿಸುತ್ತೀರಿ?
ಮಯಂಕ್ ತಿವಾರಿ: ನಿನ್ನೆ ಸಹೋದರನ ಅಂತ್ಯಕ್ರಿಯೆ ಇದ್ದಿದ್ದರಿಂದ ಆಗಲಿಲ್ಲ. ನಾಳೆ ಎಫ್'ಐಆರ್ ದಾಖಲಿಸಲು ಚಿಂತನೆ ನಡೆಸಿದ್ದೇವೆ. ಒಂದು ವೇಳೆ ಸಿಎಂ ಭೇಟಿಯಾಗಲು ಅವಕಾಶ ಸಿಕ್ಕರೆ ಸಿಬಿಐ ತನಿಖೆ ನಡೆಸುವಂತೆ ಮನವಿ ಮಾಡಿಕೊಳ್ಳುತ್ತೇವೆ. ವಿಧಿ ವಿಜ್ಞಾನ ಇಲಾಖೆಯ ನಿರ್ದೇಶಕರ ಮೇಲೆ ಹಲವು ಆರೋಪಗಳಿವೆ. ನಿರ್ದೇಶಕರು ಈಗಾಗಲೇ ಬೇಲ್ ಮೇಲೆ ಹೊರಗಿದ್ದಾರೆ. ಖಾನ್ ಎಂಬಾತನ ನಡೆ ಹಲವು ಅನುಮಾನ ಹುಟ್ಟುಹಾಕಿದೆ. ತರಾತುರಿಯಲ್ಲಿ ಪರೀಕ್ಷೆ ಮುಗಿಸಲು ಈತ ಯತ್ನಿಸಿದ್ದಾನೆ. ಆತ ಇದ್ದರೆ ತನಿಖೆ ಸರಿಯಾಗಿ ಆಗುವುದಿಲ್ಲ. ಎಸ್ ಐಟಿ ತನಿಖೆಯಿಂದ ನ್ಯಾಯ ಸಿಗುವ ವಿಶ್ವಾಸವಿಲ್ಲ. ಆದ್ದರಿಂದ ನಾವು ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದೇವೆ.
ರಿಪೋರ್ಟರ್: ಅನುರಾಗ್ ಹತ್ಯೆಯಾಗಿದೆ ಎಂದು ಅನಿಸುತ್ತಿದೆಯಾ?
ಮಯಂಕ್: 100 ಪರ್ಸೆಂಟ್. ಎರಡು ತಿಂಗಳ ಹಿಂದೆಯೇ ಆತನಿಗೆ ಜೀವ ಬೆದರಿಕೆ ಇತ್ತು. ಮಾರ್ಚ್ 20ರಿಂದ 25ನೇ ತಾರೀಖಿನ ಒಳಗೆ ಬಹಳ ನೊಂದಿದ್ದ. ಜೀವ ಭಯದಿಂದ ಬೆಂಗಳೂರು ಬಿಟ್ಟಿದ್ದ. ಫೋನ್ ಮೂಲಕ ಜೀವ ಬೇದರಿಕೆ ವಿಷಯ ತಿಳಿಸಿದ್ದ. ಬೆಂಗಳೂರಿಗೆ ತೆರಳುವವರಿದ್ದ ನಮ್ಮ ತಂದೆ-ತಾಯಿಗೆ, ಇಲ್ಲಿಯ ಪರಿಸ್ಥಿತಿ ಸರಿಯಿಲ್ಲ. ಇಲ್ಲಿಗೆ ಬರುವುದು ಬೇಡ ಎಂದು ಅನುರಾಗ್ ಮೆಸೇಜ್ ಹಾಕಿದ್ದ. ನಂತರ ನನಗೂ ಕೂಡ ಕರೆ ಮಾಡಿದ್ದ. ಬಳಿಕ ನಾನು ಅವರನ್ನ ಟ್ರೇಸ್ ಮಾಡಲು ಮುಂದಾದೆನಾದರೂ ಆಗ ಆತನ ನಂಬರ್ ಸ್ವಿಚ್ ಆಫ್ ಆಗಿತ್ತು. ಆತನ ಗೆಳೆಯನಿಗೆ ಕರೆ ಮಾಡಿ ವಿಷಯ ತಿಳಿಸಿ, ಅನುರಾಗ್'ನನ್ನು ಹುಡುಕುವಂತೆ ಮನವಿ ಮಾಡಿಕೊಂಡಿದ್ದೆ. 2 ದಿನಗಳ ನಂತರ ನಮ್ಮ ಸಂಪರ್ಕಕ್ಕೆ ಸಿಕ್ಕಿದ ಅನುರಾಗ್, ಈ ವೇಳೆ ಬೆಂಗಳೂರಿನಲ್ಲಿ ಪರಿಸ್ಥಿತಿ ಸರಿಯಿಲ್ಲ, ನಾನಿಲ್ಲಿ ಇರಲು ಸಾಧ್ಯವಿಲ್ಲ ಎಂದಿದ್ದ. 2 ತಿಂಗಳಿಂದ ಅನುರಾಗ್ ತಿವಾರಿಗೆ ಜೀವ ಬೆದರಿಕೆ ಇತ್ತು. ಇದು ಸಹಜ ಸಾವು ಆಗಿರಲು ಸಾಧ್ಯವಿಲ್ಲ. ರಜೆ ನೀಡುವಂತೆ ಮನವಿ ಮಾಡಿದ್ದರೂ ರಜೆ ನೀಡಿರಲಿಲ್ಲ.
ರಿಪೋರ್ಟರ್: ಮೊಬೈಲ್ ಕಾಲ್ ರೆಕಾರ್ಡ್ ಅಳಿಸಿ ಹಾಕಿದ್ದಾರಾ?
ಮಯಂಕ್: ಹೌದು, ಮೊಬೈಲ್'ನ ಕಾಲ್ ರೆಕಾರ್ಡ್'ಗಳನ್ನು ಅಳಿಸಿಹಾಕಲಾಗಿದೆ. ಸಾವಿನ ಹಿಂದಿನ ದಿನ ತಾಯಿ ಕೂಡ ಕರೆ ಮಾಡಿದ್ದರು. ಆದರೆ ಅದರ ರೆಕಾರ್ಡ್ ಕೂಡ ಇಲ್ಲ. ಇದನ್ನ ಯಾರು ಅಳಿಸಿ ಹಾಕಿದ್ದಾರೆಂದು ತಿಳಿಯುತ್ತಿಲ್ಲ. ತಿವಾರಿ ಮೊಬೈಲ್'ನ ಪ್ಯಾಟರ್ನ್ ಲಾಕ್ ಮಾಡಿ ಇಡುತ್ತಿದ್ದರು. ಎಲ್ಲಾ ವ್ಯವಹಾರಗಳನ್ನೂ ಮೊಬೈಲ್ ಮೂಲಕವೇ ಮಾಡುತ್ತಿದ್ದರು. ನೆಟ್ ಬ್ಯಾಂಕಿಂಗ್, ಫ್ಲೈಟ್ ಬುಕ್ಕಿಂಗ್ ಹೀಗೆ ಹಲವು ವ್ಯವಹಾರಗಳನ್ನ ಮೊಬೈಲ್ ಮೂಲಕವೇ ಮಾಡುತ್ತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.