
ರಾಜ್ಯ ರಾಜಕೀಯ ರಂಗದಲ್ಲಿ ಅಪ್ಪ - ಮಕ್ಕಳ ಪಕ್ಷವೆಂದೆ ಗುರುತಿಸಿಕೊಂಡಿರುವ ಜೆಡಿಎಸ್ ಪಕ್ಷದಲ್ಲಿ ಹೊಸದೊಂದು ಬದಲಾವಣೆಯಾಗುವ ನಿರೀಕ್ಷೆಗಳಿವೆ. ಎಲ್ಲವು ಅಂದುಕೊಂಡಂತೆ ಆದ್ರೆ ಅಪ್ಪ ಮಕ್ಕಳ ಪಕ್ಷ ಎನ್ನುವ ಹಣೆ ಪಟ್ಟಿಯೂ ಕಳಚಿ ಬೀಳುವುದರಲ್ಲಿ ಅನುಮಾನವಿಲ್ಲ.
ಮುಂಬರುವ ಚುನಾವಣೆಯಲ್ಲಿ ಗೆದ್ದು ಪಕ್ಷವನ್ನು ಅಧಿಕಾರಕ್ಕೆ ತರುವ ಪಣತೊಟ್ಟಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರ ಆಸೆಗೆ ಆರಂಭದಲ್ಲೇ ತೊಡಕುಂಟಾಗಿದೆ ಎಂದರೆ ತಪ್ಪಾಗಲಾರದು. ಮುಂಬರುವ ಚುನಾವಣೆಗೆ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸುತ್ತಾರೆ ಎಂಬ ಹೇಳಿಕೆಗೆ ಅಪ್ಪ ಮಕ್ಕಳ ಪಕ್ಷವೆಂಬ ಹಣೆ ಪಟ್ಟಿ ಕಳಚಿ ಬೀಳುತ್ತೆ ಎಂಬ ನಿರೀಕ್ಷೆಗಳಿದ್ದವು. ಆದ್ರೆ ಈ ನಿರ್ಧಾರಕ್ಕೆ ಕುಟುಂಬದ ಸಹಮತ ಇಲ್ಲಾ ಎನ್ನಲಾಗಿದ್ದು ಇದರಿಂದ ಪಕ್ಷದಲ್ಲಿ ಮತ್ತೆ ಅಸಮಾಧನ ಭೀತಿ ಎದುರಾಗಿದೆ.
ಇಷ್ಟಕ್ಕೆಲ್ಲಾ ಕಾರಣ, ರೇವಣ್ಣ ಕುಟುಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡದಿರುವುದು. ಇದರ ಹೊರತಾಗಿಯೂ ಹೇಳುವುದಾದರೆ, ರೇವಣ್ಣನ ಕುಟುಂಬ ಈಗಾಗಲೇ ಚುನಾವಣೆ ತಯಾರಿಗೆ ಹಾಸನದಲ್ಲಿ ತಯಾರಿಗೆ ಮುಂದಾಗಿದೆ. ಒಂದೆಡೆ ರೇವಣ್ಣ ತನ್ನ ಕ್ಷೇತ್ರದಲ್ಲಿ ಒಡಾಟವನ್ನು ಬಿರುಸಿಗೊಳಿಸಿದ್ದಾರೆ. ಅಲ್ಲದೆ ಹಾಸನದ ಇನ್ನೆರಡು ಕ್ಷೇತ್ರಗಳ ಮೇಲೆಯೂ ರೇವಣ್ಣ ಗಮನ ಹರಿಸಿದ್ದು ಮೂಲಗಳ ಪ್ರಕಾರ ಹಾಸನ ಜಿಲ್ಲಾ ಪಂಚಾಯತ್ನ ಹಳೇಕೋಟೆ ಕ್ಷೇತ್ರದ ಸದಸ್ಯರಾಗಿರುವ ಭವಾನಿ ರೇವಣ್ಣ, ಬೇಲೂರು ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಕ್ಷೇತ್ರದಾದ್ಯಂತ ಓಡಾಟ ಆರಂಭಿಸಿದ್ದಾರೆ. ಇದರ ಹೊರತಾಗಿ ಪುತ್ರ ಪ್ರಜ್ವಲ್ ರೇವಣ್ಣ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಪ್ರತಿನಿಧಿಸುತ್ತಿರುವ ಅರಕಲಗೋಡು ಕ್ಷೇತ್ರದಲ್ಲಿ ಕಣ್ಣಿಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಇನ್ನೂ ಎರಡನೆ ಪುತ್ರ ಸೂರಜ್ ಕೂಡ ಹೊಳೆನರಸೀಪುರ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದು ರಾಜಕೀಯ ಪ್ರವೇಶ ಮಾಡಿದ್ರು ಅಚ್ಚರಿಯಿಲ್ಲ ಎನ್ನುತ್ತಿವೆ ಮೂಲಗಳು.
ಆದರೆ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮಾತ್ರ ತಮ್ಮ ಹಿಂದಿನ ಹೇಳಿಕೆಯನ್ನೇ ಮತ್ತೆ ಸಮರ್ಥಿಸಿಕೊಂಡಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕುಟುಂಬದಿಂದ ನಾನು ಮತ್ತು ರೇವಣ್ಣ ಮಾತ್ರ ಸ್ಫರ್ಧಿಸುವುದಾಗಿ ಪುನರುಚ್ಚರಿಸಿದ್ದಾರೆ. ಅಲ್ಲದೇ ಇದು ನಿಶ್ಚಿತ ಎನ್ನುವ ಧಾಟಿಯಲ್ಲೇ ಮಾತನಾಡಿದ್ದಾರೆ.
ಆದರೆ ಸದ್ಯ ಕುಮಾರಸ್ವಾಮಿಯವರ ಹೇಳಿಕೆಯ ಹಿಂದೆ ದೇವೆಗೌಡರ ಲೆಕ್ಕಾಚಾರಗಳಿವೆ ಎಂದು ಹೇಳಲಾಗುತ್ತಿದೆ. ಪಕ್ಷಕ್ಕೆ ಮೊದಲೇ ಕುಟುಂಬ ಪಕ್ಷ ಎಂಬ ಹಣೆಪಟ್ಟಿ ಇದ್ದು, ವಿಧಾನಸಭಾ ಚುನಾವಣೆಯಲ್ಲಿ ಕುಟುಂಬದ ಉಳಿದವರನ್ನು ಕಣಕ್ಕಿಳಿಸದೇ ಜನರ ನಾಡಿಮಿಡಿತ ಪರೀಕ್ಷಿಸುವುದು ಒಂದೆಡೆ ದೊಡ್ಡಗೌಡರ ಚಿಂತನೆಯಾದ್ರೆ, ಮತ್ತೊಂದೆಡೆ ಅಗತ್ಯ ಬಿದ್ರೆ ಲೋಕಸಭಾ ಚುನಾವಣೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ತಮ್ಮ ಕುಟುಂಬದ ಉಳಿದವರನ್ನು ಕಣಕ್ಕಿಳಿಸುವ ತಂತ್ರಕ್ಕೆ ಮುಂದಾದ್ರು ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಚುನಾವಣೆ ಸಂದರ್ಭದಲ್ಲಿ ದೊಡ್ಡ ಗೌಡರ ನಿರ್ಧಾರವೇ ಅಂತಿಮವಾಗಲಿದ್ದು ಗೌಡರು ಯಾವ ತಂತ್ರಕ್ಕೆ ಮುಂದಾಗುತ್ತಾರೆ ಎಂದು ಕಾದು ನೋಡಬೇಕಿದೆ.
ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.