ಮುಂದೊಂದು ದಿನ ಒಡೆದು ಹೋಗಿರುವ ಭಾರತದ ಜಾಗ ಮತ್ತೆ ದೇಶದ ತೆಕ್ಕೆಗೆ ಸೇರಲಿಲ್ಲವಾದರೆ ನಾವು ಭಾರತೀಯರೇ ಅಲ್ಲ’ ದುರ್ಬಲರನ್ನು ಪ್ರಧಾನಿ ಮಾಡಲು ಮಾಡಿದ ದೇಶ ವಿಭಜನೆಯನ್ನೂ ಒಪ್ಪಲಾಗದು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಪರೋಕ್ಷವಾಗಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು : ‘ಸ್ವಾತಂತ್ರ್ಯ ಸಂದರ್ಭದಲ್ಲಿ ಯಾರದ್ದೋ ತೀಟೆಗೆ ಅಂದಿನ ನಾಯಕತ್ವ ಹೇಡಿತನದ, ದುರ್ಬಲ ಪ್ರಧಾನಿಯನ್ನು ಆಯ್ಕೆ ಮಾಡಲು ನಡೆಸಿದ ದೇಶ ವಿಭಜನೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಮುಂದೊಂದು ದಿನ ಒಡೆದು ಹೋಗಿರುವ ಭಾರತದ ಜಾಗ ಮತ್ತೆ ದೇಶದ ತೆಕ್ಕೆಗೆ ಸೇರಲಿಲ್ಲವಾದರೆ ನಾವು ಭಾರತೀಯರೇ ಅಲ್ಲ’ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಪರೋಕ್ಷವಾಗಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.
ಜಾಗೃತ ಭಾರತಿ ಪ್ರಕಾಶನ ವತಿಯಿಂದ ನಗರದ ಡಿವಿಜಿ ರಸ್ತೆಯ ಅಬಲಾಶ್ರಮದಲ್ಲಿ ಭಾನುವಾರ ಆಯೋಜಿಸಲಾ ಗಿದ್ದ ‘ವಿಭಜಿತ ಭಾರತ- 1947’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇವತ್ತಿನ ಬಹುತೇಕ ರಾಜಕಾರಣಿಗಳು, ಬುದ್ಧಿಜೀವಿಗಳು, ಬರಹಗಾರರಿಗೆ ಇತಿಹಾಸವೇ ಗೊತ್ತಿಲ್ಲ. ಹೀಗಾಗಿ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ.
ಯಾರದ್ದೋ ತೆವಲಿಗೆ, ಯಾರಿಗೋ ನಿದ್ದೆ ಬರದಿದ್ದಕ್ಕೆ ಹಿಂದೆ ಭಾರತದ ವಿಭಜನೆ ಆಯಿತು. ಅಂದಿನ ನಾಯಕತ್ವ ಹೇಡಿತನದ, ದುರ್ಬಲ ವ್ಯಕ್ತಿ ಪ್ರಧಾನಿ ಆಗಬೇಕು ಎಂಬ ಕಾರಣಕ್ಕೆ ದೇಶ ವಿಭಜನೆಗೆ ಸಹಿ ಹಾಕಿತು. ರಾಜಕೀಯವಾಗಿ ಇದನ್ನು ಒಪ್ಪಿದರೂ, ಸಾಂಸ್ಕೃತಿಕವಾಗಿ ಒಪ್ಪಲು ಸಾಧ್ಯವೇ ಇಲ್ಲ. ದೇಶದಿಂದ ಬೇರೆಯಾಗಿರುವ ಭಾಗ ಮುಂದೊಂದು ದಿನ ಮತ್ತೆ ದೇಶದ ತೆಕ್ಕೆಗೆ ಸೇರಲಿಲ್ಲವಾದರೆ ನಾವು ಭಾರತೀಯರೇ ಅಲ್ಲ. ಅದು ಪ್ರೀತಿಯಿಂದ ಆಗಬಹುದು, ಇಲ್ಲಾ ರಾಜಕೀಯವಾಗಿ ಆಗಬಹುದು ಎಂದು ಅವರು ಪ್ರತಿಪಾದಿಸಿದರು.
ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಹೊರಗಿನವರಿಂದ ದೇಶ ವಿಭಜನೆಯಾಗಲಿಲ್ಲ, ದೇಶದ ಮಣ್ಣಿನ ಮಕ್ಕಳೇ ಅಂದು ವಿಭಜನೆಗೆ ಅಂಕಿತ ಹಾಕಿದ್ದರಿಂದ ಭಾರತ ವಿಭಜನೆ ಆಯಿತು. ಕೆಲವರು ಆಗೋದು ಆಯ್ತು ಈಗ್ಯಾಕೆ ಅದರ ಬಗ್ಗೆ ಮಾತನಾಡೋದು
ಎನ್ನುತ್ತಾರೆ. ಅಂಥವರಿಗೆ ಇತಿಹಾಸದ ಪರಿಜ್ಞಾನವೇ ಇಲ್ಲ. ಕೆಂಪಂಗಿದಾರರಿಗೆ ತಮ್ಮ ಬಗ್ಗೆಯೇ ಅರಿವಿಲ್ಲ. ಕೆಂಪಂಗಿ ಬುದ್ಧಿಜೀವಿಗಳಿಗೆ ದೇಶದ ಬಗ್ಗೆ ಏನೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಅಪ್ಪ ಅಮ್ಮನ ಪರಿಚಯವೇ ಇಲ್ಲದವರ ಕುಲವೊಂದು ಬೆಳೆಯುತ್ತಿದೆ. ಅವರು ಜಾತ್ಯತೀತರು ಎಂದು ಟೀಕಿಸಿದ ಅವರು, ಚಟಕ್ಕಾಗಿ ನನಗೆ ರಾಜಕೀಯ ಬೇಕಾಗಿಲ್ಲ. ನಾನು ಹೀಗೆ ಮಾತಾಡಿದರೆ ಜನರು ಮತ ಹಾಕೋದಿಲ್ಲ ಎಂದು ಕೆಲವರು ಹೇಳಿದರು. ನನ್ನ ರಕ್ತದ ಪರಿಚಯ
ಹೇಳಿಕೊಳ್ಳಲಾಗದ ಮತ ಯಾರಿಗೆ ಬೇಕು ಎಂದು ಪ್ರಶ್ನಿಸಿದ ಹೆಗಡೆ, ದೇಶದ ಬಗ್ಗೆ ನಿಷ್ಠುರವಾದ ಸತ್ಯ ಸಂಗತಿಗಳನ್ನೊಳಗೊಂಡ ಪುಸ್ತಕ ಬರೆದರೆ ಅದನ್ನು ಹೊರತರುವ ಧಮ್ ರಾಷ್ಟ್ರೋತ್ಥಾನದಂತಹ ಪ್ರಕಾಶನಕ್ಕೆ ಬಿಟ್ಟು ಬೇರೆ ಯಾವ ಪ್ರಕಾಶನಕ್ಕೂ ಇಲ್ಲ ಎಂದರು.