ಪಾಪಪ್ರಜ್ಞೆ ಇದ್ದ ಕಾಂಗ್ರೆಸಿಗರು ಬಿಜೆಪಿ ಸೇರಲಿ : ಅನಂತ್ ಕುಮಾರ್ ಹೆಗಡೆ

By Suvarna Web DeskFirst Published Feb 26, 2018, 9:20 AM IST
Highlights

. ಈ ದೇಶದ ಭೌಗೋಳಿಕ ಚೌಕಟ್ಟಿನೊಂದಿಗೆ ಜನರು, ಅವರ ಸಂಸ್ಕೃತಿ, ಸಂಪ್ರದಾಯ, ಪರಂಪರೆ, ಇತಿಹಾಸ, ನಂಬಿಕೆ ಹೀಗೆ ಎಲ್ಲವನ್ನೂ ಒಳಗೊಂಡಿರುವ ಸಮಗ್ರ ವ್ಯಕ್ತಿತ್ವವೇ ರಾಷ್ಟ್ರೀಯತೆ ಎಂದು ಕೇಂದ್ರ ಕೌಶಲ್ಯಾಭಿ ವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ವ್ಯಾಖ್ಯಾನ ಮಾಡಿದ್ದಾರೆ.

ಬೆಂಗಳೂರು : ಈಗ ಕೆಲವರು ನಾವೂ ಭಾರತೀಯರು, ರಾಷ್ಟ್ರೀಯತಾವಾದಿಗಳೇ. ಬಿಜೆಪಿಯವರು ಮಾತ್ರ ಗುತ್ತಿಗೆ ತೆಗೆದುಕೊಂಡಿದ್ದಾರಾ ಎನ್ನುತ್ತಿದ್ದಾರೆ. ಆದರೆ, ಅವರಿಗೆ ರಾಷ್ಟ್ರೀಯತೆ ಕುರಿತಂತೆ ನೈಜ ಅರ್ಥವೇ ತಿಳಿದಿಲ್ಲ.

ಯಾರೋ ಹೇಳಿಕೊಟ್ಟಿದ್ದನ್ನು ಯಥಾವತ್ತಾಗಿ ಬಾಯಿಪಾಠ ಮಾಡಿ ಭಾಷಣ ಬಿಗಿಯುವುದು ರಾಷ್ಟ್ರೀಯತೆ ಎನಿಸಿಕೊಳ್ಳುವುದಿಲ್ಲ. ಈ ದೇಶದ ಭೌಗೋಳಿಕ ಚೌಕಟ್ಟಿನೊಂದಿಗೆ ಜನರು, ಅವರ ಸಂಸ್ಕೃತಿ, ಸಂಪ್ರದಾಯ, ಪರಂಪರೆ, ಇತಿಹಾಸ, ನಂಬಿಕೆ ಹೀಗೆ ಎಲ್ಲವನ್ನೂ ಒಳಗೊಂಡಿರುವ ಸಮಗ್ರ ವ್ಯಕ್ತಿತ್ವವೇ ರಾಷ್ಟ್ರೀಯತೆ ಎಂದು ಕೇಂದ್ರ ಕೌಶಲ್ಯಾಭಿ ವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ವ್ಯಾಖ್ಯಾನ ಮಾಡಿದ್ದಾರೆ.

ಡಾ.ಎಚ್.ಎಂ. ಪ್ರಸನ್ನ ಫೌಂಡೇಷನ್, ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ, ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ‘ಯುವಶಕ್ತಿ ಸಬಲೀಕರಣ-ಸಂವಾದ’ ಕಾರ್ಯಕ್ರಮ ದಲ್ಲಿ ಅವರು ಕಾಂಗ್ರೆಸ್ ಪಕ್ಷದ ನಡೆ ಕುರಿತಂತೆ ವಾಗ್ದಾಳಿ ನಡೆಸಿದರು.

ತಮಗೆ ತಾವೇ ಬುದ್ಧಿವಂತರೆಂದು ಭಾವಿಸುವವರು ಆಷಾಢಭೂತಿತನದ ಕುರ್ಚಿಯಲ್ಲಿ ಕುಳಿತು ಆಡಳಿತ ನಡೆಸಿಕೊಂಡು ಬಂದಿದ್ದಾರೆ. ಕೆಲವರು ವಿವಿಧ ದೇಶಗಳಲ್ಲಿನ ತತ್ವಜ್ಞಾನ, ಕ್ರಾಂತಿಯ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ. ಆದರೆ, ಸಾವಿರಾರು ವರ್ಷಗಳಿಂದ ಈ ಮಣ್ಣಿನಲ್ಲಿ ನಡೆದಿರುವ ಸಮಗ್ರ ಅಭಿವೃದ್ಧಿಯ ಚಿತ್ರಣವನ್ನು ತೆರೆದಿರುವ ತಾಕತ್ತು ಅವರಿಗಿಲ್ಲ. ಕೇವಲ ಭೌಗೋಳಿಕ ಚೌಕಟ್ಟನ್ನು ಮಾತ್ರ ರಾಷ್ಟ್ರೀಯತೆ ಎನ್ನುವುದು ಸಣ್ಣತನವಾಗುತ್ತದೆ ಎಂದು ಹೇಳಿದರು.

ಇಂದು ಬುದ್ಧಿಜೀವಿಗಳು ಎನಿಸಿಕೊಂಡವರ ಎದುರುಗಡೆ ಮಾತನಾಡುವುದು ಉದ್ಧಟತನವಾಗು ತ್ತದೆ. ನಮಗೆ ಸತ್ಯ ಹೇಳಲು ಅವಕಾಶವಿಲ್ಲ. ಹಾಗೇನಾದರೂ ಹೇಳಿದರೆ ಕೋಮುವಾದಿಗಳು, ವಿವಾದವನ್ನು ಸೃಷ್ಟಿ ಮಾಡುವವರು ಎಂದು ಬಿಂಬಿಸಲಾಗುತ್ತದೆ. ಇಂತಹ ವಿಕೃತ ಬುದ್ಧಿಜೀವಿಗಳಿಗೆ ಧಿಕ್ಕಾರ ಹೇಳಬೇಕು. ಈ ದೇಶದ ಅಂತಃಸತ್ವವನ್ನು ಕೊಂದಿರುವವರು ಹೊರಗಿನಿಂದ ಬಂದಿರುವ ಉಗ್ರ ಗಾಮಿಗಳು, ದಾಳಿಕೋರರಲ್ಲ. ನಮ್ಮ ಮನೆಯೊಳಗೆಯೇ ಹುಟ್ಟಿ ಬೆಳೆದಿರುವ ಹೆಗ್ಗಣಗಳು ಎಂದು ಟಾಂಗ್ ನೀಡಿದರು.

ಕಾಂಗ್ರೆಸ್ಸಿಗರು ಬಿಜೆಪಿ ಸೇರಲಿ: ಈ ನಾಡಿನ ಜನರಿಗೆ ಸ್ವಾಭಿಮಾನದ ಬದುಕು ಕಲ್ಪಿಸುವ ಕನಸು ಕಾಂಗ್ರೆಸ್’ಗೆ ಇದ್ದಿದ್ದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಹಿಂದುಳಿದವರು ಎಂಬ ಶಬ್ದ ಬಳಕೆಯಲ್ಲಿ ಇರುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಬಡವರ ಬದುಕಿಗೆ ಬೆಲೆಯೇ ಇಲ್ಲ. ಬಡವರು ಎಂದಿಗೂ ಬೇಡುತ್ತಿರಬೇಕು, ನಾವು ಭಿಕ್ಷೆ ಒಗೆಯುತ್ತಿರಬೇಕು ಎಂಬ ಧೋರಣೆ ಕಾಂಗ್ರೆಸ್‌ನಲ್ಲಿದೆ. ಕಾಂಗ್ರೆಸ್ ಮುಖಂಡರಿಗೆ ನಿಜಕ್ಕೂ ನಾಚಿಕೆಯಾಗಬೇಕು. ಅವರಿಗೆ ಪಾಪಪ್ರಜ್ಞೆ ಇದ್ದರೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಲಿ ಎಂದು ಆಹ್ವಾನವಿತ್ತರು.

ಕೆಂಪಂಗಿ ದೊರೆಗಳಿಂದ ಈ ದೇಶ ಹಾಳಾಗಿದೆ. ನಿರಂತರ ದಾಸ್ಯದ ಪರಿಣಾಮವಾಗಿ ನಮ್ಮ ಮನಸ್ಸು ತುಂಡಾಗಿದೆ. ಸಮಾಜದಲ್ಲಿ ನಾವೆಲ್ಲರೂ ಒಂದೇ ಎಂಬ ಭ್ರಾತೃತ್ವದ ಭಾವನೆ ಮರೆಯಾಗಿದೆ. ವ್ಯಕ್ತಿ ಯನ್ನು ಜಾತಿ ಆಧಾರದಲ್ಲಿ ಗುರುತಿಸಲಾಗುತ್ತಿದೆ. ನಮ್ಮ ನಾಡಿಗೆ ಸಾವಿರಾರು ವರ್ಷದ ಪರಂಪರೆ ಇದೆ, ಹಿಂದುತ್ವ ಈ ದೇಶದ ರಾಷ್ಟ್ರೀಯತೆ ಎಂಬ ಕಲ್ಪನೆ ಯಾರಲ್ಲೂ ಇಲ್ಲ. ನಮ್ಮಲ್ಲಿನ ಕೀಳರಿಮೆಯೇ ನಮ್ಮ ದೇಶದ ಅಂತಃಸತ್ವವನ್ನು ಕುಗ್ಗಿಸಿದೆ. ಇಂದು ನಮ್ಮೊಳಗಿನ ನಮ್ಮತನವನ್ನು ಮೀರಬೇಕಿದೆ ಎಂದರು.

click me!