
ಬೆಂಗಳೂರು(ಆ.12): ಬಿಜೆಪಿ ಚಾಣಾಕ್ಯ ಎಂದೇ ಪ್ರಖ್ಯಾತಿ ಪಡೆದಿರುವ ಅಮಿತ್ ಶಾ ಇವತ್ತು ರಾಜ್ಯಕ್ಕೆ ಆಗಮಿಸಲಿದ್ದಾರೆ. ಇದು ರಾಜ್ಯ ಬಿಜೆಪಿಗಷ್ಟೇ ಅಲ್ಲ , ಕಾರ್ಯಕರ್ತರಿಗೂ ಖುಷಿ ನೀಡಿದ್ದು ನವ ಚೈತನ್ಯ ಮೂಡಿಸಿದೆ. ಇನ್ನು ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ವಾಸ್ತವ್ಯ ಹೂಡಲಿರುವ ಅಮಿತ್ ಶಾ , ಏನೇನ್ ಮೋಡಿ ಮಾಡಲಿದ್ದಾರೆ ಎನ್ನುವ ಬಗ್ಗೆ ವಿಪಕ್ಷಗಳು ತಲೆಕೆಡಿಸಿಕೊಂಡಿವೆ.
ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸುತ್ತಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ನವ ಚೈತನ್ಯ ಮೂಡಿಸಿದೆ. ರಾಷ್ಟ್ರೀಯ ಅಧ್ಯಕ್ಷರು ಆಗಮಿಸುತ್ತಿರುವುದರಿಂದ ಪಕ್ಷದಲ್ಲಿ ಎಲ್ಲವೂ ಸರಿಹೋಗಬಹುದು. ಇರುವ ಎಲ್ಲಾ ಬಿಕ್ಕಟ್ಟುಗಳೂ ಪರಿಹಾರವಾಗಬಹುದು. ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷವೇ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಬಹುದು ಎಂಬ ಆಸೆಗಣ್ಣಿನಿಂದ ಅಸಂಖ್ಯಾತ ಕಾರ್ಯಕರ್ತರು ಎದುರು ನೋಡುತ್ತಿದ್ದಾರೆ.
ಬಿಜೆಪಿ- ಸಂಘಪರಿವಾರ ಕಂದಕ ನಿವಾರಿಸಲು ಯತ್ನ
ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಉಲ್ಬಣಿಸಿ ಶೀತಲ ಸಮರಕ್ಕೆ ಅಮಿತ್ ಶಾ ಫುಲ್ ಸ್ಟಾಪ್ ಹಾಕಲಿದ್ದಾರೆ. ಈ ಹಿಂದೆ ದೆಹಲಿಗೆ ಉಭಯ ನಾಯಕರನ್ನು ಕರೆದು ಮಾತನಾಡಿಸಿದ್ದರೂ ಒಳಗೊಳಗೆ ಇಬ್ಬರ ನಡುವಿನ ಮುನಿಸು ಹಾಗೆಯೇ ಇತ್ತು. ಈಗ ಮುನಿಸಿನ ಗಾಯಕ್ಕೆ ಅಮಿತ್ ಶಾ ಮದ್ದರೆಯಲಿದ್ದಾರೆ. ಇನ್ನು ಆರ್ಎಸ್ಎಸ್ ಮತ್ತು ಬಿಜೆಪಿ ನಡುವಿನ ಕಂದಕವೂ ಇದೇ ಸಂದರ್ಭಲ್ಲಿ ನಿವಾರಣೆಯಾಗಲಿದೆ ಎನ್ನಲಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರ ನಿರ್ಧಾರದಿಂದ ಮುನಿಸಿಕೊಂಡಿದ್ದ ಆರ್ಎಸ್ಎಸ್ ನಾಯಕರು ಪಕ್ಷಕ್ಕೆ ಯಾವುದೇ ಸಲಹೆ ಸೂಚನೆಗಳನ್ನು ನೀಡದೆ ಅಂತರ ಕಾಯ್ದುಕೊಂಡಿದ್ದರು . ಈವೊಂದು ಕಂದಕವನ್ನು ಅಮಿತ್ ಶಾ ಮುಚ್ಚಿ ಹಾಕಲಿದ್ದಾರೆ ಎನ್ನಲಾಗುತ್ತಿದೆ.
ಇಂದು ರಾಜ್ಯಕ್ಕೆ ಅಮಿತ್ ಶಾ ಆಗಮನ
ಕಳೆದ ಐದಾರು ತಿಂಗಳಿಂದ ರಾಜ್ಯ ಬಿಜೆಪಿಯಲ್ಲಿ ಹೇಳಿಕೊಳ್ಳುವಂತಹ ಹುರುಪಿರಲಿಲ್ಲ. ಅದರಲ್ಲೂ ಕಳೆದ ಮೂರ್ನಾಲ್ಕು ತಿಂಗಳಿಂದ ಅಮಿತ್ ಶಾ ಬರುವಿಕೆಗಾಗಿಯೇ ರಾಜ್ಯ ಬಿಜೆಪಿ ಕಾದುಕುಳಿತಿತ್ತು. ಇಂದು ಬೆಳಗ್ಗೆ 10.45ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ಆಗಮಿಸಲಿದ್ದಾರೆ. ಸಂಜೆ ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು, ಹೆಸರಾಂತ ವೈದ್ಯರು, ಚಿತ್ರನಟರ ಜೊತೆ ಖಾಸಗಿ ಹೊಟೇಲ್ ನಲ್ಲಿ ಸಂವಾದ ನಡೆಸಲಿದ್ದಾರೆ. ಜೊತೆಗೆ ಪಕ್ಷದ ವಿವಿಧ ಘಟಕಗಳ ಜೊತೆಗೂ ಅಮಿತ್ ಶಾ ಮೀಟಿಂಗ್ ನಡೆಸಲಿದ್ದಾರೆ. ಇದರ ನಡುವೆ ಭಾನುವಾರ ಆದಿಚುಂಚನಗಿರಿಗೆ ಮಠಕ್ಕೆ ಭೇಟಿ ನೀಡಿ ಅಲ್ಲಿ ನಿರ್ಮಲಾನಂದನಾಥ ಶ್ರೀಗಳ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ ಪಕ್ಷದ ವಿಸ್ತಾರಕರಿಂದ ರಾಜ್ಯದ ಗ್ರೌಂಡ್ ರಿಪೋರ್ಟ್ ಪಡೆಯಲಿರುವ ಶಾ, ಮುಂದಿನ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸಲಿದ್ದಾರೆ. ಮೂರು ದಿನ ನಗರದಲ್ಲಿ ಬೀಡುಬಿಡಲಿರು ಶಾ, ಸುಮಾರು 25 ಮೀಟಿಂಗ್'ಗಳನ್ನ ನಡೆಸಲಿದ್ದಾರೆ
ಹೀಗೆ ರಾಜ್ಯದಲ್ಲಿ ಮೂರು ದಿನಗಳ ಕಾಲ ಅಮಿತ್ ಶಾ ರಾಜ್ಯದಲ್ಲಿ ವಾಸ್ತವ್ಯ ಹೂಡಲಿದ್ದು , ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಬಗ್ಗೆ ಮಾಸ್ಟರ್ ಪ್ಲಾನ್ ಮಾಡಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.