
ನವದೆಹಲಿ(ಜ.27): ವೀರಶೈವ ಲಿಂಗಾಯತ ಸಮುದಾಯದ ಪವಿತ್ರ ಧಾರ್ಮಿಕ ಕ್ಷೇತ್ರ ಎಂದೇ ಗುರುತಿಸಲ್ಪಡುವ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಹಿಂದುಳಿದ ಮತ್ತು ದಲಿತ ವರ್ಗಗಳ ಸಂಘಟನೆಯಾಗಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಬೃಹತ್ ಸಮಾವೇಶ ಯಶಸ್ವಿಯಾದ ಬೆನ್ನಲ್ಲೇ ಶುಕ್ರವಾರ ದೆಹಲಿಯಲ್ಲಿ ಅದರ ಭವಿಷ್ಯವೂ ನಿರ್ಧಾರವಾಗುವ ಸಾಧ್ಯತೆಯಿದೆ. ಬ್ರಿಗೇಡ್ ಹುಟ್ಟುಹಾಕಿರುವ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಬ್ಬರ ನಡುವಿನ ತೀವ್ರ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಂಧಾನ ಸಭೆ ನಡೆಸಲಿದ್ದು, ಕೇವಲ ಬಿಜೆಪಿ ಪಾಳೆಯದಲ್ಲಷ್ಟೇ ಅಲ್ಲದೆ ಒಟ್ಟಾರೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟುಕುತೂಹಲ ಕೆರಳಿಸಿದೆ.
ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇದರ ಕೇಂದ್ರ ಬಿಂದುಗಳಾಗಿರುವ ಯಡಿಯೂರಪ್ಪ, ಈಶ್ವರಪ್ಪ, ರಾಜ್ಯದವರೇ ಆಗಿರುವ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಶುಕ್ರವಾರ ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲೇ ಇರುವ ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್ ಅವರೂ ಸಭೆಯಲ್ಲಿ ಜತೆಗೂಡಲಿದ್ದಾರೆ.
ಸಂಜೆ ದೆಹಲಿಯ ಅಕ್ಬರ್ ರಸ್ತೆಯಲ್ಲಿನ ತಮ್ಮ ನಿವಾಸದಲ್ಲೇ ಸಭೆ ಕರೆದಿರುವ ಅಮಿತ್ ಶಾ ಅವರು ವಿವರವಾದ ಅಭಿಪ್ರಾಯ ಸಂಗ್ರಹಿಸಿದ ನಂತರ ಬ್ರಿಗೇಡ್ ವಿರೋಧಿಸುತ್ತಿರುವ ಯಡಿಯೂರಪ್ಪ ಅವರನ್ನು ಸಮಾಧಾನಗೊಳಿಸುತ್ತಾರೆಯೇ ಅಥವಾ ಬ್ರಿಗೇಡ್‌ನಿಂದ ಹಿಂದೆ ಸರಿಯುವುದಿಲ್ಲ ಎನ್ನುತ್ತಿರುವ ಈಶ್ವರಪ್ಪ ಅವರನ್ನು ಮೆತ್ತಗಾಗಿಸುತ್ತಾರೆಯೇ ಎಂಬುದು ಕುತೂಹಲಕರವಾಗಿದೆ.
ಬ್ರಿಗೇಡ್ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಉದ್ಭವಿಸಿರುವ ಬಿಕ್ಕಟ್ಟು ತಾರ್ಕಿಕ ಹಂತಕ್ಕೆ ತಲುಪಿರುವುದರಿಂದ ಬಿಕ್ಕಟ್ಟು ನಿವಾರಣೆಗೆ ರಾಜ್ಯ ನಾಯಕರು ಹಾಗೂ ಸಂಘ ಪರಿವಾರದ ಮುಖಂಡರೂ ಅಸಹಾಯಕರಾಗಿ ಕೈಚೆಲ್ಲಿದ್ದಾರೆ. ಹೀಗಾಗಿ ಅಮಿತ್ ಶಾ ಇದನ್ನು ಹೇಗೆ ನಿಭಾಯಿಸುತ್ತಾರೆ? ಉಭಯ ನಾಯಕರ ಪೈಕಿ ಒಬ್ಬರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದೂ ಅಲ್ಲದೆ, ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದು ಖುದ್ದು ಅಮಿತ್ ಶಾ. ಇದೀಗ ಆ ಯಡಿಯೂರಪ್ಪ ಅವರ ಕಾರ್ಯವೈಖರಿ ಪ್ರಶ್ನಿಸಿ, ಅವರ ವಿರುದ್ಧ ಪರೋಕ್ಷವಾಗಿ ಬಂಡಾಯವನ್ನೇ ಸಾರಿರುವ ಈಶ್ವರಪ್ಪ ಹಾಗೂ ಅವರ ಬ್ರಿಗೇಡ್ ಚಟುವಟಿಕೆಗಳಿಗೆ ಸಂಘ ಪರಿವಾರದ ಬೆಂಬಲ ಇದೆ ಎಂಬುದು ಗುಟ್ಟಿನ ಸಂಗತಿಯೇನಲ್ಲ. ಹೀಗಿರುವಾಗ, ಸಂಘ ಪರಿವಾರವನ್ನು ಕಡೆಗಣಿಸಿ ಈಶ್ವರಪ್ಪ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಾರೆಯೇ ಎಂಬುದು ಅನುಮಾನ. ಹೀಗಾಗಿ, ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರಿಬ್ಬರಿಗೂ ಒಪ್ಪಿಗೆಯಾಗುವಂಥ ಸಂಧಾನ ಸೂತ್ರ ರೂಪಿಸುವತ್ತ ಒತ್ತು ನೀಡಬಹುದು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಮುಕುಂದ್ ಭಾಗಿ?: ಶುಕ್ರವಾರದ ಸಂಧಾನ ಸಭೆಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯದ ಸಂಘ ಪರಿವಾರದ ಮುಖಂಡ ಮುಕುಂದ್ ಅವರನ್ನೂ ಆಹ್ವಾನಿಸಿದ್ದಾರೆ ಎನ್ನಲಾಗಿದ್ದು, ಇದು ಈಶ್ವರಪ್ಪ ಅವರಿಗೆ ಬಲ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸದ್ಯ ರಾಜ್ಯದ ಸಂಘ ಪರಿವಾರದಲ್ಲಿ ಮುಕುಂದ್ ಪ್ರಭಾವಿ ಮುಖಂಡರು. ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್ ಅವರು ರಾಜ್ಯಕ್ಕೆ ಆಗಮಿಸಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರಿಬ್ಬರಿಗೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದಾಗ ಮಧ್ಯಸ್ಥಿಕೆ ವಹಿಸಿದ್ದು ಇದೇ ಮುಕುಂದ್.
ಆಗ ಮುಕುಂದ್ ಅವರು ಈಶ್ವರಪ್ಪಗೆ ಪಕ್ಷದ ಒಬಿಸಿ, ಎಸ್‌ಸಿ ಹಾಗೂ ಎಸ್‌ಟಿ ಮೋರ್ಚಾಗಳ ಉಸ್ತುವಾರಿ ನೀಡುವುದೂ ಸೇರಿದಂತೆ ಹಲವು ಸಲಹೆಗಳನ್ನು ನೀಡಿದ್ದರು. ಅದಕ್ಕೆ ಸಭೆಯಲ್ಲಿ ಒಪ್ಪಿಗೆ ನೀಡಿದ್ದ ಯಡಿಯೂರಪ್ಪ ಅವರು ನಂತರ ಪಾಲಿಸಿರಲಿಲ್ಲ. ಇದು ಈಶ್ವರಪ್ಪ ಅವರ ಆಕ್ರೋಶಕ್ಕೂ ಕಾರಣವಾಗಿ ಬ್ರಿಗೇಡ್ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದರು ಎನ್ನಲಾಗಿದೆ. ಈ ಸಭೆಯ ಬಗ್ಗೆ ಆಗ ಮುಕುಂದ್ ಅವರು ರಾಮ್‌ಲಾಲ್ ಅವರಿಗೆ ಮಾಹಿತಿಯನ್ನೂ ನೀಡಿದ್ದರು. ಇದೀಗ ಅಮಿತ್ ಶಾ ಸಂಧಾನ ಸಭೆಗೆ ಮುಕುಂದ್ ಅವರಿಗೂ ಆಹ್ವಾನ ನೀಡಿರುವುದು ಕುತೂಹಲಕರ ವಾಗಿದೆ.
2 ಹಂತದ ಸಭೆ? ರಾಜ್ಯ ಬಿಜೆಪಿಯ ಬಿಕ್ಕಟ್ಟು ಬಗೆಹರಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕರೆದಿರುವ ಸಭೆ ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.ಅಂದರೆ, ಅಮಿತ್ ಶಾ ಅವರು ವೈಯಕ್ತಿಕವಾಗಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಮೊದಲು ಈಶ್ವರಪ್ಪ ಮತ್ತು ಸಂತೋಷ್ ಅವರಿಂದ ಅಭಿಪ್ರಾಯ ಸಂಗ್ರಹ. ನಂತರ ರಾಮ್‌ಲಾಲ್, ಮುರಳೀಧರರಾವ್ ಅವರೊಂದಿಗೆ ಮಾತುಕತೆ. ಅಂತಿಮವಾಗಿ ಯಡಿಯೂರಪ್ಪ ಸೇರಿದಂತೆ ಎಲ್ಲ ಮುಖಂಡರನ್ನು ಒಳಗೊಂಡು ಸಭೆ ನಡೆಸಿ ಸಂಧಾನ ಸೂತ್ರ ಸಿದ್ಧಪಡಿಸಲಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.