
ವಿಶಾಖಪಟ್ಟಣದ ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಧೋನಿ ನೇತೃತ್ವದ ಭಾರತೀಯ ಪಡೆ ನ್ಯೂಜಿಲೆಂಡ್ ತಂಡವನ್ನು 190 ರನ್ನುಗಳಿಂದ ಮಣಿಸಿ ಭರ್ಜರಿ ಜಯ ಸಾಧಿಸಿ ಏಕದಿನ ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಟೆಸ್ಟ್ ಹಾಗೂ ಒಂದು ದಿನದ ಸರಣಿಯನ್ನು ವಿಜಯಿಸಿದೆ.
ಸರಣಿಯಲ್ಲಿ ಮೊದಲ ಬಾರಿಗೆ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ ಹೇಳಿಕೊಳ್ಳುವ ಆರಂಭವೇನು ಸಿಗಲಿಲ್ಲ. ಅಜಿಂಕ್ಯಾ ರಹಾನೆ ಮತ್ತು ರೋಹಿತ್ ಶರ್ಮಾ 40 ರನ್ಗಳ ಜೊತೆಯಾಟವಾಡಿದರು. ಆದರೆ ರಹಾನೆ 20 ರನ್ಗೆ ನಿರ್ಗಮಿಸಿದರು. ಇಲ್ಲಿಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಜೊತೆಯಾಗಿ 79 ರನ್ಗಳ ಜೊತೆಯಾಟವಾಡಿದರು.
ರೋಹಿತ್ ಶರ್ಮಾ 3 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 70 ರನ್'ಗಳೊಂದಿಗೆ ಅರ್ಧ ಶತಕ ಸಿಡಿಸಿದರು. ರೋಹಿತ್ ನಿರ್ಗಮಿಸಿದ ನಂತರ ಸ್ಫೋಟಕ ಆಟಗಾರ ವಿರಾಟ್ ಕೋಹ್ಲಿ ಅವರು ನಾಯಕ ಧೋನಿ ಅವರೊಂದಿಗೆ ಇನಿಂಗ್ಸ್ ಆರಂಭಿಸಿ 1 ಸಿಕ್ಸ್'ರ್ ಹಾಗೂ 2 ಬೌಂಡರಿಗಳೊಂದಿಗೆ 65 ರನ್ ಗಳಿಸಿ ಪೆವಿಲಿಯನ್'ಗೆ ತೆರಳಿದರು.
ಫೈನಲ್ ಪಂದ್ಯದಲ್ಲಿ ಕರ್ನಾಟಕದ ಆಟಗಾರ ಮನೀಶ್ ಪಾಂಡೆ ಶೂನ್ಯಕ್ಕೆ ಔಟಾದರು. ಅಂತಿಮವಾಗಿ ನಾಯಕ ಮಹೇಂದ್ರ ಸಿಂಗ್ ಧೋನಿ 41, ಕೇದಾರ್ ಜಾಧವ್ 39 ಹಾಗೂ ಅಕ್ಷರ್ ಪಟೇಲ್ 24 ರನ್ ಗಳಿಸುವುದರೊಂದಿಗೆ ಭಾರತ 50 ಓವರ್'ಗಳಿಗೆ 6 ವಿಕೇಟ್'ಗಳ ನಷ್ಟಕ್ಕೆ 269 ರನ್ ಗಳಿಸಿತು.
ನ್ಯೂಜಿಲೆಂಡ್ ಪರ ಬೌಲ್ಟ್ ಹಾಗೂ ಸೋಧಿ ತಲಾ 2 ಪಡೆದರೆ ನಿಶಾಮ್ ಮತ್ತು ಸಂತ್ನರ್ ಒಂದೊಂದು ವಿಕೇಟ್ ಕಬಳಿಸಿದರು.
ಮ್ಯಾಜಿಕ್ ಮಾಡಿದ ಅಮಿತ್ ಮಿಶ್ರಾ
ಭಾರತದ 270 ರನ್'ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಬಂದಿತು. ಆರಂಭ ಆಟಗಾರರಾದ ಗುಪ್ಟಿಲ್ ಹಾಗೂ ಲಾತಮ್ ಅವರನ್ನು ವೇಗದ ಬೌಲರ್'ಗಳಾದ ಉಮೇಶ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಔಟ್ ಮಾಡಿದರು.
ನಂತರ ಕೆಲ ಹೊತ್ತು ಆಟ ಆಡಿದ ವಿಲಿಯಮ್ಸ್'ನ್ ಮತ್ತು ರೇಸ್ ಟೇಲರ್ ಅವರನ್ನು ಸ್ಪಿನ್ನರ್'ಗಳಾದ ಅಮಿತ್ ಮಿಶ್ರಾ ಹಾಗೂ ಅಕ್ಷರ್ ಪಟೇಲ್ ಪೆವಿಲಿಯನ್'ಗೆ ಕಳುಹಿಸಿದರು.
ಅನಂತರ ಬಂದ 6 ಬ್ಯಾಟ್ಸ್'ಮೆನ್'ಗಳ್ಯಾರು ಒಂದಂಕಿಯ ಮೊತ್ತವನ್ನು ಗಳಿಸಲಿಲ್ಲ. ಇವರಲ್ಲಿ ನಾಲ್ವರನ್ನು ಅಮಿತ್ ಮಿಶ್ರಾ ಔಟ್ ಮಾಡಿದರು. ಕೊನೆಯದಾಗಿ ನ್ಯೂಜಿಲೆಂಡ್ 23.1 ಓವರ್'ಗಳಲ್ಲಿ 79 ರನ್'ಗಳಿಗೆ ಪತನವಾಯಿತು. ಅದ್ಭುತ ಪ್ರದರ್ಶನ ತೋರಿದ ಸ್ಪಿನ್ನರ್ ಅಮಿತ್ ಮಿಶ್ರಾ 18 ರನ್'ಗಳಿಗೆ 5 ವಿಕೆಟ್ ಕಬಳಿಸಿದರು. ಅಕ್ಷರ್ ಪಟೇಲ್ 2,ಉಮೇಶ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ 1 ವಿಕೆಟ್ ಗಳಿಸಿದರು. . ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಿದ ಜಯಂತ್ ಯಾದವ್ ಕೂಡ ಒಂದು ವಿಕೆಟ್ ಪಡೆದರು.
ಒಟ್ಟು ಸರಣಿಯಲ್ಲಿ 15 ವಿಕೇಟ್ ಕಬಳಿಸಿದ್ದಕ್ಕಾಗಿ ಅಮಿತ್ ಮಿಶ್ರಾ ಅವರು ಪಂದ್ಯ ಹಾಗೂ ಸರಣಿ ಪುರುಶೋತ್ತಮ ಪಾತ್ರಕ್ಕೆ ಪಾತ್ರರಾದರು. ಒಂದು ದಿನದ ಸರಣಿ ಗೆಲುವಿನೊಂದಿಗೆ ಭಾರತಕ್ಕೆ ದೀಪಾವಳಿ ಉಡುಗೊರೆ ದೊರಕಿದೆ.
ಭಾರತಕ್ಕೆ 190 ರನ್ಗಳ ಜಯದೊಂದಿಗೆ 3-2 ರಿಂದ ಏಕದಿನ ಸರಣಿ
ಭಾರತ 50 ಓವರ್ನಲ್ಲಿ 269/6
(ರೋಹಿತ್-ವಿರಾಟ್ ತಲಾ ಅರ್ಧಶತಕ)
ಕಿವೀಸ್ 23.1 ಓವರ್ನಲ್ಲಿ 79/10
( ಅಮಿತ್ ಮಿಶ್ರಾಗೆ 5, ಅಕ್ಷರ್ಗೆ 2 ವಿಕೆಟ್)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.