ಚೀನಾ ವಿರುದ್ಧ ಸಿಡಿದೆದ್ದ ಏಕೈಕ ನಾಯಕ ಮೋದಿ

By Suvarna Web DeskFirst Published Nov 19, 2017, 2:28 PM IST
Highlights

ಪ್ರಧಾನಿ ಹೊಗಳಿದ ಅಮೆರಿಕ ಚಿಂತಕರ ಚಾವಡಿ

ವಾಷಿಂಗ್ಟನ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಆರ್ಥಿಕ ಕಾರಿಡಾರ್ ನಿರ್ಮಾಣ ಕಾಮಗಾರಿ ಕೈಗೊಂಡಿದ್ದನ್ನು ಪ್ರಶ್ನಿಸಿದ ಏಕೈಕ ಮುತ್ಸದ್ದಿ ನಾಯಕರೆಂದರೆ ಭಾರತದ ಪ್ರಧಾನಿ ನರೇಂದ್ರ ಮೋದಿ. ಈ ಬಗ್ಗೆ ಅಮೆರಿಕ ಕೂಡ ತುಟಿ ಪಿಟಕ್ಕೆನ್ನಲಿಲ್ಲ ಎಂದು ಅಮೆರಿಕದ ತಜ್ಞರೊಬ್ಬರು ಪ್ರಶಂಸಿಸಿದ್ದಾರೆ.

ಸಂಸದೀಯ ಸಮಿತಿಯೊಂದರ ಮುಂದೆ ಹಾಜರಾಗಿದ್ದ ಅಮೆರಿಕದ ಹಡ್ಸನ್ ಇನ್ಸ್‌ಟಿಟ್ಯೂಟ್‌ನ ಚೀನಾ ವ್ಯವಹಾರಗಳ ಚಿಂತಕರ ಚಾವಡಿಯ ನಿರ್ದೇಶಕ ಮೈಕೆಲ್ ಪಿಲ್ಸ್ ಬರಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಈ ಮಹತ್ವಾಕಾಂಕ್ಷಿ ಆರ್ಥಿಕ ಹೆದ್ದಾರಿ ನಿರ್ಮಾಣ ಯೋಜನೆಯ ವಿರುದ್ಧ ದನಿ ಎತ್ತಿದ್ದು ಮೋದಿ ಮತ್ತು ಅವರ ಸಹೋದ್ಯೋಗಿಗಳು ಮಾತ್ರ. ಈ ಯೋಜನೆಯಿಂದ ಭಾರತದ ಸಾರ್ವಭೌಮತೆಗೆ ಧಕ್ಕೆ ಬರುತ್ತದೆ ಎಂದರು.

ಆದರೆ ಈ ಯೋಜನೆಯ ಬಗ್ಗೆ ಅಮೆರಿಕ ಸರ್ಕಾರ ಈವರೆಗೂ ಮೌನ ಮುರಿದಿಲ್ಲ ಎಂದ ಅವರು, ಅಮೆರಿಕದ ಸೂಕ್ಷ್ಮವ್ಯಾಪಾರ ಗುಟ್ಟುಗಳನ್ನು ಚೀನಾ ಕದಿಯುತ್ತಿದೆ. ಈ ಮೂಲಕ ಬೌದ್ಧಿಕ ಸ್ವಾತಂತ್ರ್ಯವನ್ನು ಕದಿಯುತ್ತಿದೆ ಎಂದು ಆರೋಪಿಸಿದರು.

ಶ್ರೀಲಂಕಾದಲ್ಲಿ ಬಂದರು ನಿರ್ಮಾಣಕ್ಕೆ ಸಹಾಯ ಮಾಡುವ ನೆಪದಲ್ಲಿ, ಅಲ್ಲಿನ ಬಂದರುಗಳನ್ನು ಚೀನಾ ತನ್ನ ಹತೋಟಿಗೆ ತೆಗೆದುಕೊಳ್ಳುತ್ತಿದೆ ಎಂದೂ ಪಿಲ್ಸ್ ಬರಿ ಆತಂಕ ವ್ಯಕ್ತಪಡಿಸಿದರು. ಚೀನಾದ ಗಡಿ ರಸ್ತೆ ನಿರ್ಮಾಣ ಯೋಜನೆಯಡಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಿರ್ಮಿಸಲಾಗುತ್ತಿರುವ ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯೂ ಬರುತ್ತದೆ. ಇದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾದು ಹೋಗುವ ಯೋಜನೆಯಾಗಿದ್ದು, ಇದು ಭಾರತದ ಸಾರ್ವಭೌಮತೆಗೆ ಧಕ್ಕೆ ತರುವಂಥದ್ದಾಗಿದೆ ಎಂದು ಮೋದಿ ಸರ್ಕಾರ ಪ್ರತಿಭಟಿಸಿತ್ತು.

ಚೀನಾದಲ್ಲಿ ನಡೆದ ಬೆಲ್ಟ್ ಆ್ಯಂಡ್ ರೋಡ್ ಫೋರಂನ ಶೃಂಗವನ್ನು ಬಹಿಷ್ಕರಿಸಿತ್ತು.

 

click me!