
ಬೆಂಗಳೂರು (ಜ.16): ತಮಿಳುನಾಡಿನ ಮುಖ್ಯಮಂತ್ರಿಗಳ ಮನವಿಯಂತೆ ಕಾವೇರಿ ವ್ಯಾಪ್ತಿಯ ಜಲಾಶಯದಿಂದ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ನೀರು ಬಿಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿರುವ ನಿಮ್ಮ ನಿಲುವಿಗೆ ಕಾವೇರಿ ಅಚ್ಚುಕಟ್ಟು ಪ್ರದೇಶದ ಎಲ್ಲರೂ ಒಟ್ಟಾಗಿ ಬೆಂಬಲ ನೀಡುತ್ತೇವೆ ಎಂದು ಮಂಡ್ಯ ಶಾಸಕ ಎಂ.ಎಚ್. ಅಂಬರೀಶ್ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ನ್ಯಾಯಾಧಿಕರಣದ ಆದೇಶದಂತೆ ನೀರು ಬಿಡಿ ಎಂದು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ನಿಮಗೆ ಪತ್ರ ಬರೆದಿದ್ದಾರೆ. ಅವರ ಪತ್ರಕ್ಕೆ ತಾವು ಸ್ಪಂದಿಸುವುದಿಲ್ಲ ಎಂಬ ದೃಢ ವಿಶ್ವಾಸ ನನಗಿದೆ. ಈಗಾಗಲೇ ನೀರು ಬಿಡುವುದಿಲ್ಲ ಎಂದು ನೀವು ಸ್ಪಷ್ಟವಾಗಿ ಹೇಳಿದ್ದೀರಿ. ನಿಮ್ಮ ಈ ನಿಲುವಿಗೆ ಕಾವೇರಿ ಅಚ್ಚುಕಟ್ಟು ಪ್ರದೇಶದ ಎಲ್ಲಾ ಜನಪ್ರತಿನಿಧಿಗಳು, ರೈತರು, ಹೋರಾಟಗರರ ಬೆಂಬಲವಿದೆ. ಯಾವುದೇ ಕಾರಣಕ್ಕೂ ಕಾವೇರಿ ನೀರು ತಮಿಳುನಾಡಿಗೆ ಹರಿಸಬೇಡಿ ಎಂದು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ತಮಿಳುನಾಡಿಗೆ ನೀರು ಹರಿಸುವ ಸಂಬಂಧ ಅಗತ್ಯವಿದ್ದರೆ ಕಾವೇರಿ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳು, ರೈತ ಸಂಘಟನೆಗಳ ಹಾಗೂ ಸರ್ವ ಪಕ್ಷಗಳ ಮುಖಂಡರ ಸಭೆ ಕರೆದು ಚರ್ಚಿಸಬೇಕು. ರಾಜ್ಯದಲ್ಲಿ ಸತತವಾಗಿ ಬರಗಾಲವಿರುವುದರಿಂದ ಜಲಾಶಯಗಳಲ್ಲಿ ಸೂಕ್ತ ನೀರು ಸಂಗ್ರಹವಾಗಿಲ್ಲ.
ಈಗಿರುವ ಸಂಗ್ರಹ ಮಟ್ಟ ಗಣನೆಗೆ ತೆಗೆದುಕೊಂಡರೆ ಬೆಂಗಳೂರಿಗೆ ಮತ್ತು ಕಾವೇರಿ ಕೊಳ್ಳದಲ್ಲಿರುವ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ಜಾನುವಾರು, ಬೆಳೆಗಳಿಗೆ ಸಾಕಾಗುವುದಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ಸಾರ್ವಜನಿಕರ ಪರವಾಗಿ ಮನವಿ ಮಾಡುತ್ತೇನೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.