ಕೈ-ಜೆಡಿಎಸ್‌ ಮೈತ್ರಿ ವಿಧಾನಸೌಧಕ್ಕಷ್ಟೇ ಸೀಮಿತ: ಗೌಡ

First Published May 27, 2018, 7:50 AM IST
Highlights

 ‘ಮೈತ್ರಿ ಸರ್ಕಾರವು ವಿಧಾನಸೌಧದಲ್ಲಿ ಮಾತ್ರವಷ್ಟೆ. ಪಕ್ಷ ಉಳಿಸುವುದು ನನ್ನ ಜವಾಬ್ದಾರಿ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತೀಕ್ಷ್ಣವಾಗಿ ಹೇಳಿದ್ದಾರೆ.

ಬೆಂಗಳೂರು :  ‘ಮೈತ್ರಿ ಸರ್ಕಾರವು ವಿಧಾನಸೌಧದಲ್ಲಿ ಮಾತ್ರವಷ್ಟೆ. ಪಕ್ಷ ಉಳಿಸುವುದು ನನ್ನ ಜವಾಬ್ದಾರಿ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತೀಕ್ಷ್ಣವಾಗಿ ಹೇಳಿದ್ದಾರೆ.

ರಾಜರಾಜೇಶ್ವರಿನಗರ ಕ್ಷೇತದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡಿವೆ ಎಂಬ ಮಾತುಗಳಿಗೆ ಶನಿವಾರ ಆ ಕ್ಷೇತ್ರದಲ್ಲಿ ಪಕ್ಷದ ಪರ ನಡೆಸಿದ ಪ್ರಚಾರ ಸಭೆಯಲ್ಲೇ ಪ್ರತಿಕ್ರಿಯೆ ನೀಡಿದ ದೇವೇಗೌಡರು, ಮೈತ್ರಿ ಎಂಬುದು ವಿಧಾನಸೌಧಕ್ಕೆ ಮಾತ್ರ ಸಿಮೀತವಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಕ್ಷೇತ್ರಕ್ಕೆ ನಾನೊಬ್ಬನೇ ರಾಮಚಂದ್ರ ಅವರನ್ನು ಅಭ್ಯರ್ಥಿ ಮಾಡಿಲ್ಲ. ಈ ಕ್ಷೇತ್ರದ ಶಾಸಕರ ಗೂಂಡಾಗಿರಿ ವಿರುದ್ಧ ಸಿಡಿದೆದ್ದ ಪಕ್ಷದ ಕಾರ್ಯಕರ್ತರೆಲ್ಲಾ ಒಗ್ಗೂಡಿ ಹುರಿಯಾಳನ್ನು ಆರಿಸಿದ್ದಾರೆ. ಹೀಗಿರುವಾಗ ಮೈತ್ರಿ ಸರ್ಕಾರ ಇದೆಯೆಂದು ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ನಮ್ಮ ಪಕ್ಷದ ಹುರಿಯಾಳನ್ನು ಕಣದಿಂದ ಹಿಂದೆ ಸರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ನನ್ನ ಕಾರ್ಯಕರ್ತರು ಎಷ್ಟೆಲ್ಲ ನೋವು ಅನುಭವಿಸಿದ್ದಾರೆ ಎಂಬುದು ಗೊತ್ತಿದೆ. ರಾಮಚಂದ್ರ ಅವರದ್ದು ಕಳಂಕರಹಿತ ವ್ಯಕ್ತಿತ್ವವಾಗಿದ್ದು, ಅವರನ್ನು ಗೆಲ್ಲಿಸಿದರೆ ಉತ್ತಮ ಶಾಸಕನೊಬ್ಬನನ್ನು ಕ್ಷೇತ್ರ ಕಾಣಲಿದೆ. ರಾಮಚಂದ್ರ ಅವರನ್ನು ಅಭ್ಯರ್ಥಿ ಮಾಡುವಾಗ ಬಿಜೆಪಿಯ ಹಲವು ಬಿಬಿಎಂಪಿ ಸದಸ್ಯರು ಬೆಂಬಲಿಸಿದ್ದರು ಎಂದು ಹೇಳಿದರು.

ಮೈತ್ರಿ ಸರ್ಕಾರವು ವಿಧಾನಸೌಧದಲ್ಲಿ ಮುಕ್ತ ಮತ್ತು ಸ್ವತಂತ್ರವಾಗಿ ಕೆಲಸ ಮಾಡಲಿ. ಅದಕ್ಕೆ ನಾವು ಧಕ್ಕೆ ಉಂಟು ಮಾಡುವುದಿಲ್ಲ. ಈ ಹಿಂದೆ ಕಾಂಗ್ರೆಸ್‌ನ ಹಿರಿಯ ನಾಯಕ ದಿ. ಧರ್ಮಸಿಂಗ್‌ ಅವರ ಜತೆ ಸಹ ನಾವು ಮೈತ್ರಿ ಸರ್ಕಾರ ನಡೆಸಿದ್ದೇವೆ. ಹಾಗಂತ ಪಕ್ಷದ ಕಾರ್ಯಕರ್ತರ ಅಭಿಪ್ರಾಯಕ್ಕೆ ವಿರುದ್ಧವಾಗಿ ನಾವು ಹೋಗುವುದಿಲ್ಲ ಎಂದು ಸ್ಪಷ್ಟವಾಗಿ ನುಡಿದರು.

ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಗುಣಗಾನ ಮಾಡಲು ನಾನು ಬಂದಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ ರಾಮಚಂದ್ರ ಅವರನ್ನು ಗೆಲ್ಲಿಸುವುದೇ ನನ್ನ ಮುಂದಿರುವ ಗುರಿಯಾಗಿದೆ. ನಾವು ಗೆಲ್ಲುತ್ತೇವೆ. ಕಾಂಗ್ರೆಸ್‌ ಶಾಸಕರ ದಬ್ಬಾಳಿಕೆ, ದೌರ್ಜನ್ಯಗಳು ಅಂತ್ಯವಾಗಲಿವೆ ಎಂದು ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜ್ವಲ್‌ಗೆ ಮೈಕ್‌ ಕೊಡದ ಅಜ್ಜ!

ಇದೇ ವೇದಿಕೆಯಲ್ಲಿ ಕ್ಷೇತ್ರದ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯೂ ಆಗಿದ್ದ ಮೊಮ್ಮಗ ಪ್ರಜ್ವಲ್‌ ರೇವಣ್ಣ ಅವರ ಮಾತಿಗೆ ಖುದ್ದು ದೇವೇಗೌಡರೇ ಬ್ರೇಕ್‌ ಹಾಕಿದ್ದು ಕುತೂಹಲ ಮೂಡಿಸಿತು. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಎಷ್ಟೇ ಒತ್ತಾಯ ಮಾಡಿದರೂ ಮಣಿಯದ ದೇವೇಗೌಡರು, ಮೊಮ್ಮಗನಿಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ.

ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಹುರಿಯಾಳು, ಹಾಲಿ ಶಾಸಕ ಮುನಿರತ್ನ ವಿರುದ್ಧ ಸ್ಪರ್ಧಿಸಲು ಪ್ರಜ್ವಲ್‌ ಆಸಕ್ತರಾಗಿದ್ದರು. ಇದಕ್ಕೆ ಬಿಬಿಎಂಪಿ ಸದಸ್ಯರು ಸೇರಿದಂತೆ ಕ್ಷೇತ್ರದ ನಾಯಕರು ಸಹ ಬೆಂಬಲಿಸಿದ್ದರು. ಆದರೆ ದೇವೇಗೌಡರ ಕುಟುಂಬದ ಆಂತರಿಕ ಕಲಹದ ಪರಿಣಾಮ ಪ್ರಜ್ವಲ್‌ ಅವರಿಗೆ ಟಿಕೆಟ್‌ ತಪ್ಪಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಅಲ್ಲದೆ, ಟಿಕೆಟ್‌ ತಪ್ಪಿದಕ್ಕೆ ಪ್ರಜ್ವಲ್‌ ಸಹ ಹಲವು ಸಂದರ್ಭಗಳಲ್ಲಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು ಇದೆ.

click me!