ವಾಹನ ಸವಾರರಿಗೆ ತಪ್ಪಿದ ತಲೆನೋವು!: ಕಂಪೆನಿಯೇ ನೀಡುತ್ತೆ ಈ ಸೌಲಭ್ಯ!

By Web DeskFirst Published Dec 7, 2018, 11:39 AM IST
Highlights

2019ರ ಏಪ್ರಿಲ್‌ನಿಂದ ಹೈಸೆಕ್ಯುರಿಟಿ ನಂಬರ್‌ ಪ್ಲೇಟ್‌ಗಳನ್ನು ವಾಹನ ತಯಾರಿಕಾ ಕಂಪನಿಗಳೇ ಒದಗಿಸಬೇಕು ಎಂದು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. 

ನವದೆಹಲಿ[ಡಿ.07]: ಹೊಸ ವಾಹನಗಳಿಗೆ 2019ರ ಏಪ್ರಿಲ್‌ನಿಂದ ಹೈಸೆಕ್ಯುರಿಟಿ ನಂಬರ್‌ ಪ್ಲೇಟ್‌ಗಳನ್ನು ವಾಹನ ತಯಾರಿಕಾ ಕಂಪನಿಗಳೇ ಒದಗಿಸಬೇಕು ಎಂದು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಈ ಸಂಬಂಧ ಕೇಂದ್ರೀಯ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದು ಬುಧವಾರ ಅಧಿಸೂಚನೆ ಹೊರಡಿಸಿದೆ.

ಹೈಸೆಕ್ಯುರಿಟಿ ರಿಜಿಸ್ಪ್ರೇಷನ್‌ ಪ್ಲೇಟ್‌ (ಎಚ್‌ಎಸ್‌ಆರ್‌ಪಿ)ಗಳಲ್ಲಿ ವಿವಿಧ ಸ್ತರದ ಭದ್ರತಾ ಅಂಶಗಳು ಇರುತ್ತವೆ. ಈ ರೀತಿಯ ನಂಬರ್‌ ಪ್ಲೇಟ್‌ಗಳನ್ನು 2005ರಲ್ಲಿ ಜಾರಿಗೆ ತರಲಾಯಿತು. 2012ರಿಂದ ಕಡ್ಡಾಯಗೊಳಿಸಲಾಯಿತು. ಆದರೂ ಪರಿಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಈಗ ಇರುವ ನಿಯಮದ ಪ್ರಕಾರ, ಈ ನಂಬರ್‌ ಪ್ಲೇಟ್‌ಗಳನ್ನು ಅಧಿಕೃತ ವ್ಯಾಪಾರಿಗಳಿಂದ ಡೀಲರ್‌ ಅಥವಾ ವಾಹನ ಮಾಲೀಕರು ಖರೀದಿಸಿ ಅಳವಡಿಕೆ ಮಾಡಬೇಕು ಎಂಬ ಅಂಶವಿದೆ. ಇದೀಗ ಕೇಂದ್ರ ಸರ್ಕಾರವು ವಾಹನ ತಯಾರಿಕಾ ಕಂಪನಿಗಳೇ ಕಡ್ಡಾಯವಾಗಿ ಹೈಸೆಕ್ಯುರಿಟಿ ನಂಬರ್‌ ಪ್ಲೇಟ್‌ಗಳನ್ನು ಒದಗಿಸಬೇಕು ಎಂದು ಸೂಚಿಸಿರುವುದರಿಂದ ಹೊಸ ವಾಹನಗಳಲ್ಲಾದರೂ ಈ ನಂಬರ್‌ ಪ್ಲೇಟ್‌ಗಳು ಕಾಣಿಸಿಕೊಳ್ಳಲಿವೆ.

ರಾಜ್ಯ ಸರ್ಕಾರಗಳು ಅನುಮತಿ ನೀಡಿದರೆ ವಾಹನ ಡೀಲರ್‌ಗಳು ಹಳೆಯ ವಾಹನಗಳಿಗೂ ಹೈಸೆಕ್ಯುರಿಟಿ ನಂಬರ್‌ ಪ್ಲೇಟ್‌ ಅಳವಡಿಕೆ ಮಾಡಬಹುದು ಎಂದು ಅಧಿಸೂಚನೆ ತಿಳಿಸುತ್ತದೆ.

ಹೈಸೆಕ್ಯುರಿಟಿ ನಂಬರ್‌ ಪ್ಲೇಟ್‌ ವಿಶೇಷತೆ

- ದೇಶಾದ್ಯಂತ ಏಕರೂಪದ ನಂಬರ್‌ ಪ್ಲೇಟ್‌ಗಳು ಇಲ್ಲ. ವಾಹನಗಳನ್ನು ಕಳ್ಳತನ ಮಾಡಿದ ಬಳಿಕ ಕಳ್ಳರು ನಂಬರ್‌ ಪ್ಲೇಟ್‌ಗಳನ್ನು ಸುಲಭವಾಗಿ ಬದಲಿಸಿಬಿಡುತ್ತಾರೆ. ಹೈಸೆಕ್ಯುರಿಟಿ ನಂಬರ್‌ ಪ್ಲೇಟ್‌ನಲ್ಲಿ ಅದಕ್ಕೆಲ್ಲಾ ಬ್ರೇಕ್‌ ಬೀಳಲಿದೆ.

- ಹೆಸರೇ ಸೂಚಿಸುವಂತೆ ‘ಹೈಸೆಕ್ಯುರಿಟಿ’ ನಂಬರ್‌ ಪ್ಲೇಟ್‌ ಇದಾಗಿದೆ. ದೇಶಾದ್ಯಂತ ಒಂದೇ ವಿನ್ಯಾಸ ಹೊಂದಿರುತ್ತದೆ. ಅಲ್ಯುಮಿನಿಯಂನಿಂದ ತಯಾರಿಸಲಾದ ಪ್ಲೇಟ್‌ ಇದಾಗಿದೆ. ವಾಹನದ ನೋಂದಣಿ ಸಂಖ್ಯೆ ಜತೆಗೆ ಪ್ರತಿ ಪ್ಲೇಟ್‌ನಲ್ಲೂ 7 ಅಂಕಿಗಳ ವಿಶಿಷ್ಟಲೇಸರ್‌ ಕೋಡ್‌ ಇರುತ್ತದೆ.

- ನಂಬರ್‌ ಪ್ಲೇಟ್‌ನಲ್ಲಿ ಕ್ರೋಮಿಯಂನಿಂದ ಮಾಡಲಾದ ಚಕ್ರದ ಗುರುತು, ಎಂಜಿನ್‌, ಚಾಸಿಸ್‌ ನಂಬರ್‌ಗಳು, ‘ಐಎನ್‌ಡಿ’ ಎಂಬ ಅಕ್ಷರ ಇರುತ್ತದೆ. ವಾಹನ ಸಂಖ್ಯೆ ಮೇಲೆ 45 ಡಿಗ್ರಿ ಕೋನದಲ್ಲಿ ‘ಇಂಡಿಯಾ’ ಎಂದು ಬರೆದಿರಲಾಗುತ್ತದೆ.

- ಈ ನಂಬರ್‌ ಪ್ಲೇಟ್‌ ಅನ್ನು ಸ್ನಾ್ಯಪ್‌ ಲಾಕ್‌ ಹಿಡಿದಿಟ್ಟುಕೊಂಡಿರುತ್ತದೆ. ಅದನ್ನು ಮರುಬಳಸಲು ಆಗದು. ತೆಗೆಯಲೂ ಆಗದು. ಮುರಿದುಹೋದರೆ ಅಥವಾ ತೆಗೆಯಲು ಹೋಗಿ ಎಡವಟ್ಟಾದರೆ, ಆರ್‌ಟಿಒಗೇ ಹೋಗಿ ಹೊಸ ನಂಬರ್‌ ಪ್ಲೇಟ್‌ ಪಡೆಯಬೇಕು.

- ಲೇಸರ್‌ ಕೋಡ್‌ಗಳನ್ನು ಪೊಲೀಸರು ಲೇಸರ್‌ ಉಪಕರಣದಿಂದ ಸ್ಕ್ಯಾನ್  ಮಾಡಿದರೆ, ನಿರ್ದಿಷ್ಟವಾಹನದ ನಂಬರ್‌ ಪ್ಲೇಟ್‌ ಅದರದ್ದೇ ಹೌದೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

click me!