ವಿದ್ಯಾರ್ಥಿಗಳಿಗೆ 'ಕೈ' ಗಾಳ: ಪತ್ರ ಬರೆದ ರಾಹುಲ್ ಗಾಂಧಿ!

By Web DeskFirst Published Dec 7, 2018, 11:23 AM IST
Highlights

ವಿದ್ಯಾರ್ಥಿ ಸಮುದಾಯವನ್ನು ಒಗ್ಗೂಡಿಸುವ ಸಲುವಾಗಿ ‘ಬೆಹತರ್‌ ಭಾರತ್‌’ (ಉತ್ತಮ ಭಾರತ) ಎಂಬ ಅಭಿಯಾನವನ್ನು ಕಾಂಗ್ರೆಸ್‌ ಹಮ್ಮಿಕೊಂಡಿದ್ದು, ಅದರ ಭಾಗವಾಗಿ ರಾಹುಲ್‌ ಅವರು ವಿದ್ಯಾರ್ಥಿಗಳಿಗೆ ಪತ್ರ ಬರೆದಿದ್ದಾರೆ.

ನವದೆಹಲಿ[ಡಿ.07]: ಲೋಕಸಭೆ ಚುನಾವಣೆ ಘೋಷಣೆಗೆ ಕೇವಲ ಮೂರ್ನಾಲ್ಕು ತಿಂಗಳಷ್ಟೇ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ದೇಶದ ವಿದ್ಯಾರ್ಥಿ ಸಮುದಾಯವನ್ನು ಓಲೈಸಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮುಂದಾಗಿದ್ದಾರೆ. ಈ ಸಂಬಂಧ ವಿದ್ಯಾರ್ಥಿಗಳಿಗೆ ಪತ್ರವೊಂದನ್ನು ಬರೆದಿರುವ ಅವರು, ಅವಕಾಶಗಳತ್ತ ವಿದ್ಯಾರ್ಥಿಗಳಿಗೆ ನೇರ ಸಂಪರ್ಕ ಸಿಗುವಂತೆ ಕಾಂಗ್ರೆಸ್‌ ನೋಡಿಕೊಳ್ಳಲಿದೆ. ವಿದ್ಯಾರ್ಥಿಗಳಿಗೆ ಅಡ್ಡಿಯಾಗಿ ಪರಿಣಮಿಸಿರುವ ಭ್ರಷ್ಟಾಚಾರವನ್ನು ಕೊನೆಗಾಣಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.

ವಿದ್ಯಾರ್ಥಿ ಸಮುದಾಯವನ್ನು ಒಗ್ಗೂಡಿಸುವ ಸಲುವಾಗಿ ‘ಬೆಹತರ್‌ ಭಾರತ್‌’ (ಉತ್ತಮ ಭಾರತ) ಎಂಬ ಅಭಿಯಾನವನ್ನು ಕಾಂಗ್ರೆಸ್‌ ಹಮ್ಮಿಕೊಂಡಿದ್ದು, ಅದರ ಭಾಗವಾಗಿ ರಾಹುಲ್‌ ಅವರು ವಿದ್ಯಾರ್ಥಿಗಳಿಗೆ ಪತ್ರ ಬರೆದಿದ್ದಾರೆ. ಇದನ್ನು ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಅನುವಾದಿಸಿ, ಕಾಂಗ್ರೆಸ್ಸಿನ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐ ಮೂಲಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲು ಕಾಂಗ್ರೆಸ್‌ ಉದ್ದೇಶಿಸಿದೆ.

Congress President writes to the students of India: students are nation builders, will put their issues on the national agenda. their platform to engage with Congress leadership. pic.twitter.com/8UVln7tER0

— NSUI (@nsui)

‘ವಿದ್ಯಾರ್ಥಿಗಳೇ ನಿಜವಾದ ರಾಷ್ಟ್ರ ನಿರ್ಮಾತೃಗಳು. ವಿಜ್ಞಾನ, ತಂತ್ರಜ್ಞಾನ, ಕಲೆ ಹಾಗೂ ಸಂಸ್ಕೃತಿ ಕ್ಷೇತ್ರದಲ್ಲಿ ದೇಶ ಮುನ್ನಡೆಯಬೇಕೆ ಹೊರತು ಯುದ್ಧದತ್ತಲ್ಲ. ವಿಚಾರವಾದ ಹಾಗೂ ನ್ಯಾಯವನ್ನು ಅಪ್ಪಿಕೊಳ್ಳುವ ಮೂಲಕ ಸಮಾಜಗಳು ಮುಂದುವರಿಯುತ್ತವೆ. ಭಾರತದಲ್ಲಿನ ವಿದ್ಯಾರ್ಥಿಗಳು ಈ ಪ್ರಗತಿಪರ ಮುನ್ನಡೆಯ ಮುಂಚೂಣಿಯಲ್ಲಿದ್ದೀರಿ’ ಎಂದು ರಾಹುಲ್‌ ಹೇಳಿದ್ದಾರೆ.

ದುಬಾರಿ ಶುಲ್ಕ ಹಾಗೂ ಸೀಮಿತ ಸೀಟುಗಳಿಗೆ ಕಠಿಣ ಸ್ಪರ್ಧೆಯ ಕುರಿತಾದ ಕಳವಳಗಳ ಬಗ್ಗೆಯೂ ರಾಹುಲ್‌ ಪ್ರಸ್ತಾಪಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ವೇದಿಕೆ ಕಲ್ಪಿಸುವುದಕ್ಕಾಗಿ ಕಾಂಗ್ರೆಸ್‌ ಪಕ್ಷ ‘ಬೆಹತರ್‌ ಭಾರತ್‌’ ಅಭಿಯಾನ ಪ್ರಾರಂಭಿಸಿದೆ. ನಿಮ್ಮ ಕಳವಳಗಳು ನಮ್ಮ ಕಳವಳಗಳಿದ್ದಂತೆ. ನಿಮ್ಮ ಆದ್ಯತೆಗಳು ಕಾಂಗ್ರೆಸ್‌ ಪಕ್ಷದ ಆದ್ಯತೆಗಳಿದ್ದಂತೆ ಎಂದು ಹೇಳಿದ್ದಾರೆ.

click me!