ಆರೂವರೆ ಕೋಟಿ ಕನ್ನಡಿಗರಿಗೂ ಸಿಎಂ ಆಗುವ ಅರ್ಹತೆ ಇದೆ: ಕತ್ತಿಗೆ ಡಿಸಿಎಂ ಟಾಂಗ್‌!

By Web DeskFirst Published Sep 26, 2019, 9:18 AM IST
Highlights

6.5 ಕೋಟಿ ಕನ್ನಡಿಗರಿಗೂ ಸಿಎಂ ಆಗುವ ಅರ್ಹತೆ ಇದೆ| ಅದೃಷ್ಟಇದ್ದವರಿಗೆ ಹುದ್ದೆ: ಕತ್ತಿಗೆ ಡಿಸಿಎಂ ಟಾಂಗ್‌| 

ಬಾಗಲಕೋಟೆ[ಸೆ.26]: ‘ಮುಖ್ಯಮಂತ್ರಿಯಾಗುವ ಅರ್ಹತೆ ನನಗೂ ಇದೆ, ಅದೃಷ್ಟವಿದ್ದರೆ ನಾನೂ ಮುಖ್ಯಮಂತ್ರಿಯಾಗುತ್ತೇನೆ’ ಎಂಬ ಮಾಜಿ ಸಚಿವ ಉಮೇಶ್‌ ಕತ್ತಿ ಹೇಳಿಕೆಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪರೋಕ್ಷ ಟಾಂಗ್‌ ನೀಡಿದ್ದಾರೆ. ಬಿಜೆಪಿಯ ಉಮೇಶ ಕತ್ತಿ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎನ್ನುತ್ತಿದ್ದಾರೆ. ಆದರೆ, ಕೇವಲ ಕತ್ತಿ ಒಬ್ಬರೇ ಏಕೆ ಈ ರಾಜ್ಯದ ಆರೂವರೆ ಕೋಟಿ ಜನರಿಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ. ಇದರಲ್ಲೇನೂ ತಪ್ಪಿಲ್ಲ ಎಂದು ಕಾರಜೋಳ ಕಾಲೆಳೆದಿದ್ದಾರೆ.

ಮುಧೋಳದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿಯೊಬ್ಬರೂ ಅರ್ಹತೆ ಇದ್ದವರೇ. ಆದರೆ ಅವಕಾಶಗಳು ಕೆಲವರಿಗೆ ಅದರಲ್ಲೂ ಅದೃಷ್ಟಇದ್ದವರಿಗೆ ಸಿಗುತ್ತದೆ. ಅಂತಹ ಅದೃಷ್ಟ ಸದ್ಯ ಯಡಿಯೂರಪ್ಪ ಅವರಿಗೆ ಇದೆ. ಅವರು ಅದೃಷ್ಟವಂತರಷ್ಟೇ ಅಲ್ಲ, 45 ವರ್ಷಗಳ ಕಾಲ ನಿರಂತರ ಹೋರಾಟ ಮಾಡಿದವರು. ಒಂದು ಸ್ಥಾನದಿಂದ 100ರವರೆಗೆ ಬಿಜೆಪಿ ಸೀಟನ್ನು ಹೆಚ್ಚಿಸಿದವರು. ಅವರ ಹೋರಾಟದ ಪ್ರತಿಫಲವನ್ನು ನಾವೀಗ ಅನುಭವಿಸುತ್ತಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂಬ ಮಾಜಿ ಸಚಿವ ಉಮೇಶ ಕತ್ತಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ಕಾರಜೋಳ ನಿರಾಕರಿಸಿದರು. ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸಿ ಜೈಲು ಶಿಕ್ಷೆ ಅನುಭವಿಸಿದ ಕುಟುಂಬ ನಮ್ಮದು. ಅಂತಹ ಕುಟುಂಬದಿಂದ ಬಂದ ನಾನು ಒಡಕಿನ ಮಾತನಾಡುವುದು ಸರಿಯಲ್ಲ. ಕರ್ನಾಟಕ ಒಂದಾಗಿರಬೇಕು. ಕನ್ನಡ ನಾಡು ಒಂದಾಗಿರಬೇಕು ಎಂಬುದೇ ನನ್ನ ನಿಲುವು ಎಂದರು.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

click me!