Bilkis Bano case convicts released: ಗುಜರಾತ್ ಸರ್ಕಾರ ಸ್ವತಂತ್ರೋತ್ಸವದ ಪ್ರಯುಕ್ತ ಬಿಲ್ಕಿಸ್ ಬಾನೊ ಅತ್ಯಾಚಾರಿಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದೆ. ಗರ್ಭಿಣಿ ಎಂಬುದನ್ನೂ ನೋಡದೇ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಅಪರಾಧಿಗಳನ್ನು ಬಿಡುಗಡೆ ಗೊಳಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನವದೆಹಲಿ: ಕೇಂದ್ರ ಮತ್ತು ಗುಜರಾತ್ ಎರಡರಲ್ಲೂ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ, ಅತ್ಯಾಚಾರಿಗಳ ಮೇಲೆ ಎರಡೂ ಸರ್ಕಾರಗಳ ನಿಲುವು ದ್ವಂದ್ವದಿಂದ ಕೂಡಿರುವಂತೆ ಭಾಸವಾಗುತ್ತಿದೆ. ಈ ದ್ವಂದ್ವಕ್ಕೆ ಕಾರಣವಾಗಿರುವುದು, ಗುಜರಾತಿನ ಬಿಲ್ಕಿಸ್ ಬಾನೊ ಅತ್ಯಾಚಾರ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದು. 2002ರ ಗುಜರಾತ್ ನರಮೇಧದ ಸಂದರ್ಭದಲ್ಲಿ ಮುಸಲ್ಮಾನ ಮಹಿಳೆಯೊಬ್ಬಳನ್ನು ಐದು ತಿಂಗಳ ಗರ್ಭಿಣಿ ಎಂಬ ಕರುಣೆಯನ್ನೂ ತೋರದೇ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಆಕೆಯ ಪುಟ್ಟ ಹೆಣ್ಣುಮಗುವನ್ನು ಕೊಲೆ ಮಾಡಲಾಗಿತ್ತು. ಜತೆಗೆ ಒಂದೇ ಕುಟುಂಬದ ಐವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಿದ ಬಳಿಕ, ಹನ್ನೊಂದು ಜನ ಅತ್ಯಾಚಾರ ಮಾಡಿದ್ದರು. 75ನೇ ಸ್ವತಂತ್ರೋತ್ಸವದ ಅಂಗವಾಗಿ ಸನ್ನಡತೆ ಆಧಾರದ ಮೇಲೆ ಕೈದಿಗಳ ಬಿಡುಗಡೆಗೆ ಕೇಂದ್ರ ಸರ್ಕಾರ ನಡಾವಳಿಗಳನ್ನು ಜಾರಗೆ ತಂದಿತ್ತು. ಅದರಲ್ಲಿ ಮುಖ್ಯವಾಗಿ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಬಾರದು ಎಂದು ಸೂಚಿಸಲಾಗಿತ್ತು. ಇಷ್ಟಾದರೂ ಬಿಲ್ಕಿಸ್ ಬಾನೊ ಅತ್ಯಾಚಾರಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿದೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ತಾಂತ್ರಿಕವಾಗಿ ಕೇಂದ್ರ ಸರ್ಕಾರ ನೀಡಿರುವ ಸೂಚನೆಯ ವಿರುದ್ಧ ಗುಜರಾತ್ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. ಇದೇ ವರ್ಷ ಮೇ ತಿಂಗಳಲ್ಲಿ ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದ ಅಪರಾಧಿಯೊಬ್ಬ ಶಿಕ್ಷೆ ಪ್ರಮಾಣವನ್ನು ಮರು ಪರಿಶೀಲಿಸಿ ಪರಿಗಣಿಸಬೇಕು. ಯಾಕೆಂದರೆ 15 ವರ್ಷಗಳ ಕಾಲ ಈಗಾಗಲೇ ಜೈಲುಶಿಕ್ಷೆ ಅನುಭವಿಸಿದ್ದೇವೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಶುಶ್ರೂಷಾ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಈ ಸಂಬಂಧ ಗುಜರಾತ್ ಸರ್ಕಾರ ಕ್ರಮ ಕೈಗೊಳ್ಳಬಹುದೇ ಹೊರತು, ಸುಪ್ರೀಂ ಕೋರ್ಟ್ ಯಾವುದೇ ಆದೇಶ ನೀಡುವುದಿಲ್ಲ ಎಂದು ಹೇಳಿತ್ತು. ಅಪರಾಧಿಯ ಅರ್ಜಿಯನ್ನು ಪರಿಗಣಿಸಿದ ಗುಜರಾತ್ ಸರ್ಕಾರ ಪ್ರಕರಣದ ಎಲ್ಲಾ ಹನ್ನೊಂದು ಅಪರಾಧಿಗಳನ್ನು ಬಿಡುಗಡೆಗೊಳಿಸುವ ನಿರ್ಧಾರ ತೆಗೆದುಕೊಂಡಿದೆ.
ಆದರೆ ಕೇಂದ್ರ ಸರ್ಕಾರದ ನೀತಿಗೂ ಗುಜರಾತ್ ಸರ್ಕಾರದ ನೀತಿಗೂ ವ್ಯತ್ಯಾಸ ಕಂಡು ಬರುತ್ತಿದೆ. ಕೇಂದ್ರ ಗೃಹ ಸಚಿವಾಲಯದ ಸೂಚನೆಗಳ ಪ್ರಕಾರ ಅತ್ಯಾಚಾರಿಗಳನ್ನು ಮತ್ತು ಜೀವಿತಾವಧಿ ಶಿಕ್ಷೆ ಅನುಭವಿಸುತ್ತಿರುವ ಖೈದಿಗಳನ್ನು ಬಿಡುಗಡೆ ಮಾಡಬಾರದು. ಆದರೆ ಗುಜರಾತ್ ಸರ್ಕಾರ ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿದೆ.
ಇದನ್ನೂ ಓದಿ: 2002 ಬಿಲ್ಕಿಸ್ ಪ್ರಕರಣ: 11 ಮಂದಿ ಕೈದಿಗಳ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಬಾಂಬೆ ಕೋರ್ಟ್
2002ರ ಮಾರ್ಚ್ 3ರಂದು 21 ವರ್ಷದ ಬಿಲ್ಕಿಸ್ ಬಾನೊರನ್ನು ಅಪರಾಧಿಗಳು ಅತ್ಯಾಚಾರ ಮಾಡಿದ್ದರು. ಆಗ ಆಕೆ ಐದು ತಿಂಗಳ ಗರ್ಭಿಣಿಯಾಗಿದ್ದರು. ಘಟನೆಯ ಬಳಿಕ ಅಹ್ಮದಾಬಾದಿನಲ್ಲಿ ತಲೆಮರೆಸಿಕೊಂಡಿದ್ದರು. ಅದಾಗಲೇ ಗುಜರಾತಿನಲ್ಲಿ ಕೋಮು ಗಲಭೆ ತಾರಕಕ್ಕೇರಿತ್ತು. 2008ರಲ್ಲು ಮುಂಬೈ ನ್ಯಾಯಾಲಯ ಪ್ರಕರಣದ ಎಲ್ಲಾ ಹನ್ನೊಂದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಬಾಂಬೆ ಹೈ ಕೋರ್ಟ್ ಕೂಡ ತೀರ್ಪನ್ನು ಎತ್ತಿ ಹಿಡಿದಿತ್ತು.
ಸೋಮವಾರವೇ ಪ್ರಕರಣದ ಎಲ್ಲಾ ಅಪರಾಧಿಗಳೂ ಬಿಡುಗಡೆಯಾಗಿದ್ದಾರೆ. ಗೋದ್ರಾ ಜೈಲಿನಾಚೆ ಅವರನ್ನು ಹಾರತುರಾಯಿ ಮೂಲಕ ಕುಟುಂಬಸ್ಥರು ಸ್ವಾಗತಿಸಿದ್ದಾರೆ.
ಬಿಲ್ಕಿಸ್ ಬಾನೊ ಗಂಡ ಹೇಳೋದೇನು?:
ಬಿಲ್ಕಿಸ್ ಬಾನೊ ಗಂಡ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಅವರ ಬಿಡುಗಡೆ ಬಗ್ಗೆ ನಮಗ್ಯಾವುದೇ ಮಾಹಿತಿ ಸರ್ಕಾರ ನೀಡಿಲ್ಲ. ಕಳೆದುಕೊಂಡ ನಮ್ಮ ಪ್ರೀತಿಪಾತ್ರರಿಗೆ ಶಾಂತಿ ಸಿಗಲೆಂದು ಮಾತ್ರ ನಾವು ಪ್ರತಿನಿತ್ಯ ಪ್ರಾರ್ಥಿಸುತ್ತೇವೆ. ಜತೆಗೆ ಕೋಮುಗಲಭೆಯಲ್ಲಿ ಜೀವ ಕಳೆದುಕೊಂಡವರಿಗೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ, ಎಂದು ಬಿಲ್ಕಿಸ್ ಬಾನೊ ಗಂಡ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಬಿಲ್ಕಿಸ್ ಬಾನೋಗೆ 50 ಲಕ್ಷ ರೂ. ಪರಿಹಾರ, ಸರ್ಕಾರಿ ಉದ್ಯೋಗ: ಸುಪ್ರೀಂ ಸೂಚನೆ!
ಬಿಡುಗಡೆಗೊಂಡ ಅಪರಾಧಿ ರಾಧೆಶ್ಯಾಮ್ ಶಾ ಪ್ರತಿಕ್ರಿಯೆ ನೀಡಿದ್ದು, ಬಿಡುಗಡೆ ಗೊಂಡಿರುವುದು ಸಂತಸ ತಂದಿದೆ ಎಂದಿದ್ದಾರೆ. "ನಾನೀಗ ನನ್ನ ಕುಟುಂಬದವರನ್ನು ಭೇಟಿಯಾಗಬಹುದು, ಜತೆಗೆ ಹೊಸ ಆರಂಭವನ್ನು ಶುರು ಮಾಡಬಹುದು," ಎಂದು ಅವರು ಹೇಳಿದ್ದಾರೆ.