ಒವೈಸಿ ಮಾತು: ಮುಸ್ಲಿಮರ ಮೇಲೆ ದಾಳಿಯಾಗುತ್ತಿದೆ; ಎಲ್ಲಿದ್ದಾರೆ ಸೆಕ್ಯೂಲರ್ಸ್? ಮುಸ್ಲಿಮರು ಒಗ್ಗಟ್ಟಾದರೆ 50 ಸೀಟು ಗೆಲ್ಲುವುದು ದೊಡ್ಡ ಮಾತಾ?

By Suvarna Web DeskFirst Published Jul 3, 2017, 3:43 PM IST
Highlights

ರಾಜಕೀಯ ಮೈತ್ರಿಕೂಟ ಮಾಡಿಕೊಂಡ ಇಡೀ ಸಮುದಾಯ ಒಗ್ಗಟ್ಟಾಗಿ ವೋಟು ಹಾಕಬೇಕು ಎಂದು ಹೇಳಿದ ಅಕ್ಬರುದ್ದೀನ್ ಒವೈಸಿ, "ಒಬ್ಬ ಸೋದರ ಮತ್ತೊಬ್ಬ ಸೋದರನಿಗೆ ವೋಟು ಹಾಕಿದರೆ ಭಾರತದಲ್ಲಿ ನಾವು 50 ಸೀಟು ಗೆಲ್ಲಬಹುದು" ಎಂದು ತಿಳಿಸಿದ್ಧಾರೆ.

ಹೈದರಾಬಾದ್(ಜುಲೈ 03): ಸಂಸದ ಅಸಾದುದ್ದೀನ್ ಒವೈಸಿಯವರ ಸೋದರ ಹಾಗೂ ತೆಲಂಗಾಣದ ಶಾಸಕ ಹಾಗೂ ಎಐಎಂಐಎಂ ನಾಯಕ ಅಕ್ಬರುದ್ದೀನ್ ಒವೈಸಿ ಬಹಿರಂಗ ಭಾಷಣದಲ್ಲಿ ಧಾರ್ಮಿಕ ಧ್ವೇಷ ಭಾವನೆ ಬಿತ್ತುವಂತಹ ಮಾತುಗಳನ್ನಾಡಿರುವುದು ಬೆಳಕಿಗೆ ಬಂದಿದೆ. ಸ್ವಾತಂತ್ರ್ಯಪೂರ್ವದಲ್ಲಿ ಮೊಹಮ್ಮದ್ ಅಲಿ ಜಿನ್ನಾರನ್ನು ನೆನಪಿಸುವಂತಹ ಮಾತುಗಳನ್ನ ಅಕ್ಬರುದ್ದೀನ್ ಒವೈಸಿ ಆಡಿದ್ದಾರೆ. ಚುನಾವಣೆ ವೇಳೆ ರಾಜಕೀಯ ಮೈತ್ರಿಕೂಟ ರಚಿಸಿಕೊಂಡು ಧಾರ್ಮಿಕವಾಗಿ ಒಗ್ಗಟ್ಟಾಗಿ ಮತ ಹಾಕುವಂತೆ ಮುಸ್ಲಿಮರಿಗೆ ಒವೈಸಿ ಕರೆ ನೀಡಿರುವುದು ರಿಪಬ್ಲಿಕ್ ಟಿವಿಯ ವರದಿಯಿಂದ ತಿಳಿದುಬಂದಿದೆ.

ದೇಶಾದ್ಯಂತ ನಡೆಯುತ್ತಿರುವ ಇತ್ತೀಚಿನ ಕೆಲ ದುರ್ಘಟನೆಗಳನ್ನ ಉಲ್ಲೇಖಿಸಿದ ಒವೈಸಿ, ಭಾರತದಲ್ಲಿ ಮುಸ್ಲಿಮರ ಮೇಲೆ ದಾಳಿಯಾಗುತ್ತಿದ್ದರೂ ಜಾತ್ಯತೀತ ವ್ಯಕ್ತಿಗಳೆನಿಸಿಕೊಂಡವರು ಎಲ್ಲಿ ಹೋಗಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಸೆಕ್ಯೂಲರ್'ಗಳನ್ನು ನಂಬಿಕೊಂಡರೆ ಆಗುವುದಿಲ್ಲ. ಅವರದ್ದು ಕೇವಲ ವೋಟ್ ಬ್ಯಾಂಕ್ ರಾಜಕಾರಣ ಎಂದು ಟೀಕಿಸಿದ ಒವೈಸಿ, ಮತ-ಪಂಥಗಳ ಭೇದವನ್ನು ಮರೆತು ಮುಸ್ಲಿಮರು ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಕರೆ ನೀಡಿದ್ದಾರೆ.

"ಮುಸ್ಲಿಮರು ಈ ದೇಶದ ದ್ವಿತೀಯ ದರ್ಜೆ ನಾಗರಿಕರೇ? ಅವರ ಮೇಲೆ ಯಾಕೆ ದೌರ್ಜನ್ಯ ನಡೆಯುತ್ತಿದೆ? ತಲೆ ಮೇಲೆ ಟೊಪ್ಪಿ ಹಾಕಿಕೊಳ್ಳುವುದು, ದಾಡಿ ಬಿಡುವುದು, ಮುಸ್ಲಿಮನಾಗಿರುವುದು ಪ್ರಮಾದವಾ?

"ವಿಶ್ವ ಹಿಂದೂ ಪರಿಷತ್'ನವರೇ, ನರೇಂದ್ರ ಮೋದಿಯವರೇ, ಈ ದೇಶವು ನಿಮ್ಮ ಅಪ್ಪನ ಆಸ್ತಿಯಲ್ಲ. ಈ ದೇಶ ಎಷ್ಟು ನಿಮ್ಮದೋ, ಅಷ್ಟೇ ನನ್ನದೂ ಹೌದು" ಎಂದು ಒವೈಸಿ ಕಿಡಿಕಾರಿದ್ದಾರೆ.

ವೈರಿಯು ಎರಗಿ ಬಂದಾಗ ನಿನ್ನದು ಯಾವ ಪಂಥ ಎಂದು ಕೇಳುತ್ತಾನೆಯೇ? ಹಾಗೆಯೇ, ಯಾರೂ ಕೂಡ ಇಂತಹ ತುರ್ತು ಸಂದರ್ಭದಲ್ಲಿ ಜಾತಿ-ಮತ ನೋಡದೇ ಇಡೀ ಸಮುದಾಯ ಒಗ್ಗಟ್ಟಾಗಿರಬೇಕು ಎಂದು ಒವೈಸಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ರಾಜಕೀಯ ಮೈತ್ರಿಕೂಟ ಮಾಡಿಕೊಂಡ ಇಡೀ ಸಮುದಾಯ ಒಗ್ಗಟ್ಟಾಗಿ ವೋಟು ಹಾಕಬೇಕು ಎಂದು ಹೇಳಿದ ಅಕ್ಬರುದ್ದೀನ್ ಒವೈಸಿ, "ಯಾರದ್ದೋ ಅನುಕಂಪವಾಗಲೀ ಸಹಾಯವಾಗಲೀ ನಮಗೆ ಅಗತ್ಯವಿಲ್ಲ. ನಮ್ಮ ಒಬ್ಬ ಸೋದರ ಮತ್ತೊಬ್ಬ ಸೋದರನಿಗೆ ವೋಟು ಹಾಕಿದರೆ ಭಾರತದಲ್ಲಿ ನಾವು 50 ಸೀಟು ಗೆಲ್ಲಬಹುದು" ಎಂದು ತಿಳಿಸಿದ್ಧಾರೆ.

click me!