'ಕರೆದು ಕೊಟ್ಟರೂ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಯಾರಿಗೂ ಬೇಡ'

By Web DeskFirst Published Jun 15, 2019, 8:38 AM IST
Highlights

ಕಾಂಗ್ರೆಸ್‌ ಅಧ್ಯಕ್ಷ ಪಟ್ಟಒಲ್ಲೆ ಎಂದ ಎ.ಕೆ. ಆ್ಯಂಟನಿ| ಕಾರ್ಯಾಧ್ಯಕ್ಷರಾಗಲು ಕೆ.ಸಿ. ವೇಣುಗೋಪಾಲ್‌ ಕೂಡ ನಕಾರ| ಪಟೇಲ್‌, ಆಜಾದ್‌ರಿಂದ ರಾಹುಲ್‌ ಉತ್ತರಾಧಿಕಾರಿಗೆ ಶೋಧ

ನವದೆಹಲಿ[ಜೂ.15]: ಲೋಕಸಭೆ ಚುನಾವಣೆಯಲ್ಲಿನ ದಯನೀಯ ಸೋಲಿನ ಹಿನ್ನೆಲೆಯಲ್ಲಿ ರಾಜೀನಾಮೆಗೆ ಮುಂದಾಗಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡುವ ಪಕ್ಷದ ಪ್ರಯತ್ನಕ್ಕೆ ಮೊದಲ ಯತ್ನದಲ್ಲೇ ಹಿನ್ನಡೆಯಾಗಿದೆ. ರಾಹುಲ್‌ರಿಂದ ತೆರವಾಗುವ ಹುದ್ದೆ ವಹಿಸಿಕೊಳ್ಳುವಂತೆ ಪಕ್ಷದ ನಾಯಕರು ನೀಡಿದ ಆಹ್ವಾನವನ್ನು ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ಸಿಗ ಎ.ಕೆ. ಆ್ಯಂಟನಿ ಅವರು ತಿರಸ್ಕರಿಸಿದ್ದಾರೆ.

ಇದೇ ವೇಳೆ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿಯಾಗಿರುವ ಕೇರಳದ ಮಾಜಿ ಸಂಸದ ಕೆ.ಸಿ. ವೇಣುಗೋಪಾಲ್‌ ಅವರಿಗೆ ಕಾರ್ಯಾಧ್ಯಕ್ಷ ಹುದ್ದೆ ವಹಿಸಿಕೊಳ್ಳುವ ಆಹ್ವಾನವನ್ನು ಪಕ್ಷ ನೀಡಿತ್ತು. ಅವರು ಕೂಡ ಆ ಸ್ಥಾನವನ್ನು ಒಲ್ಲೆ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಬೇರೊಬ್ಬರನ್ನು ಆ ಸ್ಥಾನಕ್ಕೆ ತರುವ ಪ್ರಯತ್ನ ಆರಂಭವಾಗಿದೆ. ಉತ್ತರ ಭಾರತದ ನಾಯಕರನ್ನು ಕಾಂಗ್ರೆಸ್ಸಿಗರು ಹುಡುಕುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪಕ್ಷ ಮುನ್ನಡೆಸುವ ಹೊಣೆಗಾರಿಕೆಯನ್ನು ಗಾಂಧಿ ಕುಟುಂಬದ ಹೊರತಾದ ವ್ಯಕ್ತಿಗಳಿಗೆ ನೀಡಲು ಮುಂದಾಗಿರುವ ಕಾಂಗ್ರೆಸ್‌, ಆ ಸ್ಥಾನಕ್ಕೆ ಅರ್ಹರನ್ನು ಶೋಧಿಸುವ ಹೊಣೆಯನ್ನು ಹಿರಿಯರಾದ ಅಹಮದ್‌ ಪಟೇಲ್‌ ಹಾಗೂ ಗುಲಾಂ ನಬಿ ಆಜಾದ್‌ ಅವರಿಗೆ ನೀಡಿದೆ. ಎ.ಕೆ. ಆ್ಯಂಟನಿ ಅವರು ಮಾಜಿ ರಕ್ಷಣಾ ಸಚಿವರಾಗಿದ್ದವರು. ಗಾಂಧಿ ಕುಟುಂಬದ ಅತ್ಯಂತ ನಿಷ್ಠ ನಾಯಕ. ಹೀಗಾಗಿ ಅವರಿಗೆ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳಲು ಈ ಇಬ್ಬರೂ ನಾಯಕರು ಕೋರಿಕೊಂಡಿದ್ದಾರೆ.ಗಾಂಧಿ ಕುಟುಂಬದ ಬಗ್ಗೆ ನನಗೆ ಸಂಪೂರ್ಣ ಗೌರವವಿದೆ. ಆದರೆ ಅನಾರೋಗ್ಯದ ಕಾರಣ ಹುದ್ದೆ ವಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಆ್ಯಂಟನಿ ತಿಳಿಸಿದ್ದಾರೆನ್ನಲಾಗಿದೆ. ಪಕ್ಷ ಬಲಪಡಿಸುವ ಹೊಣೆಗಾರಿಕೆ ಇದೆ. ಹೀಗಾಗಿ ತಾವೂ ಕಾರ್ಯಾಧ್ಯಕ್ಷರಾಗುವುದಿಲ್ಲ ಎಂದು ವೇಣುಗೋಪಾಲ್‌ ಹೇಳಿದ್ದಾರೆ ಎಂದು ಮೂಲಗಳು ವಿವರಿಸಿವೆ.

click me!