
ಚೆನ್ನೈ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿತ್ತು ಎಂಬ ಬಂದೀಖಾನೆ ಇಲಾಖೆ ಮಾಜಿ ಡಿಐಜಿ ಡಿ. ರೂಪಾ ಅವರ ಹೇಳಿಕೆಯನ್ನು ಎಐಎಡಿಎಂಕೆ ಸುಳ್ಳು ಎಂದು ಆರೋಪಿಸಿದೆ. ಅಲ್ಲದೆ ರೂಪಾ ಅವರ ಈ ಆರೋಪಗಳನ್ನು ಹಿಂದಕ್ಕೆ ಪಡೆಯದೇ ಇದ್ದಲ್ಲಿ ಅವರ ವಿರುದ್ಧ ಮಾನನಷ್ಟ ಪ್ರಕರಣವೊಂದನ್ನು ದಾಖಲಿಸುವುದಾಗಿ ಪಕ್ಷ ಬೆದರಿಕೆ ಹಾಕಿದೆ.
ನಾವು ವಿಜಯ್ ಕುಮಾರ್ ಅವರ ವರದಿಯನ್ನು ನಿರೀಕ್ಷಿಸುತ್ತಿದ್ದೇವೆ. ಆರೋಪಗಳಿಗೆ ಸಾಕ್ಷ್ಯಗಳಿದ್ದರೆ ಅವರು ಅದನ್ನು ಕೋರ್ಟ್‌ನಲ್ಲಿ ಸಾಬೀತುಪಡಿಸಲಿ. ನಮ್ಮ ನಾಯಕಿ ವಿರುದ್ಧ ಅನವಶ್ಯಕವಾಗಿ ಮಾನಹಾನಿ ಮಾಡಲಾಗಿದೆ. ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಹತ್ತಿರ ಬರುತ್ತಿರುವ ವೇಳೆಯಲ್ಲೇ ಆರೋಪಗಳನ್ನು ಮಾಡಲಾಗಿದೆ ಎಂದು ಎಐಎಡಿಎಂಕೆ ಕರ್ನಾಟಕ ಕಾರ್ಯದರ್ಶಿ ಪುಗಝೆಂಡಿ ಹೇಳಿದ್ದಾರೆ. ಜೊತೆಗೆ ಪಕ್ಷದ ಮುಖವಾಣಿ ಪತ್ರಿಕೆಯಲ್ಲೂ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.
ಶಶಿಕಲಾ ನಟರಾಜನ್ ಮತ್ತು ಪಕ್ಷದ ಘನತೆಗೆ ಧಕ್ಕೆ ತರುವ ಸಲುವಾಗಿ ರೂಪಾ ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ. ಇಬ್ಬರು ಐಪಿಎಸ್ ಅಧಿಕಾರಿಗಳ ನಡುವಿನ ವೈಯಕ್ತಿಕ ಜಗಳದಲ್ಲಿ ಶಶಿಕಲಾ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಟಿಟಿವಿ ದಿನಕರನ್ ಆರೋಪಿಸಿದ ಬಳಿಕ ರೂಪಾ ವಿರುದ್ಧ ಕೇಸು ದಾಖಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪುಗಝೆಂಡಿ ಹೇಳಿದ್ದಾರೆ.
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.