ಇಬ್ಬರು ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿದ ಕುಮಾರಸ್ವಾಮಿ

By Web DeskFirst Published Jun 24, 2019, 7:38 PM IST
Highlights

ಸಿಎಂ ಕುಮಾರಸ್ವಾಮಿ ಅವರು ಕೊನೆಗೂ ಇಬ್ಬರು ನೂತನ ಸಚಿರಿಗೆ ಖಾತೆ ಹಂಚಿಕೆ ಮಾಡಿದ್ದು, ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. ಹಾಗಾದ್ರೆ ಯಾರಿಗೆ ಯಾವ ಖಾತೆ?.

ಬೆಂಗಳೂರು, [ಜೂ.24]: ಮೈತ್ರಿ ಸರ್ಕಾರದಲ್ಲಿ 10 ದಿನಗಳ ಹಿಂದೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಪಕ್ಷೇತರ ಶಾಸಕರಾದ ಆರ್‌. ಶಂಕರ್‌ ಹಾಗೂ ಎಚ್‌. ನಾಗೇಶ್‌ ಅವರಿಗೆ ಸಿಎಂ ಕೊನೆಗೂ ಖಾತೆ ಹಂಚಿಕೆ ಮಾಡಿದ್ದಾರೆ. 

ಸಿ.ಎಸ್‌. ಶಿವಳ್ಳಿ ಅವರ ನಿಧನದಿಂದ ಖಾಲಿ ಇರುವ ಪೌರಾಡಳಿತ ಖಾತೆಯನ್ನು ರಾಣೇಬೆನ್ನೂರು ಶಾಸಕ ಆರ್. ಶಂಕರ್ ಅವರಿಗೆ ನೀಡಿದರೆ, ಮುಳುಬಾಗಿಲು ಪಕ್ಷೇತರ ಶಾಸಕ ಎಚ್‌. ನಾಗೇಶ್‌ ಅವರಿಗೆ ಗುಬ್ಬಿಯ ಸುರೇಶ್ ಗೌಡ ಅವರ ಬಳಿ ಇದ್ದ ಸಣ್ಣ ಕೈಗಾರಿಕೆ ಖಾತೆ ನೀಡಿದ್ದಾರೆ.

ಇನ್ನು ಸಣ್ಣ ಕೈಗಾರಿಕೆ ಸಚಿವರಾಗಿದ್ದ ಸುರೇಶ್ ಗೌಡ ಅವರಿಗೆ ಬಿಎಸ್ ಪಿ ಶಾಸಕ ಎನ್.ಮಹೇಶ್ ಅವರ ರಾಜೀನಾಮೆಯಿಂದ  ತೆರವಾಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ನೀಡಲಾಗಿದೆ. ಈ ಬಗ್ಗೆ ಸರ್ಕಾರ ಇಂದು [ಸೋಮವಾರ] ಸಂಜೆ ಅಧಿಕೃತ ಆದೇಶ ಹೊರಡಿಸಿದೆ.

 ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಆರ್ ಶಂಕರ್ ಅವರು ಅರಣ್ಯ ಸಚಿವರಾಗಿದ್ದರು. ನಂತರ ಬದಲಾಗದ ರಾಜಕೀಯ ಬೆಳವಣಿಗೆಯಿಂದ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು.

ಆರ್‌. ಶಂಕರ್‌ ಹಾಗೂ ನಾಗೇಶ್‌ ಅವರು ಪ್ರಮಾಣ ವಚನ ಸ್ವೀಕರಿಸಿ 10 ದಿನಗಳಾದರೂ ಖಾತೆ ಹಂಚಿಕೆ ಮಾಡದ ಬಗ್ಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌, ಪ್ರತಿಪಕ್ಷ ಬಿಜೆಪಿ ಹಾಗೂ ಸಾರ್ವಜನಿಕ ವಲಯದಿಂದ ಟೀಕೆಗಳು ಕೇಳಿ ಬಂದಿದ್ದವು. 

ಸ್ವತಃ ಶಂಕರ್‌ ಕೂಡ ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿ, ಈ ಕುರಿತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಳಿ ಗೋಳು ತೋಡಿಕೊಂಡಿದ್ದರು.

click me!