ಮಾತಾಡೋ ಗಿಳಿಯಿಂದ ಮೂವರು ಕಳ್ಳರು ಕಂಬಿ ಹಿಂದೆ!

First Published Jul 4, 2018, 5:15 PM IST
Highlights

ಕಳ್ಳರನ್ನು ಹಿಡಿದುಕೊಟ್ಟ ಆಫ್ರಿಕನ್ ಗ್ರೇ ಪ್ಯಾರೆಟ್

ತನ್ನನ್ನು ಕದ್ದೊಯ್ದ ಕಳ್ಳರನ್ನು ಹಿಡಿದುಕೊಟ್ಟ ಗಿಳಿ

ಮಾಲೀಕ ಸತೀಶ್ ಅವರ ಹೆಸರು ಕೂಗಿ ಅಳುತ್ತಿತ್ತು

ಮಾತನಾಡುವ ಗಿಳಿ ಕಂಡು ಅಚ್ಚರಿಗೊಂಡ ಪೊಲೀಸರು

ಕೊಚ್ಚಿ(ಜು.4): ಮನುಷ್ಯ ಮತ್ತು ಪ್ರಾಣಿ-ಪಕ್ಷಿಗಳ ನಡುವಿನ ಸಂಬಂಧ ತುಂಬ ಗಾಢವಾದದ್ದು. ಯಾವುದೇ ಪ್ರಾಣಿ-ಪಕ್ಷಿಗಳೇ ಆಗಲಿ ಮನುಷ್ಯನ ಸಂಪರ್ಕಕ್ಕೆ ಬಂದ ಮೇಲೆ ಆತನೊಂದಿಗಿನ ಸಂಬಂಧ ಮರೆಯಲು ಅವುಗಳಿಗೆ ಸಾಧ್ಯವೇ ಇಲ್ಲ. 

ಈ ಗಿಳಿಯ ಕತೆಯೂ ಸ್ವಲ್ಪ ಅಂತದ್ದೇ ನೋಡಿ. ಸಾಮಾನ್ಯವಾಗಿ ಗಿಳಿಗಳು ತಮ್ಮ ಮಾಲೀಕರ ಜೊತೆ ಗಾಢವಾದ ಸಂಬಂಧವನ್ನು ಹೊಂದಿರುತ್ತವೆ. ಗಿಳಿಗಳ ಜ್ಞಾಪಕ ಶಕ್ತಿ ಕೂಡ ಅದ್ಭುತವಾಗಿದ್ದು, ಅವು ಹಳೆಯದನ್ನು ಎಂದಿಗೂ ಮರೆಯುವುದಿಲ್ಲ.

ಅದರಲ್ಲೂ ಆಫ್ರಿಕಾದ ಗ್ರೇ ಗಿಳಿಗಳು ತುಸು ಹೆಚ್ಚೇ ಬುದ್ದಿವಂತಿಕೆಯನ್ನು ಹೊಂದಿರುತ್ತವೆ. ಈ ಗಿಳಿ ಕೂಡ ತನ್ನ ಬುದ್ದಿಶಕ್ತಿಯಿಂದ ತನ್ನನ್ನು ಕದ್ದೊಯ್ದಿದ್ದ ಕಳ್ಳರನ್ನು ಹಿಡಿಯುವಲ್ಲಿ ಪೊಲೀಸರಿಗೆ ಸಹಾಯ ಮಾಡಿದೆ.

ಕೊಚ್ಚಿಯ ಸತೀಶ್ ಎಂಬುವವರು ಪೆಟ್ ಶಾಪ್ ವೊಂದನ್ನು ನಡೆಸುತ್ತಾರೆ. ಇಲ್ಲಿ ಅನೇಕ ಪ್ರಾಣಿ-ಪಕ್ಷಿಗಳು ಮಾರಾಟಕ್ಕಿವೆ. ಅವುಗಳಲ್ಲಿ ಆಫ್ರಿಕನ್ ಗ್ರೇ ಪ್ಯಾರೆಟ್ ಕೂಡ ಒಂದು. ತುಂಬ ಮುದ್ದಾಗಿ ಸಾಕಿದ್ದ ಈ ಗಿಳಿ ಅಂದರೆ ಸತೀಶ್ ಅವರಿಗೆ ಪಂಚಪ್ರಾಣ. ಅದರಂತೆ ಈ ಗಿಳಿಗೂ ತನ್ನ ಮಾಲೀಕ ಸತೀಶ್ ಅವರನ್ನು ಕಂಡರೆ ಅಚ್ಚುಮೆಚ್ಚು. ಅಷ್ಟೇ ಅಲ್ಲ ಈ ಗಿಳಿ ತನ್ನ ಮಾಲೀಕ ಸತೀಶ್ ಅವರನ್ನು ಹೆಸರಿಟ್ಟು ಕರೆಯುತ್ತಿತ್ತು ಕೂಡ.

ಆದರೆ ಕಳ್ಳರು ಸತೀಶ್ ಅವರ ಅಂಗಡಗೆ ನುಗ್ಗಿ ಒಂದು ಪರ್ಶಿಯನ್ ಬೆಕ್ಕು, ಎರಡು ಕಾಕ್ಟೇಲ್ ಹಕ್ಕಿಗಳ ಸಮೇತ ಈ ಗಿಳಿಯನ್ನೂ ಕದ್ದೊಯ್ದಿದ್ದರು. ಈ ಕುರಿತು ಸತೀಶ್ ಕೊಚ್ಚಿ ಪೊಲೀಸರಿಗೆ ದೂರು ನೀಡಿದ್ದರು.

ಆದರೆ ಕೆಲವು ದಿನಗಳ ಬಳಿಕ ಇಬ್ಬರು ಗ್ರಾಮಸ್ಥರು ಪೊಲೀಸ್ ಠಾಣೆಗೆ ಬಂದು ಮನೆಯೊಂದರಲ್ಲಿ ನಿರಂತರವಾಗಿ ಗಿಳಿಯ ಅಳುವಿನ ಶಬ್ದ ಕೇಳಿ ಬರುತ್ತಿದ್ದು, ಗಿಳಿ ಯಾವಾಗಲೂ ಸತೀಶ್ ಎಂದು ಕೂಗುತ್ತಿರುತ್ತದೆ ಎಂದು ಹೇಳಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಕಾರಣ ಗಿಳಿ ನಿಜಕ್ಕೂ ಸತೀಶ್ ಅವರ ಹೆಸರು ಕೂಗುತ್ತಾ ಅಳುತ್ತಿತ್ತು.

ಕೂಡಲೇ ಮೂವರು ಖದೀಮರನ್ನು ಬಂಧಿಸಿದ ಪೊಲೀಸರು, ಆಫ್ರಿಕಾದ ಗ್ರೇ ಪ್ಯಾರೆಟ್, ಒಂದು ಪರ್ಶಿಯನ್ ಬೆಕ್ಕು ಮತ್ತು ಎರಡು ಕಾಕ್ಟೇಲ್ ಹಕ್ಕಿಗಳನ್ನು ಸತೀಶ್ ಅವರಿಗೆ ಒಪ್ಪಿಸಿದ್ದಾರೆ. ಒಟ್ಟಿನಲ್ಲಿ ಗಿಳಿಯ ಬುದ್ದಿಮತ್ತೆ ಪೊಲೀಸರಿಗೆ ಮೂವರು ಕಳ್ಳರನ್ನು ಸೆರೆ ಹಿಡಿಯಲು ಸಹಾಯ ಮಾಡಿದ್ದು ನಿಜಕ್ಕೂ ವಿಶೇಷ.  

click me!