ದೋಷಿಯಾದರೂ ಅಡ್ವಾಣಿ ರಾಜೀನಾಮೆ ಬೇಡ: ಪೇಜಾವರ ಶ್ರೀ

By Suvarna Web DeskFirst Published Apr 24, 2017, 9:17 AM IST
Highlights

ಒಂದು ವೇಳೆ ಕೋರ್ಟ್‌ ಅಡ್ವಾಣಿ ಮತ್ತು ಉಮಾಭಾರತಿ ಅವರನ್ನು ರಾಮಮಂದಿರ ಹೋರಾಟದಲ್ಲಿ ತಪ್ಪಿತಸ್ಥರು ಎಂದು ಹೇಳಿದರೂ ಅವರು ತಮ್ಮ ರಾಜಕೀಯ ಸ್ಥಾನಗಳಿಗೆ ರಾಜಿನಾಮೆ ನೀಡಬೇಕಾಗಿಲ್ಲ: ಪೇಜಾವರ ಶ್ರೀ

ಉಡುಪಿ: ಬಿಜೆಪಿಯ ಹಿರಿಯ ಮುಖಂಡ ಲಾಲ್‌ ಕೃಷ್ಣ ಅಡ್ವಾಣಿ ಅವರು ರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಭಾಗವಹಿಸಿದ್ದರೇ ಹೊರತು, ಭ್ರಷ್ಟಾಚಾರದ ಆರೋಪಿ ಅಲ್ಲ. ನಮ್ಮ ದೇಶದಲ್ಲಿ ಭ್ರಷ್ಟಾಚಾರದ ಆರೋಪಿಗಳೇ ಅಧಿಕಾರದಲ್ಲಿ ಮುಂದುವರಿದಿದ್ದರು. ಹಾಗಿರುವಾಗ ಕೇವಲ ಹೋರಾಟದಲ್ಲಿ ಪಾಲ್ಗೊಂಡ ಅಡ್ವಾಣಿ ಅವರನ್ನು ರಾಷ್ಟ್ರಪತಿಯನ್ನಾಗಿ ಆರಿಸುವುದರಲ್ಲಿ ತಪ್ಪೇನಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಅಡ್ವಾಣಿ ಅವರು ಅಪರಾಧಿ ಅಲ್ಲ, ವಾಸ್ತವದಲ್ಲಿ ಅವರು ಬಾಬ್ರಿ ಮಸೀದಿ ಧ್ವಂಸವಾದಾಗ ಅತ್ಯಂತ ದುಃಖಪಟ್ಟಿದ್ದರು ಎಂದು ಹಳೇ ಘಟನೆ ನೆನಪಿಸಿಕೊಂಡರು. ಕೇಂದ್ರ ಸಚಿವೆ ಉಮಾಭಾರತಿ ಕೂಡ ರಾಮಮಂದಿರ ಹೋರಾಟದಲ್ಲಿ ಭಾಗವಹಿಸಿದ್ದರು. ಅವರು ಕೂಡ ಭ್ರಷ್ಟಾಚಾರ ಆರೋಪಿ ಅಲ್ಲ. ಹಿಂದೆ ಲಾಲು ಪ್ರಸಾದ್‌ ಯಾದವ್‌, ಜಯಲಲಿತಾರ ಮೇಲೆ ಭ್ರಷ್ಟಾಚಾರದ ಭಾರೀ ಆರೋಪಗಳಿದ್ದಾಗಲೂ ಅವರು ರಾಜಿನಾಮೆ ನೀಡದೆ ಅಧಿಕಾರದಲ್ಲಿ ಮುಂದುವರಿದಿದ್ದರು. ಹಾಗಿರುವಾಗ ಉಮಾಭಾರತಿಯಂಥವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕಿಲ್ಲ ಎಂದು ಅವರು ತಮ್ಮ ಶಿಷ್ಯೆಯನ್ನು ಸಮರ್ಥಿಸಿಕೊಂಡರು.

ಒಂದು ವೇಳೆ ಕೋರ್ಟ್‌ ಅಡ್ವಾಣಿ ಮತ್ತು ಉಮಾಭಾರತಿ ಅವರನ್ನು ರಾಮಮಂದಿರ ಹೋರಾಟದಲ್ಲಿ ತಪ್ಪಿತಸ್ಥರು ಎಂದು ಹೇಳಿದರೂ ಅವರು ತಮ್ಮ ರಾಜಕೀಯ ಸ್ಥಾನಗಳಿಗೆ ರಾಜಿನಾಮೆ ನೀಡಬೇಕಾಗಿಲ್ಲ ಎಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟರು.

click me!