
ಬೆಂಗಳೂರು(ಜೂ.29): ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಆರ್‌ಎಸ್‌ಎಸ್ ಹಾಗೂ ಎಬಿವಿಪಿ ಪರ ಇರುವ ಕಾಲೇಜುಗಳು ಹಾಗೂ ಕಾಲೇಜು ಪ್ರಾಂಶುಪಾಲರ ಪಟ್ಟಿಯನ್ನು ಸಿದ್ಧಪಡಿಸಿ ತಮಗೆ ನೀಡುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ರಾಜ್ಯ ಯುವ ಕಾಂಗ್ರೆಸ್ ಹಾಗೂ ವಿದ್ಯಾರ್ಥಿ ಕಾಂಗ್ರೆಸ್‌ಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಈ ಪಟ್ಟಿತಮ್ಮ ಕೈ ಸೇರಿದ ನಂತರ ಇಂತಹ ಕಾಲೇಜುಗಳು ಹಾಗೂ ಪ್ರಾಂಶುಪಾಲರ ಸೂಕ್ತ ಕ್ರಮ ಜರುಗುವ ಭರವಸೆಯನ್ನು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಮುಂಚೂಣಿ ಘಟಕಗಳ ಸಭೆಯಲ್ಲಿ ವೇಣುಗೋಪಾಲ್ ಈ ಸೂಚನೆ ನೀಡಿದ್ದಾರೆ. ಇದಕ್ಕೆ ಕಾರಣ ರಾಜ್ಯದಲ್ಲಿನ ಹಲವು ಕಾಲೇಜು ಹಾಗೂ ವಿದ್ಯಾಸಂಸ್ಥೆಗಳಲ್ಲಿ ಯುವ ಕಾಂಗ್ರೆಸ್ಸಿಗರಿಗೆ ಪ್ರವೇಶವನ್ನು ನೀಡದಿರುವ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರ ಧೋರಣೆ ಬಗ್ಗೆ ಸದರಿ ಮುಂಚೂಣಿ ಘಟಕಗಳು ದೂರಿದ್ದು.
ಯುವ ಕಾಂಗ್ರೆಸ್ ಹಾಗೂ ವಿದ್ಯಾರ್ಥಿ ಕಾಂಗ್ರೆಸ್‌ನ ಪದಾಧಿಕಾರಿಗಳ ನಾಯಕರೊಂದಿಗೆ ಸಭೆ ನಡೆಸಿದ ವೇಣುಗೋಪಾಲ್ ಅವರು ಪ್ರತಿ ಕಾಲೇಜನ್ನು ಯುವ ಹಾಗೂ ವಿದ್ಯಾರ್ಥಿ ಕಾಂಗ್ರೆಸ್ ಮುಟ್ಟಬೇಕು. ಅಲ್ಲಿ ಸಂಘಟನೆಯನ್ನು ಚುರುಕುಗೊಳಿಸಬೇಕು. ಈ ಕೆಲಸ ಏಕೆ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಮುಂಚೂಣಿ ಘಟಕಗಳ ಮುಖಂಡರು, ರಾಜ್ಯದ ಹಲವಾರು ಕಾಲೇಜು ಹಾಗೂ ಕಾಲೇಜುಗಳ ಪ್ರಾಂಶುಪಾಲರು ಆರ್‌ಎಸ್‌ಎಸ್ ಹಾಗೂ ಎಬಿವಿಪಿ ಬೆಂಬಲಿಗರಾಗಿದ್ದು, ಯುವ ಕಾಂಗ್ರೆಸ್ಸಿಗರಿಗೆ ಕಾಲೇಜಿನ ಆವರಣಕ್ಕೂ ಸುಳಿಯಲು ಬಿಡುತ್ತಿಲ್ಲ. ಘಟಕಗಳ ವತಿಯಿಂದ ಯಾವುದೇ ಹೋರಾಟ, ಕಾರ್ಯಕ್ರಮ ಆಯೋಜನೆಗೂ ಸಹಕಾರ ನೀಡುತ್ತಿಲ್ಲ. ಇದರಿಂದ ಕಾಲೇಜು ವಿದ್ಯಾರ್ಥಿಗಳನ್ನು ಮುಟ್ಟುವುದು ಕಷ್ಟಕರವಾಗಿದೆ ಎಂದು ದೂರಿದ್ದಾರೆ. ಪ್ರತಿಕ್ರಿಯಿಸಿದ ವೇಣುಗೋಪಾಲ್ ಇಂತಹ ಕಾಲೇಜು ಹಾಗೂ ಪ್ರಾಂಶುಪಾಲರ ಪಟ್ಟಿಯನ್ನು ಸಿದ್ಧಪಡಿಸಿ ತಮಗೆ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೋದಿ ವಿರುದ್ಧ ಬೀದಿ ನಾಟಕ: ರಾಜ್ಯದ ಯುವಕರಲ್ಲಿ ಮೋದಿ ಕುರಿತು ಭ್ರಮೆ ಮೂಡಿಸುವ ಬಿಜೆಪಿಯ ತಂತ್ರಗಳಿಗೆ ಪ್ರತಿಯಾಗಿ ಮೋದಿಯ ನಿಜ ಬಣ್ಣ ಬಯಲು ಮಾಡಲು ಮೋದಿ ಹೇಳಿದ ಸುಳ್ಳುಗಳನ್ನು ಆಧರಿಸಿ ಕಾಲೇಜುಗಳ ಬಳಿ ಬೀದಿ ನಾಟಕಗಳನ್ನು ಹಮ್ಮಿಕೊಳ್ಳಲು ಈ ಸಂದರ್ಭದಲ್ಲಿ ತೀರ್ಮಾನಿಸಲಾಗಿದೆ.
ಕಿಸಾನ್ ಮಜ್ದೂರ್ ಕಾಂಗ್ರೆಸ್‌ನಿಂದ ಪಾದಯಾತ್ರೆ: ರೈತರಿಗೆ ಮೋದಿ ಎಸಗುತ್ತಿರುವ ಅನ್ಯಾಯದ ವಿರುದ್ಧ ರಾಜ್ಯದಲ್ಲಿ ಜಾಗೃತಿ ಮೂಡಿಸಲು ಕಿಸಾನ್ ಕೇತ್ ಮಜ್ದೂರ್ ಕಾಂಗ್ರೆಸ್‌ಗೆ ರಾಜ್ಯಾದ್ಯಂತ ಪಾದಯಾತ್ರೆಗಳನ್ನು ರೂಪಿಸುವಂತೆ ವೇಣುಗೋಪಾಲ್ ಸೂಚನೆ ನೀಡಿದ್ದಾರೆ. ಅಲ್ಲದೆ, ಮೋದಿ ರೈತರಿಗೆ ಮಾಡಿರುವ ಅನ್ಯಾಯಗಳ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮ ರೂಪಿಸುವಂತೆಯೂ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.