
ಬೆಂಗಳೂರು (ಫೆ.28): ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಂಟು ಕಡೆ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಬಿಬಿಎಂಪಿ ಮುಖ್ಯ ಇಂಜಿನಿಯರ್ ಕೆ.ಚಿ.ನಾಗರಾಜು ಹಾಗೂ ಬಿಡಿಎ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಿ.ವಿ.ಕುಮಾರ್ ಅವರ ನಿವಾಸಗಳ ಮೇಲೆ ದಾಳಿ ನಡೆದಿದೆ. ಬೆಂಗಳೂರಿನ ಜಯನಗರದಲ್ಲಿರುವ ಇಬ್ಬರು ಅಧಿಕಾರಿಗಳ ಮನೆಗಳ ಮೇಲೂ ದಾಳಿ ನಡೆಸಿ ಮಹತ್ವದ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದರು.
ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾ.ಪಂ ಪಿಡಿಓ ಎಸ್.ವಿ.ಡೊಳ್ಳಿನ್, ಅವ್ಯವಹಾರ ಹಾಗೂ ಅಕ್ರಮ ಆಸ್ತಿ ಆರೋಪದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ. ಯಾವಗಲ್ ಗ್ರಾ.ಪಂ ಕಚೇರಿ, ಪಿಡಿಓ, ಹಿರೇಹಾಳದಲ್ಲಿನ ಮನೆ ಹಾಗೂ ಸಂಬಂಧಿಕರ ಮನೆ ಮೇಲೂ ದಾಳಿ ನಡೆದಿದೆ. ಪಿಡಿಓ ತಂಗಿ ಸುಜಾತಾ ಮನೆ ಮೇಲೂ ದಾಳಿ ನಡೆಸಿದ್ದಾರೆ.
ಡಿವೈಎಸ್ಪಿ ಎಂ.ವಿ.ಮಲ್ಲಾಪೂರ ನೇತೃತ್ವದಲ್ಲಿ ಬೆಳಿಗ್ಗೆಯಿಂದಲೇ ದಾಳಿ ನಡೆಸಿರೋ ಎಸಿಬಿ ಅಧಿಕಾರಿಗಳು ಕಡತ ಪರಿಶೀಲನೆ ನಡೆಸಿದರು.
ಬೆಳಗಾವಿಯಲ್ಲಿ ಡೆಪ್ಯೂಟಿ ತಹಶೀಲ್ದಾರ್ ಸಲೀಂ ಸಾಬುಸಾಬ್ ಸೈಯದ್ ಮನೆ ಮೇಲೆ ಎಸಿಬಿ ದಾಳಿ ನಡೆಸಿತು. ನಗರದ ರಾಮತೀರ್ಥ ನಿವಾಸ, ಹುದಲಿ ಗ್ರಾಮದ ಪತ್ನಿ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದರು.
ಎಸಿಬಿ ದಾಳಿ ವೇಳೆ ಸಿಕ್ಕವು ಸಾವಿರಾರು ಸೀರೆಗಳು!
ಚಿತ್ರದುರ್ಗದಲ್ಲಿ ಆರ್ಟಿಓ ಇನ್ಸ್ಪೆಕ್ಟರ್ ಕರುಣಾಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಕರುಣಾಕರ ವಿರುದ್ಧ ಅಕ್ರಮ ಅಸ್ತಿ ಹೊಂದಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಶಿವಮೊಗ್ಗದ ಎಸಿಬಿ ವೃತ್ತ ನಿರೀಕ್ಷಕ ಹಾಗೂ ಚಿತ್ರದುರ್ಗದ ಎಸಿಬಿ ವೃತ್ತ ನಿರೀಕ್ಷಕ ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ತುರುವನೂರು ರಸ್ತೆಯಲ್ಲಿರುವ ವೆಂಕಟಾದ್ರಿ ಬಡಾವಣೆಯಲ್ಲಿರುವ ಕರುಣಾಕರ್ ಮನೆ, ಬೆಂಗಳೂರಿನ ದೊಮ್ಮಲೂರಿನಲ್ಲಿರುವ ನಿವಾಸ ಹಾಗೂ ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರಿನಲ್ಲಿರುವ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ. ಇನ್ನು ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಕರಿಯಪ್ಪ ಕರ್ನಲ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಗರದ ವಿಶ್ವೇಶ್ವರ ನಗರದಲ್ಲಿರುವ ನಿವಾಸ, ಆಪ್ತರ ನಿವಾಸಗಳಲ್ಲಿಯೂ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಅಪಾರ ಪ್ರಮಾಣದ ಆಸ್ತಿ ಪತ್ರಗಳು, ನಗದು ಪತ್ತೆಯಾಗಿದ್ದು ಪರಿಶೀಲನೆ ನಡೆಸಿದರು. ಈ ವೇಳೆ ಕರ್ನಲ್ ಮನೆಯಲ್ಲಿ ಸಾವಿರಾರು ಸೀರೆಗಳು ಲಭ್ಯವಾಗಿದ್ದು ಎಸಿಬಿ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.