ಬೈಂದೂರು ಬಳಿ ರೈಲಲ್ಲಿ ಬೆಂಕಿ: ತಪ್ಪಿದ ಭಾರೀ ದುರಂತ

Published : Apr 29, 2019, 08:37 AM ISTUpdated : Apr 29, 2019, 11:53 AM IST
ಬೈಂದೂರು ಬಳಿ ರೈಲಲ್ಲಿ ಬೆಂಕಿ: ತಪ್ಪಿದ ಭಾರೀ ದುರಂತ

ಸಾರಾಂಶ

ಬೈಂದೂರು ಬಳಿ ರೈಲಲ್ಲಿ ಬೆಂಕಿ: ತಪ್ಪಿತು ಭಾರಿ ಅಗ್ನಿ ಅನಾಹುತ| ಬೆಂಕಿ ಕಂಡು ಚಾಲಕನ ಗಮನಕ್ಕೆ ತಂದ ಟೀಸಿ| ಬೆಂಕಿ ನಂದಿಸಿದ ಸಿಬ್ಬಂದಿ, ರೈಲು 2 ಗಂಟೆ ತಡ

ಕುಂದಾಪುರ[ಏ.29]: ಮುಂಬೈಯಿಂದ ಕೇರಳಕ್ಕೆ ಹೋಗುತ್ತಿದ್ದ ರೈಲಿನಲ್ಲಿ ಭಾನುವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಸಂಭಾವ್ಯ ಭಾರಿ ದುರಂತವೊಂದು ಕೂದಲೆಳೆಯ ಅಂತರದಿಂದ ತಪ್ಪಿದೆ.

ಇಲ್ಲಿನ ಬೈಂದೂರು ರೈಲ್ವೆ ನಿಲ್ದಾಣದಿಂದ ಅನತಿ ದೂರದಲ್ಲಿರುವ ಕಂಬದಕೋಣೆ ಗ್ರಾಮದ ಮೂಲಕ ಮಧ್ಯರಾತ್ರಿ ಕಳೆದು 1.20ಕ್ಕೆ ದೆಹಲಿಯಿಂದ ಮುಂಬೈ ಮೂಲಕ ಎರ್ನಾಕುಲಂ ಕಡೆಗೆ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ (12618) ರೈಲು ಹಾದು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ರೈಲಿನ ಎಸಿ ಕೋಚ್‌ನಲ್ಲಿ ಈ ಬೆಂಕಿ ಕಾಣಿಸಿಕೊಂಡಿತ್ತು. ರಾತ್ರಿ ವೇಳೆ ಪ್ರಯಾಣಿಕರು ಗಾಢ ನಿದ್ದೆಯಲ್ಲಿದ್ದರಿಂದ ಬೆಂಕಿ ಹತ್ತಿಕೊಂಡದ್ದು ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಬೋಗಿಯಲ್ಲಿ ತಿರುಗಾಡುತ್ತಿದ್ದ ರೈಲಿನ ಟಿ.ಸಿ.ಯೊಬ್ಬರು ಎಸಿ ಕೋಚ್‌ನ ಬಾಗಿಲಿನ ಮೂಲಕ ಬೆಂಕಿ ಹೊರಗೆ ಚಿಮ್ಮುತ್ತಿದ್ದನ್ನು ಗಮನಿಸಿದರು.

ಅವರು ತಕ್ಷಣ ರೈಲಿನ ಚಾಲಕರಿಗೆ ಮಾಹಿತಿ ನೀಡಿ, ಅವರು ಸೇನಾಪುರ ಮತ್ತು ಬಿಜೂರು ಗ್ರಾಮದ ಮಧ್ಯೆ ರೈಲನ್ನು ನಿಲ್ಲಿಸಿದರು. ತಕ್ಷಣ ರೈಲಿನಲ್ಲಿದ್ದ ಅಗ್ನಿಶಾಮಕ ಉಪಕರಣಗಳ ಮೂಲಕ ಬೆಂಕಿಯನ್ನು ನಂದಿಸಲಾಗಿದೆ. ಬೋಗಿಯೊಳಗಿನ ಒಂದೆರಡು ಹಾಸಿಗೆಗಳಿಗೆ ಬೆಂಕಿ ತಗುಲಿ ಸ್ವಲ್ಪಮಟ್ಟಿನ ಹಾನಿಯಾಗಿದೆ, ಬಿಟ್ಟರೆ ಬೇರೆ ಯಾವುದೇ ಅಪಾಯ ಸಂಭವಿಸಿಲ್ಲ. ನಂತರ ಈ ಬೋಗಿಯನ್ನು ಪ್ರತ್ಯೇಕಿಸಿ, ರೈಲನ್ನು ಬಿಜೂರು ನಿಲ್ದಾಣಕ್ಕೆ ತೆಗೆದುಕೊಂಡು ಹೋಗಲಾಯಿತು. ಇದರಿಂದ ಸುಮಾರು 2 ಗಂಟೆಗಳ ಕಾಲ ರೈಲು ಸಂಚಾರ ವಿಳಂಬವಾಯಿತು.

ಮಹಿಳೆಗೆ ಕಂಡಿತೇ?:

ಕುಂದಾಪುರ ನಿಲ್ದಾಣದಲ್ಲಿ ಇಳಿಯಲಿದ್ದ ಮಹಿಳೆಯೊಬ್ಬರು ಎಸಿ ಕೋಚ್‌ಗೆ ತಗಲಿದ್ದ ಬೆಂಕಿಯನ್ನು ಮೊದಲು ನೋಡಿ, ಟಿಸಿಗೆ ಮಾಹಿತಿ ನೀಡಿದರು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆದರೆ ಕೊಂಕಣ ರೈಲ್ವೆಯ ಅಧಿಕಾರಿಗಳು ಇದನ್ನು ನಿರಾಕರಿಸಿದ್ದು, ಬೆಂಕಿಯನ್ನು ಮೊದಲು ಗಮನಿಸಿದ್ದು ಟಿಸಿ, ಅವರ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿದೆ ಎಂದು ಶ್ಲಾಘಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ