ನವದೆಹಲಿ(ಸೆ. 22): ಮಧ್ಯರಾತ್ರಿಯ ದಾಳಿ, ಹೆಂಡತಿ ಮೇಲೆ ಹಲ್ಲೆ ಸೇರಿದಂತೆ ಕೆಲವಾರು ವಿವಾದಗಳಿಗೆ ಕಾರಣವಾಗಿದ್ದ ಆಮ್ ಆದ್ಮಿ ಪಕ್ಷದ ನಾಯಕ ಸೋಮನಾಥ್ ಭಾರ್ತಿ ಈಗ ಬೇರೊಂದು ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಏಮ್ಸ್ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಭಾರ್ತಿಯವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧನದ ವಿಷಯವನ್ನ ಸೋಮನಾಥ್ ಭಾರ್ತಿಯವರೇ ಸ್ವತಃ ಟ್ವೀಟ್ ಮಾಡಿ ತಿಳಿಸಿದ್ದಾರೆ. ತನ್ನನ್ನು ಗೌತಮ್ ನಗರದ ಹೌಸ್'ಖಾಸ್ ಪೊಲೀಸ್ ಠಾಣೆಯಲ್ಲಿ ಬಂಧಿಸಿಡಲಾಗಿದೆ ಎಂದು ಸೋಮನಾಥ್ ಭಾರ್ತಿ ತಿಳಿಸಿದ್ದಾರೆ. ಇದರೊಂದಿಗೆ ಎರಡು ದಿನಗಳ ಅಂತರದಲ್ಲಿ ಇಬ್ಬರು ಆಮ್ ಆದ್ಮಿ ಮುಖಂಡರ ಬಂಧನವಾದಂತಾಗಿದೆ.
ಏನಿದು ಪ್ರಕರಣ?
ಆಲ್ ಇಂಡಿಯಾ ಇನ್ಸ್'ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(AIIMS) ನೀಡಿರುವ ದೂರಿನ ಪ್ರಕಾರ ಇದೇ ತಿಂಗಳ ಸೆಪ್ಟೆಂಬರ್ 6ರಂದು ಸಂಸ್ಥೆಯ ಮೇಲೆ ಮಾಜಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಹಾಗೂ 27 ಇತರೆ ಜನರು ದಾಳಿ ನಡೆಸುತ್ತಾರೆ. ಆಸ್ಪತ್ರೆಯ ಗೋಡೆಯನ್ನು ಕೆಡವಲು ಜನರಿಗೆ ಪ್ರಚೋದನೆ ನೀಡುತ್ತಾರೆ. ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸುತ್ತಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆದರೆ, ಆಸ್ಪತ್ರೆಯ ಆರೋಪವನ್ನು ಸೋಮನಾಥ್ ಭಾರ್ತಿ ತಳ್ಳಿಹಾಕುತ್ತಾರೆ. ತಮಗೆ ಒಳಗೆ ಪ್ರವೇಶಿಸಲು ಏಮ್ಸ್ ಸಂಸ್ಥೆ ನಿರಾಕರಿಸಿತು ಎಂದು ಭಾರ್ತಿ ಪ್ರತ್ಯಾರೋಪ ಮಾಡಿದ್ದಾರೆ. "ಸ್ಥಳೀಯ ನಿವಾಸಿಗಳ ಕ್ಷೇಮದ ದೃಷ್ಟಿಯಿಂದ ಆಸ್ಪತ್ರೆ ಈ ಗೋಡೆ ಉರುಳಿಹೋಗಬೇಕು" ಎಂದು ಆಮ್ ಆದ್ಮಿ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಆಮ್ ಆದ್ಮಿಯ ಹಿಂದಿನ 49 ದಿನಗಳ ಆಡಳಿತದ ವೇಳೆ ಸೋಮನಾಥ್ ಭಾರ್ತಿಯವರು ಕಾನೂನು ಸಚಿವರಾಗಿದ್ದರು. ಆಗ ಅವರು ತಮ್ಮ ವರ್ತನೆಗಳ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. ಮಧ್ಯರಾತ್ರಿಯಲ್ಲಿ ನೈಜೀರಿಯಾ ದೇಶದ ಮಹಿಳೆ ಮೇಲೆ ಜನರ ಗುಂಪು ಹಲ್ಲೆ ನಡೆಸಲು ಅವರು ಕಾರಣರಾಗಿದ್ದರು. ಡ್ರಗ್ ಮತ್ತು ಸೆಕ್ಸ್ ದಂಧೆ ನಡೆಯುತ್ತಿದೆ ಎಂಬ ಕಾರಣಕ್ಕೆ ಆ ಮಹಿಳೆ ಮೇಲೆ ದಾಳಿ ಮಾಡಲಾಗಿತ್ತು. ಆದರೆ, ಆ ನೈಜೀರಿಯನ್ ಮಹಿಳೆ ಅಮಾಯಕಳು ಎಂಬುದು ಬಳಿಕ ಗೊತ್ತಾಗಿತ್ತು. ಸೋಮನಾಥ್ ಭಾರ್ತಿಯವರಿಂದ ಆದ ಈ ದಾಳಿ ಘಟನೆ ಸಾಕಷ್ಟು ಟೀಕೆಗೆ ತುತ್ತಾಗಿತ್ತು.
ಕಳೆದ ವರ್ಷ ತಮ್ಮ ಮೇಲೆ ಸೋಮನಾಥ್ ಭಾರ್ತಿಯವರು ಹಲ್ಲೆ ಮಾಡಿದರೆಂದು ಅವರ ಪತ್ನಿಯೇ ಸ್ವತಃ ದೂರು ದಾಖಲಿಸಿದ್ದರು. ಆ ಪ್ರಕರಣ ಸಂಬಂಧ ಬಂಧಿತರಾಗಿದ್ದ ಭಾರ್ತಿಯವರು ಸದ್ಯ ಜಾಮೀನಿನ ಮೇಲೆ ಹೊರಬಂದಿದ್ದಾರೆ.