ಸರ್ಕಾರಿ ಸವಲತ್ತುಗಳನ್ನು ಪಡೆಯಲು ಕಡ್ಡಾಯವಾಗಿರುವ ಆಧಾರ್ ಕಾರ್ಡ್ ಅನ್ನು ಇನ್ನು ಮುಂದೆ ಮದ್ಯ ಖರೀದಿಗೂ ಕಡ್ಡಾಯಗೊಳಿಸಿದರೆ ಅಚ್ಚರಿ ಇಲ್ಲ. ಇಂಥದ್ದೊಂದು ಚರ್ಚೆ ಈಗ ಆರಂಭವಾಗಿದೆ. ಮದ್ಯದ ಬಾಟಲಿ ಮತ್ತು ಟೆಟ್ರಾ ಪ್ಯಾಕ್‌ಗಳಿಂದ ಉಂಟಾಗುತ್ತಿರುವ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಇಂತಹ ಹಕ್ಕೊತ್ತಾಯ ಕೇಳಿಬಂದಿದೆ.
ಮಂಗಳೂರು (ಸೆ. 01): ಸರ್ಕಾರಿ ಸವಲತ್ತುಗಳನ್ನು ಪಡೆಯಲು ಕಡ್ಡಾಯವಾಗಿರುವ ಆಧಾರ್ ಕಾರ್ಡ್ ಅನ್ನು ಇನ್ನು ಮುಂದೆ ಮದ್ಯ ಖರೀದಿಗೂ ಕಡ್ಡಾಯಗೊಳಿಸಿದರೆ ಅಚ್ಚರಿ ಇಲ್ಲ. ಇಂಥದ್ದೊಂದು ಚರ್ಚೆ ಈಗ ಆರಂಭವಾಗಿದೆ.
ಹದಿನೆಂಟು ವರ್ಷದೊಳಗಿನ ಮಕ್ಕಳು ಕುಡಿತದ ಚಟದಿಂದ ಮಾನಸಿಕ ರೋಗಕ್ಕೆ ಬಲಿಯಾಗುತ್ತಿದ್ದು ಮತ್ತು ಮದ್ಯದ ಬಾಟಲಿ ಮತ್ತು ಟೆಟ್ರಾ ಪ್ಯಾಕ್‌ಗಳಿಂದ ಉಂಟಾಗುತ್ತಿರುವ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಇಂತಹ ಹಕ್ಕೊತ್ತಾಯ ಕೇಳಿಬಂದಿದೆ.
ಟೆಟ್ರಾ ಪ್ಯಾಕ್ ಮತ್ತು ಬಾಟಲಿಗಳಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ತಡೆಯಲು ಮದ್ಯ ಖರೀದಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸುವ ವಿಚಾರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ ಮಹತ್ವದ ಸೂಚನೆ ನೀಡಿದೆ.
ಸರ್ಕಾರದ ನಿರ್ದೇಶನ ಹಿನ್ನಲೆಯಲ್ಲಿ ಅಬಕಾರಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಇಲಾಖಾ ಆಯುಕ್ತರಿಗೆ ಪತ್ರ ಬರೆದು ಜಿಲ್ಲಾ ಕೇಂದ್ರಗಳಿಂದ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ಟೆಟ್ರಾಪ್ಯಾಕ್ ಹಾಗೂ ಬಾಟಲಿಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯ ತಡೆಯಲು ಮದ್ಯ ಖರೀದಿಗೆ ಆಧಾರ್ ಕಾರ್ಡ್ ಕಡ್ಡಾಯ.
ನಿರ್ಜನ ಪ್ರದೇಶ, ಮೈದಾನ, ಉದ್ಯಾನವನ, ಸಾರ್ವಜನಿಕ ಸ್ಥಳಗಳು, ಪಾರ್ಕಿಂಗ್ ಪ್ರದೇಶ, ಕೆರೆ, ನದಿ, ಜಲಮೂಲಗಳಲ್ಲಿ ಎಲ್ಲೆಂದರಲ್ಲಿ ಕುಡಿದು ಬೇಕಾಬಿಟ್ಟಿಈ ಟೆಟ್ರಾ ಪ್ಯಾಕ್ ಹಾಗೂ ಮದ್ಯದ ಬಾಟಲಿಗಳನ್ನು ಬಿಸಾಡಲಾಗುತ್ತಿದೆ. ಇವು ಜಲಮೂಲಗಳನ್ನು ತಲುಪಿ ಪರಿಸರಕ್ಕೆ ಹಾಗೂ ಪ್ರಾಣಿ, ಜನಜೀವನದ ಮೇಲೆ ಹಾನಿಯನ್ನು ಉಂಟುಮಾಡುತ್ತಿದೆ.
ಜೊತೆಗೆ ಜಲಮೂಲಗಳನ್ನು ಕಲುಷಿತಗೊಳಿಸುತ್ತಿವೆ. ಹೀಗಾಗಿ ಇದನ್ನು ತಡೆಗಟ್ಟಲು ಆರ್ಧಾ ಕಡ್ಡಾಯಗೊಳಿಸಬೇಕು. ಹೀಗೆ ಮಾಡಿದರೆ ಮದ್ಯ ಬಾಟಲು, ಟೆಟ್ರಾಪ್ಯಾಕ್ ಖರೀದಿದಾರನನ್ನು ಜವಾಬ್ದಾರರನ್ನಾಗಿ ಮಾಡಬಹುದು ಎಂಬ ಸಲಹೆಯನ್ನು ನೀಡಲಾಗಿದೆ.
ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಅಬಕಾರಿ ಆಯುಕ್ತರು ರಾಜ್ಯದ ಎಲ್ಲ ಉಪ ಆಯುಕ್ತರಿಗೆ ಸಂದೇಶ ರವಾನಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಹಿಂಬರಹ ನೀಡುವಂತೆ ತಿಳಿಸಿದ್ದಾರೆ. ಅದರಂತೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಬಕಾರಿ ನಿರೀಕ್ಷಕರು ಆಯುಕ್ತರಿಗೆ ಹಿಂಬರಹ ಸಲ್ಲಿಸಿದ್ದಾರೆ. ಈ ವಿಚಾರವೀಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಅಬಕಾರಿ ನಿಯಮದಲ್ಲಿ ಮದ್ಯ ಮಾರಾಟ ಬಿಟ್ಟರೆ, ಬಳಸಿದ ಬಾಟಲಿ ನಾಶ ಮಾಡುವ ಬಗ್ಗೆ ಉಲ್ಲೇಖವಿಲ್ಲ. ಇದರಿಂದಾಗಿ ಪರಿಸರ ನಾಶ, ರಾಜ್ಯದಲ್ಲಿ ಈಗ ಮದ್ಯಪಾನಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಈಗ 18 ಸಾವಿರ ಕೋಟಿ ರು. ಆದಾಯ ಜಾಸ್ತಿಯಾಗಿದೆ. ಹೀಗಿರುವಾಗ ಯುವಕರು ಕೂಡ ಅಧಿಕ ಪ್ರಮಾಣದಲ್ಲಿ ಸರಾಯಿ ಸೇವಿಸುತ್ತಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಮದ್ಯ ಖರೀದಿಸಬೇಕಾದರೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸುವಂತೆ ಕೋರಿ ಪತ್ರ ಬರೆದಿದ್ದೇನೆ.
-ಶಶಿಧರ ಶೆಟ್ಟಿ, ಸಂಚಾಲಕ, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ