
ಬೆಂಗಳೂರು[ಅ.11]: ನಕಲಿ ಜಾಮೀನು ನೀಡಿ ನ್ಯಾಯಾಲಯಕ್ಕೆ ವಂಚಿಸಿದ್ದ ವಂಚಕನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕತ್ರಿಗುಪ್ಪೆಯ ನವೀನ್ ಕುಮಾರ್(29) ಬಂಧಿತ. ಮಂಡ್ಯ ಮೂಲದ ಆರೋಪಿ ನವೀನ್ ವಿರುದ್ಧ ಸೋಲದೇವನಹಳ್ಳಿ, ಬಸವನಗುಡಿ, ಮಲ್ಲೇಶ್ವರಂ, ವಿಜಯನಗರ, ರಾಜಾಜಿನಗರ ಸೇರಿದಂತೆ ಹಲವು ಠಾಣೆಗಳಲ್ಲಿ 25ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ.
ಆರೋಪಿ ಈ ಎಲ್ಲಾ ಪ್ರಕರಣಗಳಲ್ಲಿ ನಕಲಿ ಜಾಮೀನು ನೀಡಿ ಬಿಡುಗಡೆ ಹೊಂದುತ್ತಿದ್ದ. ಈತ ದಾಸನಪುರ ಆಲೂರಿನಲ್ಲಿರುವ ಹೆಗ್ಗಡದೇವನಪುರದ ನಿವಾಸಿ ಎಚ್.ಆರ್.ಬೈರೇಗೌಡ ಅವರಿಗೆ ಸೇರಿದ 17.5 ಗುಂಟೆ ಜಮೀನಿನ ಪಹಣಿ ಮತ್ತು ಮ್ಯುಟೇಷನ್ ಪ್ರತಿಗಳನ್ನು ಕಂದಾಯ ಇಲಾಖೆಯಿಂದ ಪಡೆದುಕೊಂಡಿದ್ದ. ಬೈರೇಗೌಡ ಹೆಸರಿನಲ್ಲಿ ನಕಲಿ ಓಟರ್ ಐಡಿ ಕಾರ್ಡ್‌ಗಳನ್ನು ಸೃಷ್ಟಿಸಿ, ಐಡಿ ಕಾರ್ಡ್‌ಗೆ ತನ್ನ ಭಾವಚಿತ್ರ ಹಾಕಿಕೊಂಡು ಜಮೀನು ತನ್ನದೆಂದು ನಂಬಿಸಿದ್ದ. ಈ ಮೂಲಕ ಜಾಮೀನು ಪಡೆದುಕೊಳ್ಳುತ್ತಿದ್ದ. ಮೈಸೂರಿನ ರಾಜಣ್ಣ ಎಂಬುವವರೊಂದಿಗೆ ಸೇರಿಕೊಂಡು ವಕೀಲರೊಬ್ಬರ ನೆರವಿನೊಂದಿಗೆ ಅಪರಾಧ ಪ್ರಕರಣಗಳಲ್ಲಿ ನಕಲಿ ದಾಖಲೆ ನೀಡಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶ್ಯೂರಿಟಿ ನೀಡಿ ಜಾಮೀನು ಸಿಗುವಂತೆ ಮಾಡುತ್ತಿದ್ದ.
ಸಿಕ್ಕಿ ಬಿದ್ದಿದ್ದು ಹೇಗೆ?
ಅವಧಿಗೂ ಮೀರಿ ನಗರದಲ್ಲಿ ನೆಲೆಸಿದ್ದ ನೈಜೀರಿಯಾ ಮೂಲದ ಮೈಕಲ್ ಟೋನಿ ಎಂಬಾತನಿಗೆ ಆರೋಪಿ ಜಾಮೀನು ನೀಡಿದ್ದ. ಜೈಲಿನಿಂದ ಹೊರ ಬಂದ ನಂತರ ನ್ಯಾಯಾಲಯಕ್ಕೆ ಆರೋಪಿ ಹಾಜರಾಗಿರಲಿಲ್ಲ. ಶ್ಯೂರಿಟಿದಾರ ಎಚ್.ಎಸ್ ಬೈರೇಗೌಡ ಅವರನ್ನು ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದಾಗ ತಾನು ಶ್ಯೂರಿಟಿ ನೀಡಲಿಲ್ಲವೆಂದು ತಿಳಿಸಿದ್ದರು. ಆ ವೇಳೆ ಬೈರೇಗೌಡ ಅವರ ಜಮೀನಿನ ಹೆಸರಿನಲ್ಲಿ ನಕಲಿ ದಾಖಲೆ ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಕೊತ್ತನೂರು ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.