ಕೆಂಪು ಗ್ರಹ ಮಂಗಳನ ಮರಳು ನೀಲಿ ಬಣ್ಣ: ಕ್ಯೂರಿಯಾಸಿಟಿ ಇದೇನಣ್ಣ?

 |  First Published Jun 27, 2018, 2:44 PM IST

ಮಂಗಳ ಗ್ರಹದ ಮೇಲೆ ನೀಲಿ ಮರಳಿನ ದಿಬ್ಬಗಳು

ಕ್ಯೂರಿಯಾಸಿಟಿ ಕ್ಯಾಮರಾದಲ್ಲಿ ಸೆರೆ

ಏನಿದು ನೀಲಿ ಬಣ್ಣದ ಮರಳಿನ ದಿಬ್ಬದ ರಹಸ್ಯ?

ಕಂದು ಬಣ್ಣದ ಮರಳಿನ ದಿಬ್ಬ ನೀಲಿ ಬಣ್ಣಕ್ಕೆ ತಿರುಗಿದ್ದೇಗೆ?


ವಾಷಿಂಗ್ಟನ್(ಜೂ.27): ಮಂಗಳ ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಕ್ಯೂರಿಯಾಸಿಟಿ ರೋವರ್ ಗೆ ಕ್ಯೂರಿಯಾಸಿಟಿ ಅಂತಾ ಅದ್ಯಾರು ಹೆಸರಿಟ್ಟರೋ ಗೊತ್ತಿಲ್ಲ. ಹೆಸರಿಗೆ ತಕ್ಕಂತೆ ಕ್ಯೂರಿಯಾಸಿಟಿ ರೋವರ್ ದಿನಕ್ಕೊಂದು ಕುತೂಹಲಕರ ಮಾಹಿತಿಯನ್ನು ಭೂಮಿಗೆ ರವಾನಿಸುತ್ತಲೇ ಇದೆ.

ಮಂಗಳವೊಂದು ನಿರ್ಜೀವ ಗ್ರಹ ಅಲ್ಲಿ ಇಣುಕಿ ನೋಡುವಂತದ್ದೇನೂ ಇಲ್ಲ ಎಂದೇ ಇದುವರೆಗೂ ನಂಬಲಾಗಿತ್ತು. ಆದರೆ ಒಂದರ ಹಿಂದೊಂದರಂತೆ ನಾಸಾದ ಗಗನನೌಕೆಗಳು ಮಂಗಳನ ಅಂಗಳದ ಮೇಲೆ ಕಾಲಿಟ್ಟ ಮೇಲೆ, ಆ ಕೆಂಪು ಗ್ರಹದ ರಹಸ್ಯ ಬಿಚ್ಚಿಕೊಳ್ಳುತ್ತಾ ಹೋಯಿತು.

Tap to resize

Latest Videos

ಮಂಗಳನಲ್ಲಿ ಈ ಹಿಂದೆ ಸಮುದ್ರವಿದ್ದ ಸಾಧ್ಯತೆ, ಜೀವಿಗಳ ಆವಾಸಕ್ಕೆ ಬೇಕಾದ ಅಗತ್ಯ ವಾತಾವರಣ ನಿರ್ಮಾಣ ಸಾಧ್ಯತೆ ಹೀಗೆ ಹತ್ತು ಹಲವು ಕುತೂಹಲಗಳು ಆ ಗ್ರಹದ ಕುರಿತಾದ ಮಾನವನ ಜ್ಞಾನವನ್ನು ವೃದ್ಧಿಸುತ್ತಲೇ ಹೋಯಿತು.

ಅದರಂತೆ ನಾಸಾದ ಕ್ಯೂರಿಯಾಸಿಟಿ ರೋವರ್ ಮಂಗಳ ಗ್ರಹದ ಕುರಿತು ಅನೇಕ ಕುತೂಹಲಕಾರಿ ಮಾಹಿತಿಗಳನ್ನು ಸಂಗ್ರಹಿಸಿದೆ. ಕ್ಯೂರಿಯಾಸಿಟಿಯ ಹೊಸ ಅನ್ವೇಷಣೆ ಪ್ರಕಾರ ಮಂಗಳ ಗ್ರಹದಲ್ಲಿ ಬೃಹತ್ ಮರಭೂಮಿ ಇದ್ದು, ನೀಲಿ ಬಣ್ಣದ ಮರಳಿನ ದಿಬ್ಬಗಳು ಕ್ಯೂರಿಯಾಸಿಟಿ ಕ್ಯಾಮರಾಗೆ ಸೆರೆಯಾಗಿವೆ.

ಅರೆ! ಕೆಂಪು ಬಣ್ಣದ ಗ್ರಹದಲ್ಲಿ ನೀಲಿ ಬಣ್ಣದ ಮರಳು ಇರಲು ಹೇಗೆ ಸಾಧ್ಯ ಅಂತೀರಾ?. ಅಸಲಿಗೆ ಈ ಮರಳಿನ ದಿಬ್ಬಗಳು ನೀಲಿ ಬಣ್ಣದಲ್ಲಿರದೆ ಕಂದು ಬಣ್ಣದಲ್ಲೇ ಇವೆ. ಆದರೆ ಕ್ಯಾಮರಾದ ಲೆನ್ಸ್ ಗಳಲ್ಲಿ ಈ ದಿಬ್ಬಗಳು ನೀಲಿ ಬಣ್ಣದಲ್ಲಿರುವಂತೆ ಕಾಣುತ್ತಿವೆ ಎಂದು ನಾಸಾ ಸ್ಪಷ್ಟಪಡಿಸಿದೆ.

ಈ ಮರಳಿನ ದಿಬ್ಬಗಳ ಫೋಟೋಗಳನ್ನು ಒಟ್ಟಾಗಿಸಿ ನೋಡಿದಾಗ ಅದು ನೀಲಿ ಬಣ್ಣದಲ್ಲಿರುವಂತೆ ಕಾಣುತ್ತಿದೆ. ಆದರೆ ಈ ದಿಬ್ಬಗಳು ಕಂದು ಬಣ್ಣದಿಂದ ಕೂಡಿದ್ದು, ಭೂಮಿಯ ಮೇಲಿರುವ ಮರಭೂಮಿಯಂತೆಯೇ ಇದೆ ಎಂದು ನಾಸಾ ಸ್ಪಷ್ಟಪಡಿಸಿದೆ. ಸದ್ಯ ಈ ಮರಳಿನ ದಿಬ್ಬಗಳ ಕುರಿತು ಮಾಹಿತಿ ರವಾನಿಸಿರುವ ಕ್ಯೂರಿಯಾಸಿಟಿ, ಮತ್ತೆ ಇನ್ನೇನು ಕುತೂಹಲಕಾರಿ ಮಾಹತಿ ರವಾನಿಸಲಿದೆ ಕಾದು ನೋಡಬೇಕಿದೆ.

click me!