ಮೆಜೆಸ್ಟಿಕ್‌ನಲ್ಲಿ ಮೆಟ್ರೋ ಬದಲಿಸೋದು ಹೇಗೆ?

Published : Jun 15, 2017, 10:38 AM ISTUpdated : Apr 11, 2018, 12:40 PM IST
ಮೆಜೆಸ್ಟಿಕ್‌ನಲ್ಲಿ ಮೆಟ್ರೋ ಬದಲಿಸೋದು ಹೇಗೆ?

ಸಾರಾಂಶ

ಕೇವಲ 20ರಿಂದ 30 ಸೆಕೆಂಡ್‌ಗಳಲ್ಲಿ ಪ್ರಯಾಣಿಕರು ಮಾರ್ಗ ಬದಲಾವಣೆ ಮಾಡಲು ಅವಕಾಶ ಟಿಕೆಟ್‌ಗಳನ್ನು ಹಸಿರು-ನೇರಳೆ ಮಾರ್ಗದ ಯಾವುದೇ ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೂ ಖರೀದಿಸಬಹುದು ಮಾರ್ಗ ಬದಲಾವಣೆ ವೇಳೆ ಬೇರೆ ಮಾರ್ಗದ ರೈಲು ಹತ್ತಿದರೂ ದಂಡ ಹಾಕಲ್ಲ ದಾರಿ ತಪ್ಪಿದವರು ವಾಪಸ್‌ ಬಂದು ತಲುಬೇಕಾದ ಸ್ಥಳಕ್ಕೆ ಪ್ರಯಾಣಿಸಬಹುದು

ಬೆಂಗಳೂರು: ಬೆಂಗಳೂರಿನ ಪೂರ್ವದ ಬೈಯ್ಯಪ್ಪನಹಳ್ಳಿ ಮತ್ತು ಪಶ್ಚಿಮದ ನಾಯಂಡಹಳ್ಳಿ (ಮೈಸೂರು ರಸ್ತೆ) ನಡುವೆ ಮೆಟ್ರೋ ರೈಲು ಈಗಾಗಲೇ ಸಂಚರಿಸುತ್ತಿದ್ದು ಇದೀಗ ದಕ್ಷಿಣದ ಯಲಚೇನಹಳ್ಳಿಯಿಂದ ಉತ್ತರದ ನಾಗಸಂದ್ರದವರೆಗೂ ಮೆಟ್ರೋ ಸಂಚರಿಸಲಿದೆ. ಈ ಎರಡೂ ಮಾರ್ಗಗಳ ಮೂಲಕ ನಗರದ ವಿವಿಧೆಡೆ ಪ್ರಯಾಣಿಸಲು ಅವಕಾಶವಾಗುವಂತೆ ಕೆಂಪೇಗೌಡ ನಿಲ್ದಾಣವನ್ನು(ಮೆಜೆಸ್ಟಿಕ್‌) ವಿನ್ಯಾಸಗೊಳಿಸಲಾಗಿದೆ. ಈ ನಿಲ್ದಾಣದಲ್ಲಿ ಪ್ರಯಾಣಿಕರು ನೇರಳೆ ಮತ್ತು ಹಸಿರು ಮಾರ್ಗಗಳನ್ನು ಬದಲಾಯಿಸಿ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಯಾವ ಭಾಗಕ್ಕೂ ಪ್ರಯಾಣಿಸಬಹುದಾಗಿದೆ.

ರಸ್ತೆ ಮಟ್ಟದಿಂದ ಸುಮಾರು 30 ಅಡಿ ಆಳದಲ್ಲಿರುವ ಮೆಟ್ರೋ ನಿಲ್ದಾಣವನ್ನು ಇಂಟರ್‌ಚೇಂಜ್‌ ನಿಲ್ದಾಣವೆಂದು ಹೆಸರಿಸಲಾಗಿದ್ದು ಪ್ರತಿದಿನ ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ನಿಭಾಯಿಸುವಂತೆ ನಿರ್ಮಾಣ ಮಾಡಲಾಗಿದೆ. ಈ ಬೃಹತ್‌ ನಿಲ್ದಾಣದಲ್ಲಿ ಪ್ರಯಾಣಿಕರು ಯಾವ ರೀತಿಯಲ್ಲಿ ರೈಲುಗಳನ್ನು ಬದಲಾಯಿಸಬಹುದು. ಬೈಯ್ಯಪ್ಪನ​ಹಳ್ಳಿ​ಯಿಂದ ಬಂದ ಪ್ರಯಾಣಿಕರು ಕೆಂಪೇಗೌಡ ನಿಲ್ದಾಣದಲ್ಲಿಳಿದು ದಕ್ಷಿಣದ ಯಲಚೇನಹಳ್ಳಿಗೋ ಇಲ್ಲಾ ಉತ್ತರದ ನಾಗಸಂದ್ರಕ್ಕೋ ಇತ್ತ ಮೈಸೂರು ರಸ್ತೆಯಿಂದ ಬರುವ ಪ್ರಯಾಣಿಕರು ನ್ಯಾಷನಲ್‌ ಕಾಲೇಜು ಅಥವಾ ಕೆ.ಆರ್‌.ಮಾರುಕಟ್ಟೆಕಡೆಗೆ ಹೇಗೆ ಸಂಚರಿಸುವುದು ಎಂಬುದು ಮೊದಲ ದಿನಗಳಲ್ಲಿ ಗೊಂದಲ ಉಂಟುಮಾಡಬಹುದು. ಇದಕ್ಕಾಗಿಯೇ ಕೆಂಪೇಗೌಡ ನಿಲ್ದಾಣ ಬಳಕೆಯ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಆರು ಮಹಾದ್ವಾರಗಳು: ಕೆಂಪೇಗೌಡ ಮೆಟ್ರೋ ನಿಲ್ದಾಣಕ್ಕೆ ಒಟ್ಟು ಆರು ಮಹಾದ್ವಾರಗಳ ಮೂಲಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಕಡೆಯಿಂದ(ಪಶ್ಚಿಮ), ಉಪ್ಪಾರಪೇಟೆ ಪೊಲೀಸ ಠಾಣೆ-ಚಿಕ್ಕಲಾಲ್‌ಬಾಗ್‌ ಕಡೆಯಿಂದ (ದಕ್ಷಿಣ), ಸಂಗಂ ಚಿತ್ರಮಂದಿರ ಕಡೆಯಿಂದ(ಪೂರ್ವ) ಹಾಗೂ ಮೆಜೆಸ್ಟಿಕ್‌ ಬಸ್‌ನಿಲ್ದಾಣ ಕಡೆಯಿಂದ (ಉತ್ತರ) ಮತ್ತೊಂದು ಮಹಾದ್ವಾರಗಳಿವೆ. ಪ್ರಸ್ತುತ ರೈಲ್ವೇ ನಿಲ್ದಾಣ ಮತ್ತು ಚಿಕ್ಕಲಾಲ್‌ಬಾಗ್‌ ಕಡೆಯಿಂದ ಪ್ರವೇಶಾವಕಾಶವಿದ್ದು ಉಳಿದ ಕಡೆಗಳಲ್ಲಿ ಕಾಮಗಾರಿ ನಡೆದಿದೆ. ಈ ಆರೂ ಮಹಾದ್ವಾರಗಳು ಬೃಹದಾಕಾರದ ಪ್ರಾಂಗಣಕ್ಕೆ ತೆರೆದುಕೊಳ್ಳಲಿದ್ದು ಪ್ರಯಾಣಿಕರು ಯಾವ್ಯಾವ ಕಡೆಗೆ ಪ್ರಯಾಣಿಸಬೇಕೆಂಬುದನ್ನು ಇಲ್ಲೇ ನಿರ್ಧರಿಸಬೇಕಿದೆ.
ಬೈಯ್ಯಪ್ಪನಹಳ್ಳಿ-ನಾಯಂಡಹಳ್ಳಿ: ಪೂರ್ವದ ಬೈಯ್ಯಪ್ಪನಹಳ್ಳಿ ಆಗಲೀ ಪಶ್ಚಿಮದ ನಾಯಂಡಹಳ್ಳಿ ಕಡೆಗಾಗಲೀ ನೇರಳೆ ಮಾರ್ಗದ ಪ್ರದೇಶಗಳಿಗೆ ಪ್ರಯಾಣಿಸಬೇಕಾದ ಪ್ರಯಾಣಿಕರು ನೆಲದಾಳದ 1ನೇ ಹಂತದಲ್ಲಿರುವ ಪ್ಲಾಟ್‌ಫಾರಂ 1 ಅಥವಾ 2ಕ್ಕೆ ಮೆಟ್ಟಿಲುಗಳು ಅಥವಾ ಎಸ್ಕಲೇಟರ್‌ ಬಳಸಿ ಇಳಿಯಬೇಕು. ಪ್ಲಾಟ್‌ಫಾರಂ 1 ಬೈಯ್ಯಪ್ಪನಹಳ್ಳಿ ಕಡೆಗೂ ಪ್ಲಾಟ್‌ಫಾರಂ 2 ಮೈಸೂರು ರಸ್ತೆ ಕಡೆಗೂ ರೈಲುಗಳು ಸಂಚರಿಸಲಿದೆ.

ಹಸಿರು ಮಾರ್ಗದಲ್ಲಿ ಉತ್ತರದ ನಾಗಸಂದದ ಕಡೆಗಾಗಲೀ ಅಥವಾ ದಕ್ಷಿಣದ ಯಲಚೇನಹಳ್ಳಿ ಕಡೆಗಾಗಲೀ ಪ್ರಯಾಣಿಸಬೇಕಾದವರು ಮತ್ತೊಂದು ಹಂತ ಇಳಿದು ಪ್ಲಾಟ್‌ಫಾರಂ 3 ಮತ್ತು ನಾಲ್ಕರಲ್ಲಿ ಒಂದನ್ನು ಆಯ್ಕೆ ಮಾಡಬೇಕಿದೆ. ಪ್ಲಾಟ್‌ಫಾರಂ 3ರಿಂದ ನಾಗಸಂದ್ರ ಕಡೆಗೂ ಪ್ಲಾಟ್‌ಫಾರಂ 4ರಿಂದ ಯಲಚೇನಹಳ್ಳಿ ಕಡೆಗೂ ರೈಲುಗಳು ಚಲಿಸಲಿವೆ.

ಮಾರ್ಗ ಬದಲಾವಣೆ ಹೇಗೆ?: ಬೆಂಗಳೂರಿನ ಉತ್ತರದಿಂದ ಪೂರ್ವ ಭಾಗದ ಕಡೆ, ಪೂರ್ವ ಭಾಗದಿಂದ ದಕ್ಷಿಣ ಭಾಗದ ಕಡೆಗೆ ಪ್ರಯಾಣಿಸಬೇಕಾದವರು ನೇರಳೆ ಮತ್ತು ಹಸಿರು ಮಾರ್ಗವನ್ನು ಬದಲಾಯಿಸಬೇಕಿದೆ. ಹಸಿರು ಮಾರ್ಗದ ನಾಗಸಂದ್ರ ಅಥವಾ ಯಲಚೇನಹಳ್ಳಿ ಕಡೆಯಿಂದ ಬರುವವ ಬೈಯ್ಯಪ್ಪನಹಳ್ಳಿ ಅಥವಾ ್ಳ ಕಡೆ ಪ್ರಯಾಣಿಸುವವರು 3ನೇ ಹಂತದಿಂದ ಮೊದಲನೇ ಹಂತದಲ್ಲಿರುವ 1 ಅಥವಾ 2ನೇ ಪ್ಲಾಟ್‌ಫಾರಂಗೆ ಬಂದು ರೈಲು ಹತ್ತಬೇಕಿದೆ. ಬೈಯ್ಯಪ್ಪನಹಳ್ಳಿ ಮತ್ತು ನಾಯಂಡಹಳ್ಳಿ ಕಡೆಗಳಿಂದ ಬರುವವರು ಯಲಚೇನಹಳ್ಳಿ ಅಥವಾ ನಾಗಸಂದ್ರದ ಕಡೆಗೆ ಪ್ರಯಾಣಿಸಬೇಕಿದ್ದರೆ ಮೂರನೇ ಹಂತಕ್ಕೆ ಇಳಿದು ಪ್ರಯಾಣ ಮುಂದುವರಿಸಬಹುದಾಗಿದೆ. ಎಲ್ಲ ಕಡೆಗಳಲ್ಲೂ ಬೃಹತ್‌ ಮಾರ್ಗಸೂಚಿ ಫಲಕಗಳನ್ನು ಅಳವಡಿಸಲಾಗಿದ್ದು ಮೊದಲ ದಿನಗಳಲ್ಲಿ ಸಾಕಷ್ಟುಗೈಡ್‌ಗಳನ್ನು ಮಾರ್ಗದರ್ಶನಕ್ಕಾಗಿ ನಿಯೋಜಿಸಲಾಗುತ್ತಿದೆ. ಒಂದೊಮ್ಮೆ ಪ್ರಯಾಣಿಕರು ಗೊಂದಲಕ್ಕೊಳಗಾಗಿ ಬೇರೆ ದಿಕ್ಕಿನಲ್ಲಿ ಪ್ರಯಾಣಿಸಿದರೂ ದಂಡ ವಿಧಿಸಲಾಗುವುದಿಲ್ಲ ಎಂದು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲ ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ