
ನವದೆಹಲಿ: ಸ್ವದೇಶಿ ನಿರ್ಮಿತ ಪ್ರಯಾಣಿಕ ವಿಮಾನ ಹೊಂದಬೇಕೆಂಬ ಭಾರತದ ಹಲವು ದಶಕಗಳ ಕನಸು ಕೊನೆಗೂ ಈಡೇರುವ ಸಮಯ ಸನ್ನಿಹಿತವಾಗಿದೆ. 19 ವರ್ಷಗಳ ಹಿಂದೆ ಚಾಲನೆ ಪಡೆದು, ನಂತರ ಹಲವು ಅಡೆತಡೆಗಳನ್ನು ಎದುರಿಸಿದ್ದ ಸ್ವದೇಶಿ ನಿರ್ಮಿತ ಸರಸ್ ಇತ್ತೀಚೆಗೆ ಎರಡು ಯಶಸ್ವಿ ಹಾರಾಟ ನಡೆಸುವ ಮೂಲಕ, ಭಾರತೀಯ ಕನಸನ್ನು ನನಸು ಮಾಡುವತ್ತ ದೃಢ ಹೆಜ್ಜೆ ಇಟ್ಟಿದೆ.
19 ಪ್ರಯಾಣಿಕರ ಹೊತ್ತೊಯ್ಯುವ ಸಾಮರ್ಥ್ಯದ ಈ ವಿಮಾನ, ‘ಹವಾಯಿ ಚಪ್ಪಲಿ ಹಾಕುವವರೂ ವಿಮಾನದಲ್ಲಿ ಹಾರಾಡುವಂತಾಗಬೇಕು’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಲಾಷೆಯನ್ನು ಸಾಕಾರಗೊಳಿಸಲಿದೆ ಎಂದೇ ಬಣ್ಣಿಸಲಾಗಿದೆ.
ಹಾರಾಟ ಯಶಸ್ವಿ: 1999ರಲ್ಲಿ ಬೆಂಗಳೂರಿನ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿಸ್ (ಎನ್‌ಎಎಲ್) ಸ್ವದೇಶಿ ಸರಸ್ ವಿಮಾನದ ವಿನ್ಯಾಸ ಮಾಡಿ ಅದರ ಮಾದರಿ ಸಿದ್ಧಪಡಿಸಲು ಆರಂಭಿಸಿತ್ತು. ಆದರೆ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿತ್ತು. ಮೊದಲಿಗೆ ಯೋಜನೆಯಲ್ಲಿ ಭಾಗಿಯಾಗಿದ್ದ ರಷ್ಯಾ ಹಿಂದೆ ಸರಿಯಿತು.
ನಂತರ ಪೋಖ್ರಾನ್ ಪರಮಾಣು ಪರೀಕ್ಷೆ ವಿಷಯ ಮುಂದಿಟ್ಟುಕೊಂಡು ಅಮೆರಿಕ ಸರ್ಕಾರ, ಭಾರತದ ಮೇಲೆ ನಿರ್ಬಂಧ ಹೇರಿತು. ಪರಿಣಾಮ ಸರಸ್ ವಿಮಾನದ ಮಾದರಿ ತಯಾರಿಗೆ ಬಹುದೊಡ್ಡ ಹೊಡೆತ ಬಿತ್ತು. ಇದರ ಹೊರತಾಗಿಯೂ ಭಾರತೀಯ ವಿಜ್ಞಾನಿಗಳು ಸ್ವದೇಶಿ ವಿಮಾನ ರೂಪಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ 2009ರಲ್ಲಿ ಬೆಂಗಳೂರಿನ ಬಿಡದಿ ಬಳಿ, ವಿಮಾನ ಪ್ರಾಯೋಗಿಕ ಹಾರಾಟದ ವೇಳೆ ಪತನಗೊಂಡು ಇಬ್ಬರು ಪೈಲಟ್‌ಗಳು ಸೇರಿ ಮೂವರು ಸಾವನ್ನಪ್ಪಿದ್ದರು. ಹೀಗಾಗಿ ಇಡೀ ಯೋಜನೆ ಬಂದ್ ಆಗುವ ಸ್ಥಿತಿ ತಲುಪಿತ್ತು. ಜೊತೆಗೆ 2016ರಲ್ಲಿ ಯೋಜನೆಯನ್ನು ಸರ್ಕಾರ ಪೂರ್ಣ ಪ್ರಮಾಣದಲ್ಲಿ ಕೈಬಿಟ್ಟಿದೆ ಎಂದೂ ವರದಿಯಾಗಿತ್ತು.
ಆದರೆ 2017ರಲ್ಲಿ ಸರ್ಕಾರ ಮತ್ತೆ ಯೋಜನೆಗೆ ಮರುಚಾಲನೆ ನೀಡಿದ ಪರಿಣಾಮ, ಹಿಂದಿನ ವೈಫಲ್ಯಗಳನ್ನು ಮೆಟ್ಟಿನಿಂತು ವಿಜ್ಞಾನಿಗಳು ಹೊಸ ತಂತ್ರಜ್ಞಾನದೊಂದಿಗೆ ವಿಮಾನವನ್ನು ರೂಪಿಸಿದ್ದಾರೆ. ಈ ವಿಮಾನ ಇತ್ತೀಚೆಗೆ 2 ಯಶಸ್ವಿ ಹಾರಾಟ ನಡೆಸುವ ಮೂಲಕ ಭಾರತೀಯರ ಕನಸು ನನಸು ಮಾಡುವಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ. ಭಾರತೀಯ ವಾಯು ಪಡೆಯ ಪೈಲಟ್‌ಗಳು ವಿಮಾನವನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.
7,000 ಕೆ.ಜಿ. ತೂಕದ ಸರಸ್ ವಿಮಾನದ ಇನ್ನಷ್ಟುಯಶಸ್ವಿ ಹಾರಾಟ ನಡೆಸಿದ ಬಳಿಕ, 2022ರಲ್ಲಿ ಉತ್ಪಾದನೆ ಹಂತಕ್ಕೆ ಸಿದ್ಧವಾಗಲಿದೆ ಎನ್ನಲಾಗಿದೆ. ಸರಸ್ ವಿಮಾನ ತಯಾರಿಸಲು 45 ಕೋಟಿ ರು. ವೆಚ್ಚ ತಗುಲುವ ನಿರೀಕ್ಷೆ ಇದೆ. 60 ಕೋಟಿ ರು. ವೆಚ್ಚದ ಡಾರ್ನಿಯರ್ ವಿಮಾನಕ್ಕೆ ಹೋಲಿಸಿದರೆ ಸರಸ್ ವಿಮಾನಕ್ಕೆ ತಗುಲುವ ವೆಚ್ಚ ಕಡಿಮೆ.
ಸರಸ್ ವಿಶೇಷತೆ ಏನು?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೀಚ್ಕಾ್ರಫ್ಟ್, ಡಾರ್ನಿಯರ್, ಎಂಬ್ರಾಯರ್ ಮತ್ತಿತರ ವಿಮಾನಗಳು 1970ರ ತಂತ್ರಜ್ಞಾನವನ್ನು ಒಳಗೊಂಡಿವೆ. ಅವು ಹೆಚ್ಚು ಇಂಧನ ಬಳಸುತ್ತವೆ. ಅಲ್ಲದೇ ಕಡಿಮೆ ವೇಗ ಹೊಂದಿವೆ. ಹೆಚ್ಚಿನ ನಿರ್ವಹಣಾ ವೆಚ್ಚ ಮತ್ತು ಉಷ್ಣ ಮತ್ತು ಎತ್ತರದ ವಾಯುನೆಲೆಯಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿಲ್ಲ. ಆದರೆ, ಇವುಗಳಿಗೆ ಹೋಲಿಸಿದರೆ ಸರಸ್ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ ಎಂದು ಎನ್‌ಎಎಲ್ ಮೂಲಗಳು ತಿಳಿಸಿವೆ.
ಸರಸ್ ಎಂಕೆ-2 ವಿಮಾನ ಉಡಾನ್ ಯೋಜನೆ ಅಡಿಯಲ್ಲಿ ಪ್ರಯಾಣಿಕರ ಸಂಪರ್ಕಕ್ಕೆ ತಕ್ಕನಾಗಿದೆ. ಏರ್ ಟ್ಯಾಕ್ಸಿ, ವೈಮಾನಿಕ ಶೋಧ, ವಿಪತ್ತು ನಿರ್ವಹಣೆ, ಗಡಿ ಕಾಯುವಿಕೆ, ಕರಾವಳಿ ಕಣ್ಗಾವಲು, ಏರ್ ಆ್ಯಂಬುಲೆನ್ಸ್ ಮತ್ತು ಇತರ ಸಮುದಾಯ ಸೇವೆಗಳಿಗೂ ಸರಸ್ ವಿಮಾನ ಬಳಕೆಯಾಗಲಿದೆ.
ಭಾರತ ತನ್ನ ಲಘು ಸಾಗಣೆ ವಿಮಾನದ ಉತ್ಪಾದನೆಯನ್ನು ಆರಂಭಿಸಿದ ಬಳಿಕ ರಷ್ಯಾ, ಚೀನಾ, ಅಮೆರಿಕ, ಇಂಡೋನೇಷ್ಯಾ ಮತ್ತು ಪೋಲೆಂಡ್ ದೇಶದಗಳು ಮುಂದಿನ ತಲೆಮಾರಿನ 19 ಆಸನದ ವಿಮಾನ ತಯಾರಿಕೆಗೆ ಚಾಲನೆ ನೀಡಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.