
ನವದೆಹಲಿ(ಡಿ.4): ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ ಸಬ್ಸಿಡಿಯನ್ನು ಸ್ವಯಂ ಪ್ರೇರಿತವಾಗಿ ತ್ಯಜಿಸುವ `ಗಿವ್ ಇಟ್ ಅಪ್' ಅಭಿಯಾನ ಯಶಸ್ವಿಯಾಗಿದ್ದಾಯ್ತು. ಇದರಿಂದ ಕೇಂದ್ರ ಸರ್ಕಾರಕ್ಕೆ ನೂರಾರು ಕೋಟಿ ರು. ಉಳಿತಾಯವಾಗಿದ್ದೂ ಆಯಿತು. ಇದೀಗ ಅದೇ ಮಾದರಿಯಲ್ಲಿ ರೈಲ್ವೆ ಇಲಾಖೆ ಆರಂಭಿಸಿದ್ದ ಯೋಜನೆ ಕೂಡ ಬಲ ನೀಡಲು ಆರಂಭಿಸಿದೆ. ರೈಲ್ವೆ ಕರೆಗೆ ಓಗೊಟ್ಟು ಕೇವಲ ಮೂರು ತಿಂಗಳ ಅವಧಿಯಲ್ಲಿ 9 ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರು ಟಿಕೆಟ್ ಸಬ್ಸಿಡಿಯನ್ನು ತ್ಯಜಿಸಿದ್ದರಿಂದ, ಇಲಾಖೆಗೆ ಬರೋಬ್ಬರಿ 40 ಕೋಟಿ ರು. ಉಳಿತಾಯವಾಗಿದೆ.
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರೈಲು ಪ್ರಯಾಣದಲ್ಲಿ ರೈಲ್ವೆ ಇಲಾಖೆ ರಿಯಾಯಿತಿ ನೀಡುತ್ತದೆ. ಈ ಒಂದು ಸಬ್ಸಿಡಿಯಿಂದಲೇ ಆಗುತ್ತಿರುವ ಹೊರೆ ವಾರ್ಷಿಕ 1300 ಕೋಟಿ ರುಪಾಯಿ. ಅದನ್ನು ತಗ್ಗಿಸಿಕೊಳ್ಳಲು ಇಲಾಖೆ `ಗಿವ್ ಅಪ್' ಎಂಬ ಯೋಜನೆಯನ್ನು ಕಳೆದ ವರ್ಷ ಆರಂಭಿಸಿತ್ತು. ಅದರಡಿ ಹಿರಿಯರು ಟಿಕೆಟ್ ಮೇಲಿನ ರಿಯಾಯಿತಿ ಬಿಟ್ಟುಕೊಡಬಹುದಾಗಿತ್ತು. ಈ ವರ್ಷದಿಂದ ಟಿಕೆಟ್ ಮೇಲಿನ ರಿಯಾಯಿತಿಯಲ್ಲಿ ಶೇ.50ರಷ್ಟನ್ನು ಬಿಟ್ಟುಕೊಡುವ ಅವಕಾಶ ನೀಡಲಾಗಿದೆ.
ಈ ವರ್ಷದ ಜು.22ರಿಂದ ಅ.22ರವರೆಗೆ 2.16 ಲಕ್ಷ ಪುರುಷ ಹಾಗೂ 2.67 ಲಕ್ಷ ಮಹಿಳಾ ಹಿರಿಯ ನಾಗರಿಕರು ಟಿಕೆಟ್ ಮೇಲಿನ ಪೂರ್ತಿ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ. 2.51 ಲಕ್ಷ ಪುರುಷ ಹಾಗೂ 2.05 ಲಕ್ಷ ಮಹಿಳಾ ಹಿರಿಯ ನಾಗರಿಕರು ಶೇ.50ರಷ್ಟು ಸಬ್ಸಿಡಿ ತ್ಯಜಿಸಿದ್ದಾರೆ. ಇದರಿಂದಾಗಿ ಈ ವರ್ಷ ಮೂರು ತಿಂಗಳ ಅವಧಿಯಲ್ಲಿ ಸಬ್ಸಿಡಿ ತ್ಯಜಿಸಿದ ಹಿರಿಯ ನಾಗರಿಕರ ಸಂಖ್ಯೆ 9.39 ಲಕ್ಷಕ್ಕೇರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4.68 ಲಕ್ಷ ಮಂದಿ ಸಬ್ಸಿಡಿ ಬಿಟ್ಟುಕೊಟ್ಟಿದ್ದರು. ಹೀಗಾಗಿ ಒಂದೇ ವರ್ಷದಲ್ಲಿ ಸಬ್ಸಿಡಿ ತಿರಸ್ಕರಿಸಿದ ಹಿರಿಯರ ಸಂಖ್ಯೆ ಹೆಚ್ಚೂ ಕಡಿಮೆ ಡಬಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.