ರಾಜ್ಯದಲ್ಲಿ ವರುಣನ ಆರ್ಭಟ: 8 ಬಲಿ

First Published May 24, 2018, 7:57 AM IST
Highlights

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬುಧವಾರವೂ ವರು​ಣನ ಆರ್ಭಟ ಮುಂದು​ವ​ರಿ​ದಿ​ದ್ದು, ಮಳೆ ಸಂಬಂಧಿ ಅನಾ​ಹು​ತಕ್ಕೆ ಒಟ್ಟು ಎಂಟು ಮಂದಿ ಬಲಿ​ಯಾ​ಗಿ​ದ್ದಾ​ರೆ.

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬುಧವಾರವೂ ವರು​ಣನ ಆರ್ಭಟ ಮುಂದು​ವ​ರಿ​ದಿ​ದ್ದು, ಮಳೆ ಸಂಬಂಧಿ ಅನಾ​ಹು​ತಕ್ಕೆ ಒಟ್ಟು ಎಂಟು ಮಂದಿ ಬಲಿ​ಯಾ​ಗಿ​ದ್ದಾ​ರೆ. ಬಳ್ಳಾ​ರಿ​, ಕೊಪ್ಪ​ಳ​ದಲ್ಲಿ ತಲಾ ಇಬ್ಬರು ಹಾಗೂ ಹಾವೇರಿ, ರಾಯಚೂರು, ತುಮಕೂರು ಜಿಲ್ಲೆ​ಯಲ್ಲಿ ತಲಾ ಒಬ್ಬರು ಸೇರಿ ಸಿಡಿ​ಲ​ಬ್ಬ​ರಕ್ಕೆ ಏಳು ಮಂದಿ ಬಲಿ​ಯಾ​ಗಿ​ದ್ದಾ​ರೆ. ಇನ್ನು ​ಕೋ​ಲಾರ ಜಿಲ್ಲೆ​ಯಲ್ಲಿ ವಿದ್ಯುತ್‌ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹೊಸಹಳ್ಳಿ ಗ್ರಾಮದ ಶಿವಬಸಪ್ಪ ಕುರುಬರ(32), ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಗುತ್ತೂರು ಗ್ರಾಮದ ವಿರುಪಾಕ್ಷಪ್ಪ ಮಾಸರ(25) ಕರಿಯಮ್ಮ(18), ರಾಯಚೂರು ಜಿಲ್ಲೆಯ ರಮಾ ಕ್ಯಾಂಪಿನ ಶರಣಮ್ಮ ದಾನಗೌಡರ್‌(28), ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಧರ್ಮಸಾಗರದ ಮಂಜಮ್ಮ(35), ಸಂಡೂರು ತಾಲೂಕಿನ ಕುರೇಕೊಪ್ಪ ಗ್ರಾಮದ ಸೋಮಶೇಖರ್‌(25) ಹಾಗೂ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಮರಡಿಪಾಳ್ಯದ ರಾಮಕೃಷ್ಣಪ್ಪ(45) ಸಿಡಿಲಿನಿಂದ ಮೃತಪಟ್ಟಿದ್ದಾರೆ. ಇದೇ ವೇಳೆ ಸಿಡಿ​ಲಿಗೆ ಇಬ್ಬರು ಗಾಯ​ಗೊಂಡಿದ್ದು, 15ಕ್ಕೂ ಹೆಚ್ಚು ಕುರಿ, ಜಾನು​ವಾ​ರು​ಗಳು ಮೃತ​ಪ​ಟ್ಟಿ​ವೆ.

ವಿದ್ಯುತ್‌ ಸ್ಪರ್ಶ: ಕೋಲಾರ ಜಿಲ್ಲೆ ಕೆಜಿಎಫ್‌ನಲ್ಲಿ ಮಂಗ​ಳ​ವಾರ ರಾತ್ರಿ ಸುರಿದ ಗಾಳಿ, ಮಳೆಗೆ ಅಂಗಡಿಯೊಂದರ ಮುಂದೆ ವಿದ್ಯುತ್‌ ತಂತಿ ಕಡಿದು ಬಿದ್ದಿತ್ತು. ಇದು ತಿಳಿ​ಯದೆ ಅಂಗ​ಡಿಯ ಶೆಟರ್‌ ಎಳೆ​ಯಲು ಹೋದ ಕೃಷ್ಣಾರೆಡ್ಡಿ(65) ಸ್ಥಳ​ದಲ್ಲೇ ಮೃತ​ಪ​ಟ್ಟಿ​ದ್ದಾ​ರೆ.

ಕೊಪ್ಪಳ ಜಿಲ್ಲೆ ಗಂಗಾವತಿ ಹಾಗೂ ಹೊಸಪೇಟೆಯಲ್ಲಿ ಮಂಗಳವಾರ ರಾತ್ರಿಯಿಂದಿಚೆಗೆ ಭಾರೀ ಗಾಳಿ ಸಹಿತ ಉತ್ತಮ ಮಳೆ​ಯಾ​ಗಿದೆ. ಭಾರೀ ಗಾಳಿಗೆ ಈ ಭಾಗ​ದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬಾಳೆ ಸೇರಿ ಮತ್ತಿತರ ಬೆಳೆಗಳು ನಾಶವಾಗಿವೆ. ಜೊತೆಗೆ ಹತ್ತಾರು ವಿದ್ಯುತ್‌ ಕಂಬ ಹಾಗೂ ಮರಗಳು ಧರೆಗುರುಳಿವೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ 20 ನಿಮಿಷಗಳ ಕಾಲ ಆಲಿಕಲ್ಲು ಮಳೆ ಸುರಿದರೆ, ಹುಬ್ಬಳ್ಳಿ- ಧಾರವಾಡ, ಹಾವೇರಿಗಳಲ್ಲಿ ಕೆಲ ನಿಮಿಷಗಳ ಕಾಲ ಮಳೆಯಾಗಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಅರ್ಧ ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಜೊತೆಗೆ ಹಲವು ವಿದ್ಯುತ್‌ ತಂತಿಗಳು ಕಡಿದು ಬಿದ್ದು ವಿದ್ಯುತ್‌ ವ್ಯತ್ಯಯವಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ದಾವಣಗೆರೆಯಲ್ಲೂ ಸಂಜೆ ಧಾರಾಕಾರ ಮಳೆ ಸುರಿದಿದೆ. ಬೆಳ​ಗಾ​ವಿಯಲ್ಲಿ ಸಾಧಾ​ರಣ ಮಳೆ ಸುರಿ​ದಿ​ದೆ.

click me!