ಜಿಲ್ಲಾ ಮಟ್ಟದಲ್ಲಿರುವ ಆಂತರಿಕ ಭಿನ್ನಾಭಿಪ್ರಾಯಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಅತ್ಯಂತ ಸಮಸ್ಯಾತ್ಮಕ ಏಳು ಜಿಲ್ಲೆಗಳಲ್ಲಿ (ಕಾಂಗ್ರೆಸ್ ಸಂಘಟನಾ ಜಿಲ್ಲೆಗಳು) ಸಮನ್ವಯ ಸಮಿತಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಆಣತಿ ಮೇರೆಗೆ ಕೆಪಿಸಿಸಿ ರಚಿಸಿದೆ. ಈ ಸಮಿತಿಗಳು ಅಂತರಿಕ ಭಿನ್ನಾಭಿಪ್ರಾಯ ಬಗೆಹರಿಸುವ ಹಾಗೂ ಜಿಲ್ಲೆಯ ಮಟ್ಟದಲ್ಲಿ ಪಕ್ಷ ಸಂಘಟನೆ ಬಲ ಹೆಚ್ಚಿಸುವ ಕುರಿತು ಸ್ಥಳೀಯ ನಾಯಕರೊಂದಿಗೆ ಸಭೆ ಸೇರಿ ಪ್ರತಿ ತಿಂಗಳು ನೇರವಾಗಿ ಹೈಕಮಾಂಡ್‌ಗೆ ವರದಿ ನೀಡಲಿವೆ.
ಬೆಂಗಳೂರು (ಮೇ.25): ಜಿಲ್ಲಾ ಮಟ್ಟದಲ್ಲಿರುವ ಆಂತರಿಕ ಭಿನ್ನಾಭಿಪ್ರಾಯಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಅತ್ಯಂತ ಸಮಸ್ಯಾತ್ಮಕ ಏಳು ಜಿಲ್ಲೆಗಳಲ್ಲಿ (ಕಾಂಗ್ರೆಸ್ ಸಂಘಟನಾ ಜಿಲ್ಲೆಗಳು) ಸಮನ್ವಯ ಸಮಿತಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಆಣತಿ ಮೇರೆಗೆ ಕೆಪಿಸಿಸಿ ರಚಿಸಿದೆ. ಈ ಸಮಿತಿಗಳು ಅಂತರಿಕ ಭಿನ್ನಾಭಿಪ್ರಾಯ ಬಗೆಹರಿಸುವ ಹಾಗೂ ಜಿಲ್ಲೆಯ ಮಟ್ಟದಲ್ಲಿ ಪಕ್ಷ ಸಂಘಟನೆ ಬಲ ಹೆಚ್ಚಿಸುವ ಕುರಿತು ಸ್ಥಳೀಯ ನಾಯಕರೊಂದಿಗೆ ಸಭೆ ಸೇರಿ ಪ್ರತಿ ತಿಂಗಳು ನೇರವಾಗಿ ಹೈಕಮಾಂಡ್‌ಗೆ ವರದಿ ನೀಡಲಿವೆ.
ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ನೇತೃತ್ವದಲ್ಲಿ ಕಳೆದ ನಾಲ್ಕು ದಿನಗಳ ಕಾಲ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಸರಣಿ ಸಭೆ ನಡೆಸಿದ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ೩೫ ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಅಸ್ತಿತ್ವದಲ್ಲಿದ್ದು, ಈ ಪೈಕಿ ಏಳು (ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ಹುಬ್ಬಳ್ಳಿ ಧಾರವಾಡ ನಗರ, ಹುಬ್ಬಳ್ಳಿ ಧಾರವಾಡ ಗ್ರಾಮಾಂತರ, ರಾಯಚೂರು, ಹಾಸನ ಮತ್ತು ತುಮಕೂರು) ಜಿಲ್ಲೆಗಳನ್ನು ಅತ್ಯಂತ ಸಮಸ್ಯಾತ್ಮಕ ಜಿಲ್ಲೆಗಳು ಎಂದು ಗುರುತಿಸಲಾಗಿದೆ.
ಈ ಜಿಲ್ಲೆಗಳಿಗೆ ತಲಾ ಒಂದೊಂದು ಸಮನ್ವಯ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಕೆಪಿಸಿಸಿಯ ಪ್ರತಿನಿಧಿ ಹಾಗೂ ಸ್ಥಳೀಯ ಮುಖಂಡರು ಇರುತ್ತಾರೆ. ಈ ಸಮಿತಿಯು ಭಿನ್ನಾಭಿಪ್ರಾಯ ಬಗೆಹರಿಸುವ ಕಾರ್ಯವನ್ನು ಆದ್ಯತೆ ಮೇರೆಗೆ ಮಾಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಸ್ಥಳೀಯ ಸಮಸ್ಯೆಗಳ ಬಗ್ಗೆ ಸಭೆ ನಡೆಸಿ, ಅದರ ವರದಿಯನ್ನು ನೇರವಾಗಿ ಹೈಕಮಾಂಡ್‌ಗೆ ನೀಡಲಿದೆ.
ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವೇಣುಗೋಪಾಲ್ ಅವರು ಈ ವಿವರ ನೀಡಿದರು.
ನಾಲ್ಕುದಿನಗಳ ಕಾಲ ನಡೆಸಿದ ಸರಣಿ ಸಭೆಯಿಂದ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿದ್ದರೆ, ಜನರು ಕಾಂಗ್ರೆಸ್ ಪರ ನಿಲ್ಲಲಿದ್ದಾರೆ ಎಂಬುದು ಮನದಟ್ಟಾಗಿದೆ. ಹೀಗಾಗಿ ಆಂತರಿಕ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಸಮಸ್ಯಾತ್ಮಕ ಜಿಲ್ಲೆಗಳಲ್ಲಿ ಸಮನ್ವಯ ಸಮಿತಿ ರಚಿಸಲಾಗಿದೆ. ಅಲ್ಲದೆ, ಪಕ್ಷದ ನಾಯಕತ್ವದ ಬಗ್ಗೆ, ಪಕ್ಷದ ನಿರ್ಧಾರಗಳ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ತಾಕೀತು ಮಾಡಲಾಗಿದೆ. ಯಾರಾದರೂ ಈ ಅದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ನೀಡುವ ಎಚ್ಚರಿಕೆ ನೀಡಲಾಗಿದೆ ಎಂದರು.
2018 ರಲ್ಲಿ ನಡೆಯುವ ರಾಜ್ಯದ ಸಾರ್ವತ್ರಿಕ ಚುನಾವಣೆ ರಾಜ್ಯಕ್ಕೆ ಹಾಗೂ ಇಡೀ ದೇಶದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಈ ಚುನಾವಣೆಯಲ್ಲಿ ಪಕ್ಷದ ಗೆಲ್ಲಿಸುವುದು ಮಾತ್ರ ನಮ್ಮ ಮಂತ್ರವಾಗಿರಬೇಕು. ಇದಕ್ಕಾಗಿ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರು ಇನ್ನು ಮುಂದೆ ಜಿಲ್ಲೆಯಲ್ಲೇ ಹೆಚ್ಚಿನ ಕಾಲ ಕಳೆದು ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚಿನ ಗಮನ ನೀಡಬೇಕು ಎಂದು ತಾಕೀತು ಮಾಡಲಾಗಿದೆ ಎಂದರು.
ಸಂಘಟನೆ ದೃಷ್ಟಿಯಿಂದ ಜೂ. ೩೦ರೊಳಗೆ ಬೂತ್ ಮಟ್ಟದ ಹಾಗೂ ಪಂಚಾಯತಿ ಮಟ್ಟದ ಘಟಕಗಳ ಪುನರ್ ರೂಪಿಸಬೇಕು ಎಂದು ಗಡುವು ನೀಡಲಾಗಿದೆ. ಜುಲೈ ಮೊದಲ ವಾರದಲ್ಲಿ ರಾಯಚೂರಿನಲ್ಲಿ ರಾಜ್ಯ ಮಟ್ಟದ ಸಮ್ಮೇಳನವೊಂದನ್ನು ನಡೆಸಲಾಗುವುದು. ಇದಾದ ನಂತರ ಇಂದಿರಾ ಗಾಂಧಿ ಜಯಂತಿ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಬೃಹತ್ ರ‌್ಯಾಲಿಯೊಂದನ್ನು ಸಂಘಟಿಸಲಾಗುವುದು ಎಂದು ಅವರು ತಿಳಸಿದರು.
--------
ಬಿಜೆಪಿಗೆ ಸವಾಲು
ರಾಜ್ಯದ ಕಾಂಗ್ರೆಸ್ ಸರ್ಕಾರ ಶ್ರೀಸಾಮಾನ್ಯ ಸಮಸ್ಯೆಗಳನ್ನು ಬಗೆಹರಿಸುವ ಹಾಗೂ ಆತನ ಅಗತ್ಯಗಳಿಗೆ ಸ್ಪಂದಿಸುವ ಮೂಲಕ ಅತ್ಯುತ್ತಮ ಆಡಳಿತವನ್ನು ನೀಡಿದೆ. ಇದು ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಯಾವುದೇ ರಾಜ್ಯಕ್ಕಿಂತ ಉತ್ತಮ ಸಾಧನೆ ಮಾಡಿದೆ. ಈ ಬಗ್ಗೆ ಬಹಿರಂಗ ಚರ್ಚೆ ನಡೆಸಲು ನಾವು ಸಿದ್ಧ ಎಂದು ವೇಣುಗೋಪಾಲ್ ಅವರು ಬಿಜೆಪಿಗೆ ಸವಾಲು ಹಾಕಿದರು.
ಹಿಂದುಳಿದವರು, ದಲಿತರ ಬಗ್ಗೆ ಹೃದಯದಿಂದ ಕಾಳಜಿ ಹೊಂದಿರಬೇಕು. ಮೆದುಳಿನಿಂದಲ್ಲ. ಚುನಾವಣೆ ಸಮೀಪಿಸುತ್ತಿರುವಂತೆಯೇ ಬಿಜೆಪಿಯು ಈ ವರ್ಗದ ಜನರ ಬಗ್ಗೆ ಕಾಳಜಿ ತೋರುವ ನಾಟಕವಾಡುತ್ತಿದೆ. ಆದರೆ, ಕಾಂಗ್ರೆಸ್ ಸರ್ಕಾರ ಧಮನಿತ ಸಮಾಜಗಳ ಕಾಳಜಿ ಹಾಗೂ ಶ್ರೀಸಾಮಾನ್ಯನಿಗಾಗಿ ರೂಪಿಸಿರುವ ಕಾರ್ಯಕ್ರಮಗಳಿಗೆ ದೇಶದಲ್ಲಿ ಬಿಜೆಪಿಯ ಯಾವ ಸರ್ಕಾರವೂ ಸಾಟಿಯಲ್ಲ. ಇದನ್ನು ಒಪ್ಪುವುದಿಲ್ಲ ಎನ್ನುವುದಾದರೆ ಬಹಿರಂಗ ಚರ್ಚೆಗೂ ನಾವು ಸಿದ್ಧ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.