ಬಿಎಸ್ಸೆನ್ನೆಲ್‌ನ 54 ಸಾವಿರ ನೌಕರರಿಗೆ ಕೊಕ್‌?

Published : Apr 04, 2019, 10:57 AM IST
ಬಿಎಸ್ಸೆನ್ನೆಲ್‌ನ 54 ಸಾವಿರ ನೌಕರರಿಗೆ ಕೊಕ್‌?

ಸಾರಾಂಶ

ಬಿಎಸ್ಸೆನ್ನೆಲ್‌ನ 54 ಸಾವಿರ ನೌಕರರಿಗೆ ಕೊಕ್‌?| ತಜ್ಞರ ಸಮಿತಿ ಪ್ರಸ್ತಾವನೆಗೆ ಬಿಎಸ್ಸೆನ್ನೆಲ್‌ ಮಂಡಳಿ ಓಕೆ| ಚುನಾವಣೆ ನಂತರ ಅಂತಿಮ ನಿರ್ಧಾರ ಸಾಧ್ಯತೆ| ವಿಆರ್‌ಎಸ್‌, ನಿವೃತ್ತಿ ವಯಸ್ಸು ಇಳಿಕೆ ಮೂಲಕ ‘ಕೊಕ್‌’ ಸಾಧ್ಯತೆ| ಸುಮಾರು 13000 ಸಾವಿರ ಕೋಟಿ ರು. ನಷ್ಟದಲ್ಲಿರುವ ಕಂಪನಿ

ನವದೆಹಲಿ[ಏ.04]: ಖಾಸಗಿ ಕಂಪನಿಗಳ ಭಾರಿ ಪೈಪೋಟಿಯ ಕಾರಣ ತೀವ್ರ ನಷ್ಟದಲ್ಲಿ ಇರುವ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ ‘ಬಿಎಸ್‌ಎನ್‌ಎಲ್‌’ನ ಸುಮಾರು 54 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ಪ್ರಸ್ತಾವನೆಯೊಂದನ್ನು ಬಿಎಸ್‌ಎನ್‌ಎಲ್‌ ಮಂಡಳಿ ಅನುಮೋದಿಸಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಇತ್ತೀಚೆಗೆ ನಡೆದ ಬಿಎಸ್‌ಎನ್‌ಎಲ್‌ ಮಂಡಳಿ ಸಭೆಯು, ಕಂಪನಿಯ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ರಚಿಸಲಾಗಿದ್ದ ಅಹಮದಾಬಾದ್‌-ಐಐಎಂ ತಜ್ಞರ ಸಮಿತಿ ನೀಡಿದ 10ರ ಪೈಕಿ 3 ಪ್ರಸ್ತಾಪಗಳನ್ನು ಅನುಮೋದಿಸಿದೆ. ಅವುಗಳಲ್ಲಿ ನೌಕರರ ನಿವೃತ್ತಿ ವಯಸ್ಸನ್ನು ಈಗಿನ 60ರಿಂದ 58ಕ್ಕೆ ಇಳಿಕೆ ಹಾಗೂ ನೌಕರರ ಸ್ವಯಂ ನಿವೃತ್ತಿ ಎಂಬ 2 ಮಹತ್ವದ ಪ್ರಸ್ತಾಪಗಳು ಇವೆ ಎಂದು ಮೂಲಗಳನ್ನು ಉಲ್ಲೇಖಿಸಿ ಕೆಲ ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ.

ಆದರೆ ಲೋಕಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ದೂರಸಂಪರ್ಕ ಸಚಿವಾಲಯವು ಈ ಸಂಬಂಧ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಚುನಾವಣೆಯ ನಂತರ ದೂರಸಂಪರ್ಕ ಇಲಾಖೆಯು ಬಿಎಸ್‌ಎನ್‌ಎಲ್‌ ಮಂಡಳಿಯ ಅನುಮೋದನೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದ್ದು, ಆ ನಂತರ ಅಂತಿಮ ನಿರ್ಣಯ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಎಸ್‌ಎನ್‌ಎಲ್‌ ಒಟ್ಟು ಉದ್ಯೋಗಿಗಳ ಸಂಖ್ಯೆ 1,74,312 ಇದೆ. ನೌಕರರ ನಿವೃತ್ತಿ ವಯಸ್ಸನ್ನು 60ರಿಂದ 58ಕ್ಕೆ ಇಳಿಸಿದರೆ ಅದರಿಂದ ಬಿಎಸ್‌ಎನ್‌ಎಲ್‌ನಿಂದ 33,568 ಉದ್ಯೋಗಿಗಳು (ಶೇ.31) ನಿರ್ಗಮಿಸಲಿದ್ದಾರೆ. ಇದರಿಂದ ಕಂಪನಿಗೆ ಮುಂದಿನ 6 ವರ್ಷದಲ್ಲಿ 13,895 ಕೋಟಿ ರು. ಉಳಿತಾಯವಾಗಲಿದೆ.

ಇನ್ನು 50 ವರ್ಷಕ್ಕಿಂತ ಮೇಲ್ಪಟ್ಟನೌಕರರಿಗೆ ಸ್ವಯಂ ನಿವೃತ್ತಿ (ವಿಆರ್‌ಎಸ್‌) ಯೋಜನೆ ಜಾರಿಗೊಳಿಸಿದರೆ 1,671 ಕೋಟಿ ರು.ನಿಂದ 1921.24 ಕೋಟಿ ರು. ಉಳಿತಾಯವಾಗಲಿದೆ. ಆದರೆ ವಿಆರ್‌ಎಸ್‌ ಯೋಜನೆಯಿಂದ 13,049 ಕೋಟಿ ರು. ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಈ ಎರಡೂ ಪ್ರಸ್ತಾವನೆಗಳಿಂದ 54,451 ನೌಕರರ ಮೇಲೆ ಕತ್ತಿ ತೂಗುತ್ತಿದೆ.

PREV
click me!

Recommended Stories

ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ
ಮದುವೆ ಹತ್ತಿರ ಇರುವಾಗ್ಲೆ 25 ಲಕ್ಷ ಸ್ಯಾಲರಿ ಕೆಲ್ಸ ಬಿಟ್ಟು ಡೆಲಿವರಿ ಬಾಯ್ ಆದ, ಇಂಟರೆಸ್ಟಿಂಗ್ ಆಗಿದೆ ಕಾರಣ